ಚಂಡೀಗಢ: ಪಂಜಾಬ್‌ನ ಕಪುರ್ಥದಲ್ಲಿರುವ ಗುರುದ್ವಾರವೊಂದರಲ್ಲಿ (ಸಿಖ್ಖರ ಪವಿತ್ರ ಸ್ಥಳಗಳು ಅಥವಾ ಸಿಖ್ ಧರ್ಮಗುರುಗಳನ್ನು ಆರಾಧಿಸುವ ಸ್ಥಳಗಳು) ನಿಹಾಂಗ್ ಸಿಖ್ಖರ (Nihang Sikhs) ಗುಂಪುಗಳ ಮಧ್ಯೆಯೇ ಭಾರಿ ಗಲಾಟೆ ನಡೆದಿದೆ. ಇದೇ ವೇಳೆ ಪರಿಸ್ಥಿತಿಯನ್ನು ತಹಬಂದಿಗೆ ತೆರಳಿದ ಪೊಲೀಸರ ಮೇಲೆಯೇ ಗುಂಡು (Firing) ಹಾರಿಸಲಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೂ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಗುರುದ್ವಾರದ ಮಾಲೀಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರ ಎರಡು ಗುಂಪುಗಳ ಮಧ್ಯೆಯೇ ಗಲಾಟೆ ನಡೆದಿದೆ. ಮತ್ತೊಂದೆಡೆ, ಗುರುದ್ವಾರಕ್ಕಾಗಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಪೊಲೀಸರು ಈಗಾಗಲೇ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಗುರುದ್ವಾರ ಅಕಲ್ಪುರ ಬುಂಗಾ ಬಳಿ ನಿಹಾಂಗ್ ಸಿಖ್ಖರು ಗಲಾಟೆ ಆರಂಭಿಸಿದ್ದಾರೆ. ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ನಿಹಾಂಗ್ ಸಿಖ್ಖರನ್ನು ಹೊರಗೆ ಕಳುಹಿಸಲು ಮುಂದಾಗಿದ್ದಾರೆ. ಇದೇ ವೇಳೆ ಪೊಲೀಸರ ಮೇಲೆಯೇ ಉದ್ರಿಕ್ತ ಗುಂಪಿನ ಸದಸ್ಯರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
#WATCH | Sultanpur Lodhi, Punjab: A clash erupted between Nihang Singhs and Police officials at a Gurudwara Akal Bunga in Kapurthala. Further details awaited. pic.twitter.com/mLLbYRK7vJ
— ANI (@ANI) November 23, 2023
“ನಿಹಾಂಗ್ ಸಿಖ್ಖರ ಮಧ್ಯೆಯೇ ಗಲಾಟೆ ನಡೆದಿದೆ. ಇದೇ ವೇಳೆ ರಸ್ತೆ ಮಧ್ಯೆ ನಿಂತ ಪೊಲೀಸರ ಮೇಲೆಯೇ ನಿಹಾಂಗ್ ಸಿಖ್ಖರು ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಪೊಲೀಸ್ ಪೇದೆಯು ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುದ್ವಾರದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಕಪುರ್ಥಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಬೀರ್ ಸಿಂಗ್ ಹುಂಡಾಲ್ ಮಾಹಿತಿ ನೀಡಿದ್ದಾರೆ. ಗುರುದ್ವಾರದಲ್ಲಿ ಇನ್ನೂ 30ಕ್ಕೂ ಅಧಿಕ ನಿಹಾಂಗ್ ಸಿಖ್ಖರು ಇದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಗುರುದ್ವಾರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತ ಧರಿಸಿದ್ದ ಟಿ ಶರ್ಟ್ ನೋಡಿ ಕೆರಳಿದ ಗುರುದ್ವಾರ ಸಮಿತಿ; ಪೊಲೀಸರಿಗೆ ದೂರು
ನಿಹಾಂಗ್ ಸಿಖ್ಖರು ಎಂದರೆ ಯಾರು?
ನಿಹಾಂಗ್ ಸಿಖ್ಖರು ಸಿಖ್ ಧರ್ಮದ ‘ಯೋಧರ ಪಡೆʼಯಾಗಿದೆ. ನೀಲಿ ನಿಲುವಂಗಿ ಧರಿಸುವ, ಯಾವಾಗಲೂ ಖಡ್ಗವನ್ನು ಇಟ್ಟುಕೊಂಡಿರುವ, ಉಕ್ಕಿನ ಕೋಟ್ ಧರಿಸುವ ಇವರದ್ದು ಒಂದು ರೀತಿಯಲ್ಲಿ ಸಿಖ್ ತೀವ್ರವಾದಿಗಳ ಗುಂಪಾಗಿದೆ. ಫತೇಹ್‌ಸಿಂಗ್, ಗುರು ಹರ ಗೋವಿಂದ್ ಸ್ಥಾಪಿಸಿದ ‘ಅಕಾಲಿ’ ಪಂಗಡವು ಇವರ ಮೂಲವಾಗಿದೆ ಎಂದು ಇತಿಹಾಸಕಾರರಿಂದ ತಿಳಿದುಬಂದಿದೆ. ಇವರು ಇತ್ತೀಚಿನ ವರ್ಷಗಳಲ್ಲಿ ಗಲಾಟೆ, ಗಲಭೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. 2020ರಲ್ಲಿ ಪಟಿಯಾಲದಲ್ಲಿ ಕೊರೊನಾ ಲಾಕ್‌ಡೌನ್ ನಿಯಮ ಜಾರಿಗೆ ಮುಂದಾದಾಗ ಇದೇ ನಿಹಾಂಗ್ ಸಿಖ್ಖರು ಪೊಲೀಸ್ ಅಧಿಕಾರಿಯೊಬ್ಬರ ಕೈ ಕತ್ತರಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ