Site icon Vistara News

Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

mobile blast woman death

ಕಾನ್ಪುರ: ಹೆಲ್ಮೆಟ್ (helmet) ಇಲ್ಲದೇ ಇಯರ್‌ಫೋನ್‌ (Earphone) ಹಾಕಿಕೊಂಡು ಸ್ಕೂಟರ್‌ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಮೊಬೈಲ್‌ ಸ್ಫೋಟಗೊಂಡ (Mobile Blast) ಪರಿಣಾಮ ತಬ್ಬಿಬ್ಬಾಗಿ ಬೈಕ್‌ ಮೇಲಿನ ನಿಯಂತ್ರಣ ಕಳೆದುಕೊಂಡು (bike Accident) ಡಿವೈಡರ್‌ಗೆ ಗುದ್ದಿ ಮೃತ (woman death) ಪಟ್ಟಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದ್ದರಿಂದ ತಬ್ಬಿಬ್ಬಾದ ಆಕೆ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಬೈಕ್‌ ರಸ್ತೆಯಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಮಹಿಳೆಯ ತಲೆಯ ಮೇಲೆ ಬೈಕ್ ಬಿದ್ದಿದ್ದು, ತೀವ್ರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಬದುಕುಳಿಯಲಿಲ್ಲ. ಅಪಘಾತದ ವೇಳೆ ಮಹಿಳೆ ಹೆಲ್ಮೆಟ್ ಧರಿಸಿರಲಿಲ್ಲ.

ಮಹಿಳೆ ನೆಲಕ್ಕುರುಳುತ್ತಿದ್ದಂತೆ ಸ್ಥಳದ ಸುತ್ತ ಜನ ಜಮಾಯಿಸಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಪಘಾತದಲ್ಲಿ ಉಂಟಾದ ತೀವ್ರ ರಕ್ತಸ್ರಾವದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆಗೆ ಮಹಿಳೆ ತನ್ನ ಸ್ಕೂಟರ್‌ನಲ್ಲಿ ಕಾನ್ಪುರ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಫರೂಕಾಬಾದ್ ಜಿಲ್ಲೆಯ ನೆಹ್ರಾರಿಯಾ ಗ್ರಾಮದ ನಿವಾಸಿ ಪೂಜಾ (28) ಎಂದು ಗುರುತಿಸಲಾಗಿದೆ. ಕಾನ್ಪುರ ರೈಲು ನಿಲ್ದಾಣದಿಂದ ಮುಂಬೈಗೆ ರೈಲು ಹಿಡಿಯಲು ಮಹಿಳೆ ತೆರಳುತ್ತಿದ್ದರು.

ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನ್ಪುರ್ ಗ್ರಾಮದ ಬಳಿ ಕಾನ್ಪುರ-ಅಲಿಘರ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಮಹಿಳೆ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ಆಕೆಯ ಕಿವಿಯಲ್ಲಿ ಇಯರ್ ಫೋನ್ ಇತ್ತು. ಜೊತೆಗೆ ಆಕೆ ಸ್ಕೂಟರ್ ಅನ್ನು ವೇಗದಲ್ಲಿ ಓಡಿಸುತ್ತಿದ್ದರು ಎಂದು ಗೊತ್ತಾಗಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್‌ ಬಳಸದಂತೆ ಪದೇ ಪದೆ ಸೂಚನೆ ನೀಡುತ್ತಿದ್ದರೂ ಅದನ್ನು ಬಹಳ ಮಂದಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಅಪಘಾತಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಮೊಬೈಲ್‌ ಕಾರಣದಿಂದ ಆಗುತ್ತಿವೆ ಎಂದು ವರದಿಗಳು ಸೂಚಿಸಿವೆ.

ಇದನ್ನೂ ಓದಿ: Road Accident : ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ ಆಂಬ್ಯುಲೆನ್ಸ್‌ ಚಾಲಕ; ಸರಣಿ ಅಪಘಾತಕ್ಕೆ ಕಾರುಗಳು ಜಖಂ, ಗರ್ಭಿಣಿ ಸೇಫ್

Exit mobile version