ಚಂಡೀಗಢ: ಖಾಸಗಿ ವಲಯದ ಚಂಡೀಗಢ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಸುಮಾರು ೬೦ ಹುಡುಗಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೊ ತೆಗೆದು ಲೀಕ್ ಮಾಡಲಾಗಿದ್ದು, ಘಟನೆಯನ್ನು ಖಂಡಿಸಿ ಶನಿವಾರ ನೂರಾರು ಮಂದಿ ವ್ಯಾಪಕ ಪ್ರತಿಭಟನೆ (Punjab protest) ನಡೆಸಿದರು.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಲುಪಿದ್ದು, ಮೊಹಾಲಿ ಮೂಲದ ಒಬ್ಬ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ. ಆಕೆ ಈ ವಿಡಿಯೊಗಳನ್ನು ತೆಗೆದು ತನ್ನ ಬಾಯ್ ಫ್ರೆಂಡ್‌ಗೆ ಕಳಿಸಿದ್ದಳು. ಆತ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ. ಆರೋಪಿತ ವಿದ್ಯಾರ್ಥಿನಿ ಎಂಬಿಎ ಓದುತ್ತಿದ್ದು, ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 354ಸಿ ಮತ್ತು ಐಟಿ ಕಾಯಿದೆಯ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕೆಲ ವರದಿಗಳ ಪ್ರಕಾರ ಆನ್‌ಲೈನ್‌ನಲ್ಲಿ ವೀಡಿಯೊ ಲೀಕ್ ಆದ ಬಳಿಕ ಅದರಲ್ಲಿದ್ದ ಕೆಲ ಹುಡುಗಿಯರು ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಹರ್‌ಜ್ಯೋತ್ ಸಿಂಗ್ ಮನವಿ ಮಾಡಿದ್ದಾರೆ. ಇದು ಸೂಕ್ಷ್ಮ ಪ್ರಕರಣವಾಗಿದ್ದು, ನಮ್ಮ ಸೋದರಿಯರು ಮತ್ತು ಹೆಣ್ಣು ಮಕ್ಕಳ ಘನತೆಯನ್ನು ಕಾಪಾಡಲಾಗುವುದು. ಮಾಧ್ಯಮಗಳೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ವಿಡಿಯೊ ತೆಗೆದ ಹುಡುಗಿ ತಪ್ಪೊಪ್ಪಿಗೆ ನೀಡಿರುವ ಮತ್ತೊಂದು ವಿಡಿಯೊ ಕೂಡ ಹರಿದಾಡುತ್ತಿದೆ. ಕೆಲವರ ಪ್ರಕಾರ, ಆರೋಪಿತ ಹುಡುಗಿ ಇತರ ವಿದ್ಯಾರ್ಥಿನಿಯರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಳು.