ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಂದೇ ಕುಟುಂಬದ ಮೂವರು ಲೈವ್ ವಿಡಿಯೊ ಮಾಡುತ್ತಲೇ ವಿಷ ಸೇವಿಸಿದ್ದಾರೆ. ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹೀಗೆ ತಾವು ವಿಷ ಸೇವನೆ ಮಾಡಲು ಕಾರಣ ಒಬ್ಬಳು ಪೋರ್ನ್ಸ್ಟಾರ್ ಎಂಬುದನ್ನು ಆ ಕುಟುಂಬ ಲೈವ್ ವಿಡಿಯೊದಲ್ಲಿ ಹೇಳಿಕೊಂಡಿದೆ. ‘ಮುಂಬಯಿ ಮೂಲದ ಅಶ್ಲೀಲ ಚಿತ್ರತಾರೆಯೊಬ್ಬಳು ತುಂಬ ತೊಂದರೆ ಕೊಡುತ್ತಿದ್ದಾಳೆ. ಸುಳ್ಳು ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾಳೆ’ ಎಂದು ಆ ಕುಟುಂಬ ಹೇಳಿಕೊಂಡಿದ್ದಾರೆ.
ಹೀಗೆ ಲೈವ್ ವಿಡಿಯೊದಲ್ಲಿ ವಿಷ ಸೇವನೆ ಮಾಡಿದ್ದು ಉಜ್ಜಯಿನಿ ಮೂಲದ ಬಟ್ಟೆ ವ್ಯಾಪಾರಿ ಅಶಿ ಖಾನ್ ಎಂಬುವರ ಕುಟುಂಬ. ಅಂದರೆ ಅವರು ತನ್ನ ಅಮ್ಮ ಮತ್ತು ಪತ್ನಿಯೊಂದಿಗೆ ಸೇರಿ ವಿಷ ಕುಡಿದಿದ್ದಾರೆ. ‘ನನ್ನ ಹೆಸರು ಅಶಿ ಖಾನ್.. ನಾನು ಈ ಹಿಂದೆ ಮುಂಬಯಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದೆ. ಆಗ ಹುಡುಗಿಯ ಪರಿಚಯವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅವಳು ನನ್ನ ಮೇಲೆ ಸುಳ್ಳು ರೇಪ್ ಕೇಸ್ ದಾಖಲಿಸಿದಳು. ಮುಂಬಯಿ ಪೊಲೀಸರಿಗೆ ದೂರು ಕೊಟ್ಟಳು. ಉಜ್ಜಯಿನಿಯಲ್ಲೂ ಕೇಸ್ ದಾಖಲು ಮಾಡಿದಳು. ನಾನು ಮುಂಬಯಿಯಿಂದ ಬಂದು ಉಜ್ಜಯಿನಿಯಲ್ಲಿ ಜೈಲುಪಾಲಾದೆ. ಅಲ್ಲಿಂದ ಹೊರಬಂದೆ. ಆಗಿನಿಂದಲೂ ನನ್ನನ್ನು ಅವಳು ಬೆದರಿಸುತ್ತಲೇ ಇದ್ದಾಳೆ’.
ನನ್ನ ಮದುವೆ ಸಮಯದಲ್ಲಿ ಕರೆ ಮಾಡಿ, ‘ನಮ್ಮಿಬ್ಬರಿಗೂ ಅನೈತಿಕ ಸಂಬಂಧ ಇದೆ ಎಂದು ಹೇಳುತ್ತೇನೆ’ ಎಂದು ಹೆದರಿಸಿ ಹಣ ಪಡೆದಳು. ಆಗಿನಿಂದಲೂ ಪದೇಪದೆ ಇದನ್ನೇ ಮಾಡುತ್ತಿದ್ದಾಳೆ. ಇನ್ನು ಹಣ ಕೊಡಲು ಸಾಧ್ಯವಿಲ್ಲ. ಮನೆ ಮರ್ಯಾದಿಯೂ ಹೋಗುತ್ತಿದೆ. ನಾವೆಲ್ಲ ಒಟ್ಟಾಗಿ ಸಾಯುತ್ತಿದ್ದೇವೆ’ ಎಂದು ಅಶಿ ಖಾನ್ ಹೇಳಿಕೊಂಡಿದ್ದಾರೆ. ಹಾಗೇ, ಅಲ್ಲೇ ಟೇಬಲ್ ಮೇಲೆ ಇದ್ದ ಮೂರು ಲೋಟದಲ್ಲಿ ವಿಷ ಬೆರೆಸಿಕೊಂಡು ಕುಡಿದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ