Site icon Vistara News

ಕಂಡಕ್ಟರ್‌ಗೆ ಚಾಕು ಇರಿದು ‘ಪ್ರವಾದಿ ಮೊಹಮ್ಮದ್‌’ಗೆ ಅವಮಾನ ಎಂದ ಮುಸ್ಲಿಂ ಯುವಕನಿಗೆ ಗುಂಡೇಟು!

Accused Lareb Hashmi

Uttar Pradesh man hacks bus conductor with cleaver for insulting Prophet, arrested

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮುಸ್ಲಿಂ ಯುವಕನೊಬ್ಬ ಚಲಿಸುತ್ತಿದ್ದ ಬಸ್‌ನಲ್ಲಿಯೇ ಕಂಡಕ್ಟರ್‌ಗೆ ಚಾಕು (Cleaver) ಇರಿದ ಘಟನೆ ನಡೆದಿದೆ. ಬಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಬಸ್‌ ಕಂಡಕ್ಟರ್‌ ಹಾಗೂ 20 ವರ್ಷದ ಯುವಕನ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ಯುವಕ ಲಾರೆಬ್‌ ಹಶ್ಮಿ (Lareb Hashmi) ಎಂಬಾತನು ಕಂಡಕ್ಟರ್‌ಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಸದ್ಯ ಕಂಡಕ್ಟರ್‌ ಹಾಗೂ ಲಾರೆಬ್‌ ಹಶ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೊ ಪೋಸ್ಟ್‌ ಮಾಡಿದ ಯುವಕ

ಹರಿಕೇಶ್‌ ವಿಶ್ವಕರ್ಮ (24) ಎಂಬ ಕಂಡಕ್ಟರ್‌ಗೆ ಬಸ್‌ನಲ್ಲಿಯೇ ಚಾಕು ಇರಿದ ವ್ಯಕ್ತಿಯು ಕಾಲೇಜು ಕ್ಯಾಂಪಸ್‌ಗೆ ಓಡಿ ಹೋಗಿದ್ದಾನೆ. ಓಡಿ ಹೋಗುತ್ತಲೇ ವಿಡಿಯೊ ರೆಕಾರ್ಡ್‌ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆತ, “ಪ್ರವಾದಿ ಮೊಹಮ್ಮದ್‌ ಅವರಿಗೆ ಅವಮಾನ ಮಾಡಿದ ಕಾರಣ ಬಸ್‌ ಕಂಡಕ್ಟರ್‌ಗೆ ಚಾಕು ಇರಿದಿದ್ದೇನೆ” ಎಂದಿದ್ದಾನೆ. ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ಯುವಕನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇದರ ಕುರಿತು ಬಸ್‌ ಚಾಲಕ ಪ್ರತಿಕ್ರಿಯಿಸಿದ್ದು, “ಬಸ್‌ ತುಂಬ ಜನ ಇದ್ದರು. ಇದೇ ವೇಳೆ ಯುವಕನು ಬಸ್‌ ಕಂಡಕ್ಟರ್‌ಗೆ ಚಾಕು ಇರಿದು ಪರಾರಿಯಾಗಿದ್ದಾನೆ” ಎಂದಿದ್ದಾರೆ.

“ಮುಸ್ಲಿಮರ ಕುರಿತು ಬಸ್‌ ಕಂಡಕ್ಟರ್‌ ಅವಹೇಳನಕಾರಿಯಾಗಿ ಮಾತನಾಡಿದ. ಇದೇ ಕಾರಣಕ್ಕೆ ನಾನು ಅವನಿಗೆ ಚಾಕು ಇರಿದು ಹಲ್ಲೆ ನಡೆಸಿದೆ. ಅವನು ಶೀಘ್ರದಲ್ಲಿಯೇ ಸತ್ತು ಹೋಗುತ್ತಾನೆ. ಭಾರತದಿಂದ ಫ್ರಾನ್ಸ್‌ವರೆಗೆ, ಯಾರು ಪ್ರವಾದಿ ಮೊಹಮ್ಮದರಿಗೆ ಅವಮಾನ ಮಾಡುತ್ತಾರೋ, ಅವರನ್ನು ಕೊಂದು ಹಾಕುತ್ತೇನೆ” ಎಂದು ಲಾರೆಬ್‌ ಹಶ್ಮಿ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾನೆ. ಯುವಕನ ಕೃತ್ಯದ ಕುರಿತು ಈಗ ಪರ-ವಿರೋಧ ಚರ್ಚೆಯಾಗುತ್ತಿವೆ. ಟಿಕೆಟ್‌ ವಿಚಾರಕ್ಕೆ ಅಷ್ಟೇ ಜಗಳ ನಡೆದಿದೆ ಎಂಬುದಾಗಿ ಕೆಲ ಪ್ರಯಾಣಿಕರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮಮಂದಿರಕ್ಕೆ ಹೋದವರು ಮುಸ್ಲಿಮರಾಗಿ ಬರುತ್ತಾರೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ; ಬೆಂಡೆತ್ತಿದ ಜನ

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್‌ ಡಿಸಿಪಿ ಅಭಿನವ್‌ ತ್ಯಾಗಿ ಮಾಹಿತಿ ನೀಡಿದ್ದಾರೆ. “ಲಾರೆಬ್‌ ಹಶ್ಮಿ ಯು ಹಾಜಿಗಂಜ್‌ ನಿವಾಸಿಯಾಗಿದ್ದಾನೆ. ಈತನು ಯುನೈಟೆಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ ವಿದ್ಯಾರ್ಥಿಯಾಗಿದ್ದಾನೆ. ಈತನು ಹಲ್ಲೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಪೊಲೀಸರು ಕಾಲೇಜಿಗೆ ತೆರಳಿದ್ದಾರೆ. ಇದೇ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದು, ಎನ್‌ಕೌಂಟರ್‌ ಮಾಡಿ ಆತನನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ. ಲಾರೆಬ್‌ ಹಶ್ಮಿಯ ತಂದೆ ಮೊಹಮ್ಮದ್‌ ಯೂನಸ್‌ ಅವರು ಪೌಲ್ಟ್ರಿ ಫಾರ್ಮ್‌ ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮೂಲಕ ತಿಳಿಸಿ

Exit mobile version