Site icon Vistara News

Train Accident : ಹಳಿ ದಾಟುವಾಗ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು

Train Accident

ಚಿಕ್ಕಬಳ್ಳಾಪುರ: ಹಳಿ ದಾಟುವಾಗ ಅಚಾನಕ್‌ ಆಗಿ ರೈಲಿಗೆ ಸಿಲುಕಿ (Train Accident) ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟಿದ್ದಾಳೆ. ಭವ್ಯ ಬಾಯಿ(17) ಮೃತ ದುರ್ದೈವಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಘಟನೆ ನಡೆದಿದೆ.

ಭವ್ಯಬಾಯಿ ಗೌರಿಬಿದನೂರು ನಗರದಲ್ಲಿರುವ ಎಸ್‌ಇಎ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಕಾಲೇಜು ಮುಗಿಸಿ ವಾಪಸ್‌ ಹಾಸ್ಟೆಲ್‌ಗೆ ಹೋಗುತ್ತಿದ್ದಾಗ, ರೈಲಿಗೆ ಸಿಲುಕಿದ್ದಾಳೆ. ಗಂಭೀರ ಗಾಯಗೊಂಡು ತೀವ್ರಸ್ರಾವವಾಗಿ ಮೃತಪಟ್ಟಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

ಡಿವೈಡರ್‌ಗೆ ಡಿಕ್ಕಿ ಹೊಡೆದು ನಜ್ಜು-ಗುಜ್ಜಾದ ಕಾರು

ಉಡುಪಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ನಜ್ಜುಗುಜ್ಜಾಗಿದೆ. ಉಡುಪಿ ಅಂಬಾಗಿಲು ವಿನಲ್ಲಿ ಘಟನೆ ನಡೆದಿದೆ. ಕಾರೊಂದು ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಅತೀ ವೇಗವಾಗಿ ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರಿನ ಇಂಜಿನ್ ಮಾರುದ್ದ ಹಾರಿ ಬಿದ್ದಿತ್ತು.

ಕಾರು ಡಿಕ್ಕಿಯಾಗಿ ಜಿಂಕೆ ಸಾವು

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಆನೆಕಾಡಿನ ರಾಷ್ಟ್ರೀಯ ಹೆದ್ದಾರಿ‌ 275ರ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಗಂಡು ಜಿಂಕೆಯೊಂದು ಮೃತಪಟ್ಟಿದೆ. ಅರಣ್ಯದ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟುವಾಗ ಕಾರಿಗೆ ಜಿಂಕೆ ಅಡ್ಡ ಬಂದಿದೆ.

ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆ ಮೃತಪಟ್ಟಿದೆ. ಸ್ಥಳಕ್ಕೆ ಆನೆಕಾಡು ಉಪ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕನಿಗೆ ತಲೆ ತಿರುಗಿ ಜಮೀನಿಗೆ ನುಗ್ಗಿದ ಬಸ್‌

ಬಸ್‌ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆ ಸುತ್ತು ಬಂದಿದ್ದು, ನಿಯಂತ್ರಣ ತಪ್ಪಿ ರಸ್ತೆಯಿಂದ ಜಮೀನಿಗೆ ಬಸ್‌ಗೆ ನುಗ್ಗಿದ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ.

ಸಾರಿಗೆ ಸಂಸ್ಥೆಯ ಬಸ್‌ವೊಂದು ಮುಂಡರಗಿ ಪಟ್ಟಣದಿಂದ ಹಮ್ಮಿಗಿ ಗ್ರಾಮಕ್ಕೆ ತೆರಳುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಗೆ ತಲೆ ಸುತ್ತು ಬಂದಿದೆ. ನೋಡನೋಡುತ್ತಿದ್ದಂತೆ ರಸ್ತೆ ಬದಿ ಜಮೀನಿಗೆ ಬಸ್‌ ನುಗ್ಗಿದೆ. ಅದೃಷ್ಟವಶಾತ್‌ ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version