ಲಖನೌ: ಉತ್ತರ ಪ್ರದೇಶದಲ್ಲಿ ಮರಳು ಮಾಫಿಯಾದಲ್ಲಿ ತೊಡಗಿರುವವರನ್ನು ಮಣ್ಣಲ್ಲಿ ಮಣ್ಣು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಹೇಳಿದ ಬೆನ್ನಲ್ಲೇ ಪ್ರಯಾಗರಾಜ್‌ನಲ್ಲಿ ಎನ್‌ಕೌಂಟರ್ (Prayagraj Encounter) ನಡೆದಿದೆ. ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಆರೋಪಿ ಅರ್ಬಾಜ್ ಖಾನ್‌ನನ್ನು ಪ್ರಯಾಗರಾಜ್‌ನಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಯಾಗರಾಜ್‌ನ ಧೂಮನ್‌ಗಂಜ್ ಪ್ರದೇಶದಲ್ಲಿರುವ ನೆಹರು ಪಾರ್ಕ್‌ನಲ್ಲಿ ಎನ್‌ಕೌಂಟರ್ ಮಾಡಿದ್ದಾರೆ. ಅರ್ಬಾಜ್ ಖಾನ್ ಇರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ನೆಹರು ಪಾರ್ಕ್‌ನಲ್ಲಿ ಶೋಧ ನಡೆಸಿದ್ದಾರೆ. ಇದೇ ವೇಳೆ ಎನ್‌ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಬಿಎಸ್‌ಪಿ ಶಾಸಕ ರಾಜು ಪಾಲ್ ಅವರನ್ನು ೨೦೦೫ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಕಳೆದ ಫೆಬ್ರವರಿ ೨೪ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ಸಂಸದ ಆತಿಕ್ ಅಹ್ಮದ್‌ನನ್ನು ಬಂಧಿಸಿದ್ದು, ಸದ್ಯ ಅವರು ಜೈಲಿನಲ್ಲಿದ್ದಾರೆ. ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾದ ಕಾರಣ ಅವರನ್ನು ಹತ್ಯೆ ಮಾಡದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಆದರೆ, ಇದರ ಬೆನ್ನಲ್ಲೇ ಪೊಲೀಸರು ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್‌ನನ್ನು ಎನ್‌ಕೌಂಟರ್ ಮಾಡಿದ್ದಾರೆ. ಆತಿಕ್ ಅಹ್ಮದ್‌ಗೆ ಅರ್ಬಾಜ್ ಖಾನ್ ಆಪ್ತ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Etah Fake Encounter | ನಕಲಿ ಎನ್‌ಕೌಂಟರ್ ಪ್ರಕರಣ, 9 ಪೊಲೀಸರು ದೋಷಿ, ಇವರಲ್ಲಿ ಐವರಿಗೆ ಜೀವಾವಧಿ ಶಿಕ್ಷೆ