ನವದೆಹಲಿ: ಸಾಯೋವರೆಗೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎನ್‌ಐಎ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದ ಯಾಸಿನ್ ಮಲಿಕ್ (56) ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ರಂಗದ (ಜೆಕೆಎಲ್‌ಎಫ್) ಮುಖ್ಯಸ್ಥ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡಲು, ಪ್ರತ್ಯೇಕತಾವಾದಿ ಚಟುವಟಿಕೆ ನಡೆಸಲು, ಉಗ್ರವಾದಿ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡುತ್ತಿದ್ದ ಆರೋಪ ಎದುರಿಸಿದ ಈತ 2017ರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಯುಎಪಿಎ, ಭಯೋತ್ಪಾದನಾ ನಿಗ್ರಹ ಕಾಯಿದೆ ಮತ್ತು ದೇಶದ್ರೋಹ ಕಾನೂನುಗಳ ಅಡಿಯಲ್ಲಿ ಹಲವು ಆರೋಪಗಳನ್ನು ಮಾಡಲಾಗಿತ್ತು. ಅವೆಲ್ಲವೂ ಇದೀಗ ಸಾಬೀತಾಗಿ ಜೀವನಪೂರ್ತಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.
1966ರ ಶ್ರೀನಗರದ ಮೈಸುಮಾ ಪ್ರದೇಶದಲ್ಲಿ ಜನಿಸಿದ ಯಾಸಿನ್ ಮಲಿಕ್ ಬಾಲಕನಾಗಿದ್ದಾಗ ತಾನು ಕಾಶ್ಮೀರದ ಬೀದಿ ಬೀದಿಗಳಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದರು. ಸೇನೆ ಮತ್ತು ಆಟೋರಿಕ್ಷಾ ಚಾಲಕರ ನಡುವೆ ನಡೆದ ಘರ್ಷಣೆಯನ್ನು ಕಂಡ ಬಳಿಕ ತಾನು ಬಂಡಾಯವೆದ್ದಿದ್ದಾಗಿ ಅವರೇ ಹೇಳಿಕೊಂಡಿದ್ದರು. ಆಗಲೇ ಕ್ರಾಂತಿಕಾರಿಯಾಗಬೇಕು ಎಂದು ನಿರ್ಧರಿಸಿ ತಾಲಾ ಪಕ್ಷವನ್ನು ಸ್ಥಾಪಿಸಿದ್ದರು. 1983ರಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಪಂದ್ಯವನ್ನು ಹಾಳುಗೆಡವಲು ಯತ್ನಿಸಿದ್ದು ಸೇರಿದಂತೆ ಹಲವು ಪ್ರತಿಭಟನೆಗಳನ್ನು ಆಯೋಜಿಸಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಎಲ್ಲ ಕಾರಣಕ್ಕೆ ಜೈಲು ಸೇರಿದ್ದರು ಯಾಸಿನ್. 1986ರಲ್ಲಿ ಜೈಲಿನಿಂದ ಹೊರಬಂದ ಬಳಿಕ ತಾಲಾ ಪಾರ್ಟಿಗೆ ಇಸ್ಲಾಮಿಕ್ ಸ್ಟೂಡೆಂಟ್ಸ್ ಲೀಗ್ ಎಂದು ಹೆಸರಿಟ್ಟುಕೊಂಡು ಮುನ್ನಡೆಸಿದರು. 1987ರ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಿತ್ತಾದರೂ ಮಲಿಕ್ ಕಣಕ್ಕೆ ಇಳಿದಿರಲಿಲ್ಲ. ಮಲಿಕ್ ಪ್ರಧಾನ ಟಾರ್ಗೆಟ್ ನ್ಯಾಷನಲ್ ಕಾನ್ಫರೆನ್ಸ್ ಆಗಿತ್ತು. ಈ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಅವರು ಕೇಂದ್ರ ಸರಕಾರದ ಬೆಂಬಲದೊಂದಿಗೆ ದೊಡ್ಡ ಮಟ್ಟದ ಅಕ್ರಮ ಮತದಾನ ನಡೆಸಿದರು ಎಂದು ಯಾಸಿನ್ ಆರೋಪಿಸಿ ಹೋರಾಟ ಸಂಘಟಿಸಿದ್ದರು.
ಪಾಕಿಸ್ತಾನದಲ್ಲಿ ತರಬೇತಿ
ಸರಕಾರದ ವಿರುದ್ಧ ಜನ ಸಂಘರ್ಷದ ಜತೆಗೆ ಬೇರೆ ಮಾರ್ಗಗಳೂ ಬೇಕು ಎಂದು ಬಯಸಿದ ಯಾಸಿನ್ 1989ರಲ್ಲಿ ಪಾಕ್ ಆಡಳಿತವಿರುವ ಕಾಶ್ಮೀರಕ್ಕೆ ಹೋಗಿ ಅಲ್ಲಿನ ಶಿಬಿರಗಳಲ್ಲಿ ತರಬೇತಿ ಪಡೆದಿದ್ದರು. ಅಲ್ಲಿಂದ ಮರಳಿಬಂದು ಜಮ್ಮು ಮತ್ತು ಕಾಶ್ಮೀರ್ ಲಿಬರೇಷನ್ ಫ್ರಂಟ್ ರೂಪಿಸಿದ ಯಾಸಿನ್ ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಪಣ ತೊಟ್ಟರು.
ಸ್ವತಂತ್ರ ಕಾಶ್ಮೀರದ ಈ ಘೋಷಣೆಗೆ ಆಗ ಭಾರಿ ದೊಡ್ಡ ಬೆಂಬಲ ದೊರೆಯಿತು. ಜೆಕೆಎಲ್‌ಎಫ್ ಭದ್ರತಾ ಪಡೆಗಳ ವಿರುದ್ಧ ಗೆರಿಲ್ಲಾ ಹೋರಾಟಗಳನ್ನು ಸಂಘಟಿಸಿದ್ದಲ್ಲದೆ, ಆಗ ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳು ರುಬಿಯಾ ಸಯೀದ್ ಅವರನ್ನು ಅಪಹರಿಸುವ ಮಟ್ಟಕ್ಕೂ ಹೋದರು. 1990ರಲ್ಲಿ ಅಶ್ಫಕ್ ವಾನಿ ಎಂಬ ಜೆಕೆಎಲ್ ಎಫ್ ನಾಯಕ ಭದ್ರತಾ ಪಡೆಗಳಿಗೆ ಗುಂಡಿಗೆ ಬಲಿಯಾದರೆ, ಯಾಸಿನ್ ಮಲಿಕ್ ಗಾಯಾಳುವಾಗಿ ಭದ್ರತಾ ಪಡೆಗಳ ಕೈಗೆ ಸಿಕ್ಕಿಬಿದ್ದ. ಆಗ ಬಂಧಿತನಾದ ಯಾಸಿನ್ ಮಲಿಕ್ ಬಿಡುಗಡೆಯಾಗಿದ್ದು 1994ರಲ್ಲಿ. ಮುಂದೆ ದೊಡ್ಡ ಪ್ರಮಾಣದಲ್ಲಿ ಜೆಕೆಎಲ್‌ಎಫ್ ಕಾಲಾಳುಗಳ ಹತ್ಯೆ ನಡೆಯಿತು. ಕೆಲವರು ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಗಳನ್ನು ಸೇರಿಕೊಂಡರು. ಜೆಕೆಎಲ್‌ಎಫ್ ಸ್ವತಂತ್ರ ಕಾಶ್ಮೀರಕ್ಕಾಗಿ ಹೋರಾಟ ನಡೆಸಿದರೂ ಕಾಶ್ಮೀರವನ್ನು ಕಬಳಿಸುವ ಪಾಕಿಸ್ತಾನದ ದುಷ್ಟಕೂಟಕ್ಕೆ ವಿರುದ್ಧವಾಗಿತ್ತು. ಹೀಗಾಗಿ, 1994ರಲ್ಲಿ ಯಾಸಿನ್ ಮಲಿಕ್ ಕದನ ವಿರಾಮ ಘೋಷಿಸಿದ. ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾಲಾಳುಗಳನ್ನು ಕಳೆದುಕೊಂಡಿದ್ದೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ನಡುವೆ, ಜೆಕೆಎಲ್ ಎಫ್‌ನಿಂದಲೇ ಯಾಸಿನ್‌ನನ್ನು ಹೊರಹಾಕಲಾಯಿತು.
ಮತ್ತೆ ಚಿಗಿತು ನಿಂತ
ಒಂದು ಹಂತದಲ್ಲಿ ಸ್ವಲ್ಪ ತಣ್ಣಗಾದಂತೆ ಕಂಡರೂ ಮತ್ತೆ ಸ್ವತಂತ್ರ ಕಾಶ್ಮೀರದ ಬಗ್ಗೆ ಧ್ವನಿ ಎತ್ತಿದ. ಹಲವಾರು ವಿಶ್ವನಾಯಕರನ್ನು ಭೇಟಿಯಾಗಿ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವಂತೆ ಕೋರಿದ್ದ. ಇದೆಲ್ಲವನ್ನೂ ಪರಿಗಣಿಸಿ ಭಯೋತ್ಪಾದನಾ ನಿಗ್ರಹ ಕಾಯಿದೆಯಡಿ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. 2013ರಲ್ಲಿ ನಿಷೇಧಿತ ಲಷ್ಕರೆ ತಯ್ಬಾ ನಾಯಕನೊಂದಿಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದ. ಇದು ಭಾರತದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಯಿತು. 2013ರ ಡಿಸೆಂಬರ್ 4ರಂದು ದಿಲ್ಲಿಯ ಹೋಟೆಲೊಂದರಲ್ಲಿ ತಂಗಿದ್ದ ಆತನನ್ನು ಪತ್ನಿ ಮತ್ತು 18 ತಿಂಗಳ ಮಗುವಿನೊಂದಿಗೆ ಹೊರಹಾಕಲಾಯಿತು.
2017ರ ಟೆರರ್ ಫಂಡಿಂಗ್ ಕೇಸು
ಯಾಸಿನ್ ಮಲಿಕ್ ಮತ್ತು ಇತರ ಪ್ರತ್ಯೇಕತಾವಾದಿ ನಾಯಕರು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನದಿಂದ ಫಂಡ್ ಪಡೆಯುತ್ತಿದ್ದಾರೆ ಎಂಬ ಆಪಾದನೆ 2017ರಲ್ಲಿ ಕೇಳಿಬಂತು. ಇದ ಪ್ರಕರಣ ಇದೀಗ ಗಟ್ಟಿಗೊಂಡು ಜೀವಾವಧಿ ಶಿಕ್ಷೆಯ ವರೆಗೆ ಬಂದು ನಿಂತಿದೆ.