ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಜಾಯ್‌ನಗರದಲ್ಲಿ ತೃಣಮೂಲ ಕಾಂಗ್ರೆಸ್ (Trinamool congress) ನಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ (murder case) ಮಾಡಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಎಂದು ಭಾವಿಸಲಾದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲೆ ಮಾಡಲಾಗಿದೆ. ಇದರಿಂದ ಜಾಯ್‌ನಗರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ (West Bengal Violence) ನೆಲೆಸಿದೆ.
ಸಿಟ್ಟಿಗೆದ್ದ ಪುಂಡರ ಗುಂಪುಗಳು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿವೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಸಿಪಿಎಂ ನಡುವೆ ರಾಜಕೀಯ ಆರೋಪದ ಆಟ ಆರಂಭವಾಗಿದೆ.
ತೃಣಮೂಲ ನಾಯಕ ಸೈಫುದ್ದೀನ್ ಲಸ್ಕರ್ ಅವರನ್ನು ಇಂದು ಬೆಳಗ್ಗೆ ಜಾಯ್‌ನಗರದಲ್ಲಿರುವ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಸ್ಕರ್ ಅವರು ಜಾಯ್ನಗರದ ಬಮುಂಗಾಚಿ ಪ್ರದೇಶದಲ್ಲಿ ತೃಣಮೂಲ ಘಟಕದ ಮುಖ್ಯಸ್ಥರಾಗಿದ್ದರು. ಅವರ ಪತ್ನಿ ಪಂಚಾಯತ್ ಪ್ರಧಾನರಾಗಿದ್ದಾರೆ.
ಸ್ವಲ್ಪ ಸಮಯದ ನಂತರ, ಅವರ ಕೊಲೆಯಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ಲಸ್ಕರ್ ಅವರ ಬೆಂಬಲಿಗರು ಹಿಡಿದು ಅವನನ್ನು ಹೊಡೆದು ಕೊಂದರು. ಈ ಪ್ರದೇಶದಲ್ಲಿ ಆಡಳಿತ ಪಕ್ಷದ ಬೆಂಬಲಿಗರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಸೈಫುದ್ದೀನ್ ಲಸ್ಕರ್ ಹತ್ಯೆ ಹಿಂದೆ ಸಿಪಿಎಂ ಬೆಂಬಲಿಗರ ಕೈವಾಡವಿದೆ ಎಂದು ಸ್ಥಳೀಯ ತೃಣಮೂಲ ಮುಖಂಡರು ಆರೋಪಿಸಿದ್ದಾರೆ.
ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಅವರು ʼಈ ಕೊಲೆಯು ತೃಣಮೂಲ ಪಕ್ಷದೊಳಗಿನ ಆಂತರಿಕ ಕಲಹದ ಪರಿಣಾಮ. ಸಿಪಿಎಂ ಅನ್ನು ದೂಷಿಸಿ ಪ್ರಯೋಜನವಿಲ್ಲʼ ಎಂದಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಪಿತೂರಿಯನ್ನು ಬಯಲಿಗೆಳೆಯಬೇಕು ಎಂದು ಚಕ್ರವರ್ತಿ ಹೇಳಿದರು. ತೃಣಮೂಲ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: West Bengal: ಶಾಸಕರ ಸಂಬಳದಲ್ಲಿ ತಿಂಗಳಿಗೆ 40 ಸಾವಿರ ರೂ. ಹೆಚ್ಚಳ!