ವಾರಾಣಸಿ: ಹದಿನಾರು ವರ್ಷಗಳ ಹಿಂದೆ ವಾರಾಣಸಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ (varanasi serial bomb blast) ಪ್ರಧಾನ ಆರೋಪಿ ವಲಿಯುಲ್ಲಾನಿಗೆ ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. 55 ವರ್ಷದ ವಲಿಯುಲ್ಲಾನನ್ನು ಶನಿವಾರ ಕೋರ್ಟ್ ಅಪರಾಧಿ ಎಂದು ಗುರುತಿಸಿತ್ತು. ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಕೊಲೆ, ಕೊಲೆ ಯತ್ನ ಮತ್ತು ಸ್ಫೋಟಕಗಳ ನಿಯಂತ್ರಣ ಕಾಯಿದೆಯಡಿ ಶಿಕ್ಷೆಯನ್ನು ವಿಧಿಸಲಾಗಿದೆ.
2006ರ ಮಾರ್ಚ್ 7ರಂದು ವಾರಾಣಸಿಯ ಬನಾರಸ್ ಹಿಂದೂ ವಿವಿಯ ಸಮೀಪದ ಸಂಕಟ ಮೋಚನಾ ದೇವಸ್ಥಾನ ಮತ್ತು ವಾರಾಣಸಿಯ ಕಂಟೋನ್ಮೆಂಟ್ ಸ್ಟೇಷನ್ ಬಳಿಯಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಘಟನೆಯಲ್ಲಿ 28 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಆರೋಪಿಗೆ ಸಂಕಟ ಮೋಚನಾ ದೇವಸ್ಥಾನ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಸ್ಪೋಟಕಗಳ ನಿಯಂತ್ರಣ ಕಾಯಿದೆಯಡಿ ಜೀವಾವಧಿ ಶಿಕ್ಷೆ ಕೊಡಲಾಗಿದೆ. ಜತೆಗೆ 2.65 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಈ ತೀರ್ಪನ್ನು ನೀಡಿದ್ದಾರೆ.
ವಲಿಯುಲ್ಲಾ 2006ರ ಮಾರ್ಚ್ ನಾಲ್ಕರಂದು ವಾರಾಣಸಿಯಲ್ಲಿ ತಿರುಗಾಡುತ್ತಿದ್ದುದನ್ನು ಕಂಡಿದ್ದಾಗಿ ತಾರಕೇಶ್ವರ ನಾಥ್ ಮತ್ತು ಕಿಶನ್ ಸೋಂಕರ್ ಎಂಬ ಸಾಕ್ಷಿಗಳು ತಿಳಿಸಿದ್ದರು. ಅದೇ ವೇಳೆ ಅಪರಾಧಿಯು ಮಾರ್ಚ್ 7ರಂದು ಸಂಕಟ ಮೋಚನಾ ದೇವಳದ ಸಮೀಪ ಒಂದು ಚೀಲ ಹಿಡಿದುಕೊಂಡು ಅಡ್ಡಾಡುತ್ತಿದ್ದುದನ್ನು ಕಂಡಿದ್ದಾಗಿ ಸೀತಾರಾಮ್ ಮತ್ತು ಮೋಹನ್ ಎಂಬಿಬ್ಬರು ಸಾಕ್ಷ್ಯ ಹೇಳಿದ್ದರು. ಅವನು ತಿರುಗಾಡಿದ್ದ ಒಂದೂವರೆ ಗಂಟೆ ಬಳಿಕ ಸ್ಪೋಟ ನಡೆದಿತ್ತು. ಸಾಕ್ಷಿಗಳು ಆರೋಪಿಯನ್ನು ಕೋರ್ಟ್‌ನಲ್ಲಿ ನಿಖರವಾಗಿ ಗುರುತಿಸಿದ ಬಳಿಕ ಕೋರ್ಟ್ ಶಿಕ್ಷೆಯನ್ನು ವಿಧಿಸಿದೆ.
ಐವರು ದುಷ್ಟರ ಕೆಲಸ
ಸರಣಿ ಸ್ಫೋಟದ ಹಿಂದೆ ವಲಿಯುಲ್ಲಾ ಅಲ್ಲದೆ, ಇನ್ನೂ ನಾಲ್ವರಿದ್ದಾರೆ. ಬಾಂಗ್ಲಾದೇಶ ಮೂಲದ ಝಕಾರಿಯಾ, ಮುಕ್ತಾಕೀಮ್ ಮತ್ತು ಬಶೀರ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಐದನೇ ಆರೋಪಿ ಮೊಹಮ್ಮದ್ ಜುಬೇರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ದಾಟಲು ಯತ್ನಿಸಿದಾಗ (ಮೇ 6, 2006) ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.
55 ವರ್ಷದ ವಲಿಯುಲ್ಲಾ ಅಲಹಾಬಾದ್‌ನ ಫೂಲ್‌ಪುರ ಗ್ರಾಮದವನಾಗಿದ್ದು, ಸರಣಿ ಸ್ಫೋಟದಲ್ಲಿ ಭಾಗಿಯಾದ ಆರೋಪಿಗಳಿಗೆ ಆಶ್ರಯ ನೀಡಿದ್ದ. ಇತರ ಆರೋಪಿಗಳು ಮದರಸಾದಲ್ಲಿ ಕಲಿಯುತ್ತಿದ್ದರೆ, ವಲಿಯುಲ್ಲಾ ಮಸೀದಿಯೊಂದರ ಇಮಾಮ್ ಆಗಿದ್ದ. ದುಷ್ಕೃತ್ಯ ನಡೆದ ಸ್ವಲ್ಪ ಸಮಯದ ಬಳಿಕ ಈತನ ಬಂಧನವಾಗಿತ್ತು.
ಇದನ್ನೂ ಓದಿ|Underworld: ಭಯೋತ್ಪಾದನೆ ಚಟುವಟಿಕೆಗೆ ಚೋಟಾ ಶಕೀಲ್ ಫಂಡಿಂಗ್