ಉದಯಪುರ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಟೈಲರ್‌ನ ಶಿರಚ್ಛೇದ ಮಾಡಿರುವ ಹಂತಕರು ಪ್ರಧಾನಿ ಮೋದಿಗೂ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ತನಿಖೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿಯನ್ನು (ಎನ್‌ಐಎ) ಕಳುಹಿಸಿಕೊಟ್ಟಿದೆ.
ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಿನಡಿ ಪ್ರಕರಣ ದಾಖಲಿಸಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎನ್‌ಐಎ ಈ ಪ್ರಕರಣದ ತನಿಖೆ ನಡೆಸುವುದು ಬಹುತೇಕ ಖಚಿತಪಟ್ಟಿದೆ. ಮಂಗಳವಾರ ರಾತ್ರಿಯೇ ಎನ್‌ಐಎಯ ಅಧಿಕಾರಿಗಳು ಉದಯಪುರಕ್ಕೆ ಆಗಮಿಸುತ್ತಿದ್ದು, ಸ್ಥಳೀಯ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಿದ್ದಾರೆ.
ಈ ನಡುವೆ ರಾಜಸ್ಥಾನದಾದ್ಯಂತ ಪ್ರತಿಭಟನೆ ಭುಗಿಲೆದ್ದಿದ್ದು, ಮುಂದಿನ ಒಂದು ತಿಂಗಳ ಕಾಲ ನಿಷೇಧಾಜ್ಞೆ (ಸೆಕ್ಷನ್ ೧೪೪) ಹೇರಲಾಗಿದೆ. ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ರಾಜ್ಯದಾದ್ಯಂತ ಸ್ಥಗಿತಗೊಳಿಸಲಾಗಿದೆ. ಮೊದಲಿಗೆ ಉದಯಪುರ ಜಿಲ್ಲೆಯಲ್ಲಿ ಮಾತ್ರ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವೂ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಈ ತಂಡದಲ್ಲಿದ್ದಾರೆ.
ಈ ಪ್ರಕರಣದ ಹಂತಕರು ಇನ್ನೂ ಪತ್ತೆಯಾಗಿಲ್ಲ. ಪ್ರಕಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಶಕ್ಕೆ ಪಡೆಯಲಾಗಿರುವ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಮೃತ ಕನ್ನಯ್ಯ ಲಾಲ್ (27) ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ ನಂತರ ಅವರಿಗೆ ಕೆಲ ಸಂಘಟನೆಗಳಿಂದ ಕೊಲೆ ಬೆದರಿಕೆಗಳು ಬಂದಿದ್ದವು ಎನ್ನಲಾಗುತ್ತಿದೆ.
ಇದನ್ನೂ ಓದಿ | ಶಿರಚ್ಛೇದ ಪ್ರಕರಣ | ಭುಗಿಲೆದ್ದ ಪ್ರತಿಭಟನೆ; ಉದಯಪುರದಲ್ಲಿ ಇಂಟರ್‌ನೆಟ್ ಸ್ಥಗಿತ, ಕರ್ಫ್ಯೂ ಜಾರಿ