ಡೆಹ್ರಾಡೂನ್: ಉತ್ತರಾಖಂಡದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಒಡೆತನದ ವನತಾರಾ ರೆಸಾರ್ಟ್‌ನ ರಿಸಪ್ಶನಿಸ್ಟ್ ಅಂಕಿತಾ ಭಂಡಾರಿ ಕೊಲೆ (Receptionist Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವುಗಳು ಸಿಗುತ್ತಿವೆ. ರೆಸಾರ್ಟ್‌ಗೆ ಆಗಮಿಸಿದ ಅತಿಥಿಗಳಿಗೆ ೧೯ ವರ್ಷದ ರಿಸಪ್ಶನಿಸ್ಟ್ “ಆ ವಿಶೇಷ ಸೇವೆ” ನೀಡದ ಕಾರಣದಿಂದಲೇ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ, ರೆಸಾರ್ಟ್ ಸಿಬ್ಬಂದಿಯು ಯುವತಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತು ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.
ಅಲ್ಲಿಗೆ, ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣದಿಂದಲೇ ಅಂಕಿತಾಳ ಹತ್ಯೆಯಾಗಿರಬಹುದು ಎಂಬ ಶಂಕೆಗೆ ಮತ್ತಷ್ಟು ಪುಷ್ಟಿ ಬಂದಂತಾಗಿದೆ. “ರೆಸಾರ್ಟ್‌ಗೆ ಆಗಮಿಸಿದ ಅತಿಥಿಗಳಿಗೆ ವಿಶೇಷ ಸೇವೆ ಒದಗಿಸು ಎಂದು ಪುಲ್ಕಿತ್ ಆರ್ಯ ಒತ್ತಾಯ ಮಾಡಿದ್ದಾನೆ. ಇದಕ್ಕೆ ಯುವತಿಯು ಒಪ್ಪದ ಕಾರಣ ಆರ್ಯ ಹಾಗೂ ರೆಸಾರ್ಟ್‌ನ ಇಬ್ಬರು ಸಿಬ್ಬಂದಿ ಸೇರಿ ಹತ್ಯೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಪುಲ್ಕಿತ್ ಆರ್ಯ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಕ್ರಿಯೆಗೆ ಸಹಕರಿಸದ ಕಾರಣ ಯುವತಿಯನ್ನು ಹತ್ಯೆ ಮಾಡಲಾಗಿದೆ ಎಂದು ಯುವತಿಯ ಗೆಳತಿಯೊಬ್ಬರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು “ವಿಶೇಷ ಸೇವೆ” ಎಂದು ಹೇಳುವ ಮೂಲಕ ಹೊಸ ಆಯಾಮ ನೀಡಿದ್ದಾರೆ. ಪ್ರಕರಣ ಸುದ್ದಿಯಾಗುತ್ತಲೇ ಬಿಜೆಪಿಯಿಂದ ಹರಿದ್ವಾರ ನಾಯಕ ವಿನೋದ್ ಆರ್ಯ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ರೆಸಾರ್ಟ್‌ಗೆ ಬೆಂಕಿ
ಯುವತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರೆಸಾರ್ಟ್‌ಗೆ ಬೆಂಕಿ ಹಚ್ಚಿದ್ದಾರೆ. ಹಾಗೆಯೇ, ಪೊಲೀಸರು ಬಂಧಿಸುವ ಮುನ್ನವೇ ಬಿಜೆಪಿ ಪುಲ್ಕಿತ್ ಆರ್ಯ ಸೇರಿ ಎಲ್ಲ ಆರೋಪಿಗಳಿಗೂ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಪ್ರತಿಪಕ್ಷಗಳು ಘಟನೆ ಖಂಡಿಸಿ ಭಾರಿ ಪ್ರತಿಭಟನೆ ನಡೆಸಿವೆ.
ಇದನ್ನೂ ಓದಿ | 19 ವರ್ಷದ ರಿಸಪ್ಷನಿಸ್ಟ್ ಹತ್ಯೆ; ಉತ್ತರಾಖಂಡ ಬಿಜೆಪಿ ಮಾಜಿ ಸಚಿವನ ಪುತ್ರನ ರೆಸಾರ್ಟ್ ಸಂಪೂರ್ಣ ನೆಲಸಮ