Site icon Vistara News

Ujjain Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 3-4 ದಿನ ನಿದ್ರಿಸದೆ ತನಿಖೆ ನಡೆಸಿ ದಕ್ಷತೆ ಮೆರೆದ ಪೊಲೀಸರು

Ujjain Case

Took Extraordinary Effort To Crack Case, No Sleep For 3-4 Days: Police On Shocking Ujjain Rape

ಭೋಪಾಲ್:‌ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ (Ujjain Case) ಪೊಲೀಸರು ಭರತ್‌ ಸೋನಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಳಿಕ ರಕ್ತಸಿಕ್ತ ಬಾಲಕಿಯು ಏಳೆಂಟು ಕಿಲೋಮೀಟರ್‌ ನಡೆದು, ಮನೆಗೆ ತೆರಳಿ ಸಹಾಯಕ್ಕಾಗಿ ಅಂಗಲಾಚಿದ ವಿಡಿಯೊ ವೈರಲ್‌ ಆಗಿ, ಜನರಿಂದ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಸತತ ತನಿಖೆ ಬಳಿಕ ಪ್ರಕರಣವನ್ನು ಭೇದಿಸಿದ್ದಾರೆ.

ಪ್ರಕರಣದ ತನಿಖೆ ಕುರಿತು ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಪ್ರಕರಣ ಬಯಲಾಗುತ್ತಲೇ ಸುಮಾರು 30-35 ಅಧಿಕಾರಿಗಳ ತಂಡವು ಅವಿರತವಾಗಿ ಶ್ರಮಿಸಿದೆ. ಮೂರ್ನಾಲ್ಕು ದಿನ ನಿದ್ದೆಯೇ ಇಲ್ಲದೆ, ಸುಮಾರು 700 ಸಿಸಿಟಿವಿ ವಿಡಿಯೊಗಳನ್ನು ನೋಡಿ, ಗಲ್ಲಿ ಗಲ್ಲಿ ತಿರುಗಾಡಿ, ನೂರಾರು ಜನರನ್ನು ವಿಚಾರಣೆ ನಡೆಸಿದ್ದಾರೆ. ಇದಾದ ಬಳಿಕವೇ ಒಬ್ಬ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಗೆ ಪೊಲೀಸರು ರಕ್ತದಾನವನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ಮೆಚ್ಚುಗೆಯೂ ವ್ಯಕ್ತವಾಗಿದೆ.

ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್‌ನಗರದಲ್ಲಿ 12 ವರ್ಷದ ಬಾಲಕಿಯು ಸೆಪ್ಟೆಂಬರ್‌ 25ರಂದು ಅತ್ಯಾಚಾರಕ್ಕೊಳಗಾದ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲಿ, ಅರೆಬೆತ್ತಲೆ ಸ್ಥಿತಿಯಲ್ಲಿ ಮನೆ ಮನೆಯ ಮುಂದೆ ಹೋಗಿ ಸಹಾಯಕ್ಕಾಗಿ ಅಂಗಲಾಚಿದ್ದಳು. ಆದರೆ ಯಾರೂ ಸಹಾಯ ಮಾಡಿರಲಿಲ್ಲ. ಕೆಲವರು ದೂರ ಓಡಿಸಿದ್ದರು. ಅಂತಿಮವಾಗಿ ಆಶ್ರಮದ ಅರ್ಚಕರು ಅವಳನ್ನು ಟವೆಲ್‌ ಹೊದೆಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು.

ಮಗನನ್ನು ಗಲ್ಲಿಗೇರಿಸಿ ಎಂದ ಆರೋಪಿಯ ತಂದೆ

ಬಾಲಕಿ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಭರತ್‌ ಸೋನಿ ತಂದೆ ರಾಜು ಸೋನಿ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ. “ಇದೊಂದು ಹೀನ ಕೃತ್ಯ. ನಾನು ಮಗನನ್ನು ನೋಡಲು ಆಸ್ಪತ್ರೆಗೂ ಹೋಗಿಲ್ಲ. ಕೋರ್ಟ್‌ ಹಾಗೂ ಪೊಲೀಸ್‌ ಠಾಣೆಗೂ ಹೋಗುವುದಿಲ್ಲ. ನನ್ನ ಮಗ ನಿಜವಾಗಿಯೂ ಅಪರಾಧ ಎಸಗಿದ್ದರೆ, ಆತನನ್ನು ಗಲ್ಲಿಗೇರಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ujjain Case: ಅತ್ಯಾಚಾರಕ್ಕೊಳಗಾದ ಬಾಲಕಿಗೆ ನೆರವಾಗದವರ ಮೇಲೂ ಬೀಳಲಿದೆ ಕೇಸ್!‌

ಶಸ್ತ್ರ ಚಿಕಿತ್ಸೆ ಬಳಿಕ ಸಂತ್ರಸ್ತ ಬಾಲಕಿಯ ಆರೋಗ್ಯ ಈಗ ಸ್ಥಿರವಾಗಿದೆ. ಆದರೆ, ಈವರೆಗೂ ಆಕೆಯಿಂದ ಹೇಳಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಆಕೆ ಎಲ್ಲಿಂದ ಬಂದಿದ್ದು, ತಂದೆ-ತಾಯಿ ಅಥವಾ ಸಂಬಂಧಿಕರ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ, ಬಾಲಕಿಯೊಬ್ಬಳು ಕಾಣೆಯಾದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮತ್ತೊಂದು ಜಿಲ್ಲೆಯಲ್ಲಿ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ. ಕಾಣೆಯಾದ ಬಾಲಕಿಯೇ ಈಕೆಯೇ ಎಂಬದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಾಗಿದೆ. ಕಾಣೆಯಾದ ಬಾಲಕಿಗೆ ಅಜ್ಜಿ ಮತ್ತು ಸಹೋದರನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version