ದಾವಣಗೆರೆ: ಅದೊಂದು ನಾಲ್ಕು ವರ್ಷದ ಹಿಂದಿನ ಸಾವಿನ ಕೇಸ್. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಸಮೀಪ ಮಹಿಳೆಯೊಬ್ಬರ ಶವ (Women body Found) ಪತ್ತೆಯಾಗಿತ್ತು. ಆದರೆ, ಅದು ಯಾರ ಶವ ಎಂಬುದು ಮಾತ್ರ ಗೊತ್ತೇ ಆಗಿರಲಿಲ್ಲ. ಈ ಬಗ್ಗೆ ಪೊಲೀಸರು ಪ್ರಕಟಣೆಯನ್ನೂ ಹೊರಡಿಸಿದ್ದರು. ಆದರೆ, ಯಾರೂ ಸಹ ಗುರುತು ಹಿಡಿದು ಬಂದಿರಲಿಲ್ಲ. ಹೀಗಾಗಿ ಅನಾಮಧೇಯ ವ್ಯಕ್ತಿ ಶವ (Unidentified body) ಎಂದು ನಿರ್ಣಯಿಸಿ ಪೊಲೀಸರು ಶವವನ್ನು ಹೂತು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಆದರೆ, ಈಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಡಿಎನ್‌ಎ ಪರೀಕ್ಷೆಗಾಗಿ ಹೂತಿಡಲಾಗಿದ್ದ ಶವವನ್ನು ಹೊರಕ್ಕೆ ತೆಗೆಯಲಾಗಿದೆ.
ಇದಕ್ಕೆ ಕಾರಣ ನ್ಯಾಯಾಲಯದ ಆದೇಶವಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹೂತ ಶವವನ್ನು ಪೊಲೀಸರು ಹೊರಕ್ಕೆ ತೆಗೆದಿದ್ದಾರೆ. ಈಗ ಡಿಎನ್‌ಎ ಪರೀಕ್ಷೆ ಬಳಿಕ ಆ ಮಹಿಳೆಯೇ ಹೌದಾ? ಇಲ್ಲವಾ ಎಂಬುದು ತಿಳಿಯಲಿದೆ. ಬಳಿಕ ಈ ಕೇಸನ್ನು ಆತ್ಮಹತ್ಯೆಯೋ? ಕೊಲೆಯೋ ಎಂಬುದರ ಬಗ್ಗೆ ತನಿಖೆಯನ್ನು ನಡೆಸಬೇಕಿದೆ.
ಸೂಳೆಕೆರೆ ಸಮೀಪ ಸಿಕ್ಕಿದ್ದ ಮಹಿಳೆ ಶವ
ಸುಮಾರು 40 ವರ್ಷ ವಯಸ್ಸಿನ ಮಹಿಳೆಯ ಶವವು 2020ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಸಮೀಪ ಸಿಕ್ಕಿತ್ತು. ಇದು ಭದ್ರಾನಾಲೆ ಮುಖಾಂತರ ಸೂಳೆಕೆರೆ ತಲುಪಿದೆ ಎಂದು ಅಂದಾಜಿಸಲಾಗಿದೆ. ಆಗ ಅರೆಬರೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅಂದು ಗುರುತಿಸಲಾಗದಂತಹ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಪೊಲೀಸರು ಸೂಳೆಕೆರೆ ಬದಿಯಲ್ಲಿ ಶವಸಂಸ್ಕಾರವನ್ನು ನೆರವೇರಿಸಿದ್ದರು.
ಮಹಿಳೆ ನಾಪತ್ತೆ ಪ್ರಕರಣ ದಾಖಲಾಗಿತ್ತು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರತೋಳಲು ಕೈಮರದ ನಾಗರತ್ನಮ್ಮ ಎಂಬುವವರು ಕಾಣೆಯಾದ ಬಗ್ಗೆ 2020ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದರೂ ಸಹ ಎಲ್ಲಿಯೂ ಸುಳಿವು ಸಿಕ್ಕಿರಲಿಲ್ಲ. ಆದರೆ, ಪ್ರಕರಣವನ್ನು ಕೈಬಿಡದ ಪೊಲೀಸರು ಹುಡುಕಾಟವನ್ನು ನಡೆಸಿದ್ದರು. ಬಳಿಕ ಸೂಳೆಕೆರೆಯಲ್ಲಿ ಪತ್ತೆಯಾದ ಅನಾಮಧೇಯ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅದರ ಚಹರೆಯನ್ನು ಪರಿಶೀಲನೆ ನಡೆಸಿದಾಗ ನಾಗರತ್ನಮ್ಮ ಅವರಿಗೂ ಆ ಶವಕ್ಕೂ ಬಹಳ ಸಾಮ್ಯತೆ ಕಂಡು ಬಂದಿದೆ.
ಇದನ್ನೂ ಓದಿ: Karnataka Weather: ಫೆಬ್ರವರಿ ಮೊದಲ ವಾರ ಚಳಿ ಹೇಗೆ? ಹವಾಮಾನ ತಜ್ಞರು ಹೇಳೋದೇನು?
ಎಫ್‌ಎಸ್‌ಎಲ್ ತಜ್ಞರ ಭೇಟಿ
ಹೋಲಿಕೆ ಶಂಕೆ ಹಿನ್ನೆಲೆಯಲ್ಲಿ ಚನ್ನಗಿರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈಗ ನ್ಯಾಯಾಲಯವು ಶವವನ್ನು ಹೊರಕ್ಕೆ ತೆಗೆದು ಡಿಎನ್‌ಎ ಪರೀಕ್ಷೆಯನ್ನು ನಡೆಸುವಂತೆ ಆದೇಶಿಸಿದೆ. ಆದೇಶದ ಹಿನ್ನೆಲೆಯಲ್ಲಿ ದಾವಣಗೆರೆ ಎಫ್‌ಎಸ್‌ಎಲ್ ತಜ್ಞರು ಮತ್ತು ಚಿಗಟೇರಿ ಆಸ್ಪತ್ರೆಯ ವೈದ್ಯರ ಸಮಕ್ಷಮದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಶುಕ್ರವಾರ ಶವವನ್ನು ಹೊರತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗ ಡಿಎನ್ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ.