ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶವೊಂದು ಬಂದಿದ್ದು, ಇದಾದ ಬಳಿಕ ಮುಖ್ಯಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಲಖನೌನ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್‌ಆ್ಯಪ್‌ಗೆ ಬೆದರಿಕೆ ಸಂದೇಶ ಬಂದಿದೆ. ಇದಾದ ಕೂಡಲೇ ಇಡೀ ಪೊಲೀಸ್ ವ್ಯವಸ್ಥೆ ಎದ್ದು ನಿಂತಿದೆ. ಒಂದು ಕಡೆ ಭದ್ರತೆಯ ಹೆಚ್ಚಳ ಮಾಡಲಾಗಿದೆ. ಇನ್ನೊಂದು ಕಡೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಿಜವೆಂದರೆ, ಈ ಸಂದೇಶ ಬಂದಿರುವುದು ಆಗಸ್ಟ್ ೨ರಂದು. ಅದರಲ್ಲಿ ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಹೀಗಾಗಿ ಆವತ್ತಿನಿಂದಲೇ ಸಿಎಂ ಭದ್ರತೆ ಮೇಲೆ ಹೆಚ್ಚು ನಿಗಾ ಇಡಲಾಗಿತ್ತು. ಈಗಲೂ ಅದು ಮುಂದುವರಿದಿದೆ. ಆದರೆ, ಈ ಮಾಹಿತಿಯನ್ನು ಸೋಮವಾರವಷ್ಟೇ ಬಹಿರಂಗಪಡಿಸಲಾಗಿದೆ.
ಲಖನೌನ ಸುಶಾಂತ್ ಗಾಲ್ಫ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯೋಗಿ ಆದಿತ್ಯನಾಥ್ ಅವರಿಗೆ ೨೦೧೭ರಿಂದಲೇ ಝಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗುತ್ತದೆ. ಜತೆಗೆ ಆಗಾಗ ಅವರ ಭದ್ರತೆಯನ್ನು ಅವಲೋಕಿಸಲಾಗುತ್ತಿದೆ. ಕಳೆದ ಜೂನ್‌ನಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರು ಎಂಬ ಕಾರಣಕ್ಕೆ ಕೆಲವು ಪೊಲೀಸರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.