ಉದಯಪುರ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಟೈಲರ್‌ನ ಶಿರಚ್ಛೇದ ಮಾಡಿರುವ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ರಾಜಸ್ಥಾನ ರಾಜ್ಯದಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ಉದಯಪುರದಲ್ಲಿ ಕರ್ಫ್ಯೂ ಹೇರಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಉದಯಪುರ ಜಿಲ್ಲೆಯಲ್ಲಿ ೨೪ ಗಂಟೆಗಳ ಕಾಲ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪೊಲೀಸರಿಗೆ ಸೂಚಿಸಿದ್ದಾರೆ. ಶಾಂತಿ ಕಾಪಾಡುವಂತೆ ಅವರು ಸಾರ್ವಜನಿಕರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.
ಮೃತನನ್ನು ಕನ್ನಯ್ಯ ಲಾಲ್ (27)ಎಂದು ಗುರುತಿಸಲಾಗಿದೆ. ಇವರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು.
ಇಬ್ಬರು ಮುಸ್ಲಿಂ ಯುವಕರು ಸೇರಿ ಟೈಲರ್ ಆಗಿರುವ ಕನ್ನಯ್ಯ ಲಾಲ್‌ನ ತಲೆ ಕತ್ತರಿಸಿದ್ದಾರೆ. ಹಾಡಹಗಲಲ್ಲೇ ರಕ್ತದೋಕುಳಿಯಾಗಿದೆ. ಈ ವಿಡಿಯೋ ಅಘಾತಕಾರಿಯಾಗಿದ್ದು, ಯಾರೂ ನೋಡಬೇಡಿ ಎಂದು ಪೊಲೀಸರೇ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹಂತಕರೇ ತಾವು ಶಿರಚ್ಛೇದ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಹಂತಕರು ತಲೆ ಮರೆಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಆರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ಪ್ಯೂ ಹೇರಲಾಗಿದೆ.
ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ| ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ