Site icon Vistara News

ನಮ್ಮನ್ನು ಏನ್ಮಾಡ್ತಾರೆ? ನೇಣಿಗೆ ಹಾಕ್ತಾರಾ? ಜೀವಾವಧಿ ಶಿಕ್ಷೆ ಕೊಡ್ತಾರಾ? ಕನ್ಹಯ್ಯ ಲಾಲ್‌ ಹಂತಕರ ಉಡಾಫೆ ಪ್ರಶ್ನೆ!

Udaipur killers

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಅವರ ಶಿರಚ್ಛೇದನ ಮಾಡಿದ ದುಷ್ಟರು ಎಷ್ಟರ ಮಟ್ಟಿಗೆ ಕಟುಕರಿದ್ದಾರೆ ಎಂದರೆ ಅವರಿಗೆ ತಾವು ಮಾಡಿದ ಘೋರ ಕೃತ್ಯದ ಬಗ್ಗೆ ಸಣ್ಣ ಪಶ್ಚಾತ್ತಾಪವೂ ಇಲ್ಲ ಎಂದು ಹೇಳಲಾಗಿದೆ. ಅವರು ಧಾರ್ಮಿಕ ಮೂಲಭೂತವಾದವನ್ನು ಮೈಮನಸುಗಳಿಗೆಲ್ಲ ಹಚ್ಚಿಕೊಂಡಿದ್ದು, ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆದರೂ ಸಣ್ಣ ನೋವಿನ ಕಂಪನವೂ ಅವರೊಳಗೆ ಇಲ್ಲ! ಅವರಾಡುವ ಮಾತಿನಲ್ಲೇ ಈ ಸಂಗತಿಗಳು ಬಯಲಾಗಿವೆ.

ಪ್ರವಾದಿ ಮಹಮ್ಮದ್‌ ಅವರನ್ನು ಅವಹೇಳನ ಮಾಡಿದ ನೂಪುರ್‌ ಶರ್ಮ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ ಹಾಕಿದ್ದನ್ನೇ ನೆಪವಾಗಿಟ್ಟುಕೊಂಡು ಟೇಲರ್‌ ವೃತ್ತಿಯ ಕನ್ಹಯ್ಯ ಲಾಲ್‌ ಅವರನ್ನು ಅತ್ಯಂತ ಭಯಾನಕವಾಗಿ ಕೊಂದು ಹಾಕಿದ್ದರು ದುಷ್ಟರಾದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಗೌಸ್‌ ಮೊಹಮ್ಮದ್‌. ಕುರ್ತಾ ಹೊಲಿಸಿಕೊಳ್ಳುವ ನೆಪದಲ್ಲಿ ಅಂಗಡಿಗೆ ಹೋಗಿ ಕನ್ಹಯ್ಯ ಲಾಲ್‌ ಅವರು ಅಳತೆ ತೆಗೆಯಲು ಬಾಗುತ್ತಿದ್ದಂತೆಯೇ ಗೋಣನ್ನೇ ಕತ್ತರಿಸಿ ಶಿರಚ್ಛೇದನ ಮಾಡಿದ್ದರು ಇವರು. ಸಾಲದ್ದಕ್ಕೆ ಕೊಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ತಾವೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಪಾಕಿಸ್ತಾನದ ದಾವತ್‌ ಇ ಇಸ್ಲಾಮಿ ಎಂಬ ಧಾರ್ಮಿಕ ಮೂಲಭೂತವಾದಿ ಸಂಘಟನೆಯ ಜತೆ ಸಂಪರ್ಕದಲ್ಲಿದ್ದು, ಅಲ್ಲಿ ತರಬೇತಿಯನ್ನೂ ಪಡೆದಿದ್ದ ಈ ಧೂರ್ತರು ಐಸಿಸ್‌ ನಡೆಸುವ ಕ್ರೌರ್ಯದ ವಿಡಿಯೊಗಳನ್ನು ನೋಡಿ ಇನ್ನಷ್ಟು ಕ್ರೂರಿಗಳಾಗಿದ್ದರು.

ಈಗ ರಿಯಾಜ್‌ ಅಟ್ಟಾರಿ ಮತ್ತು ಗೌಸ್‌ ಮಹಮ್ಮದ್‌ ಅವರನ್ನು ಎನ್‌ಐಎ ತೀವ್ರ ತನಿಖೆಗೆ ಒಳಪಡಿಸುತ್ತಿದೆ. ಆಗ ವಿಚಾರಣೆಯ ಸಂದರ್ಭದಲ್ಲಿ ಅವರು ಕೇಳಿದ ಒಂದು ಪ್ರಶ್ನೆ ಎಲ್ಲರನ್ನೂ ದಂಗುಬಡಿಸಿದೆ ಮತ್ತು ಇವರ ಕ್ರೌರ್ಯದ ಅತಿರೇಕಕ್ಕೆ ಸಾಕ್ಷಿಯಾಗಿದೆ. ʻʻಇಷ್ಟೆಲ್ಲ ವಿಚಾರಣೆ ಮಾಡ್ತೀರಲ್ಲಾ.. ನಾವು ಮಾಡಿರುವ ಅಪರಾಧಕ್ಕೆ ಕೊನೆಗೆ ಕೊರ್ಟ್‌ ಏನು ಶಿಕ್ಷೆ ಕೊಡುತ್ತೆ? ಗಲ್ಲು ಶಿಕ್ಷೆನಾ? ಅಥವಾ ಜೀವಾವಧಿ ಶಿಕ್ಷೆನಾ?” ಎಂದು ಕೇಳಿದ್ದಾರೆ.

ಅವರ ಮಾತಿನಲ್ಲಿ ಅಂತಿಮವಾಗಿ ನೀವು ಏನು ಮಾಡಬಹುದು ಎನ್ನುವ ಉಡಾಫೆ ಕಾಣಿಸುತ್ತಿದೆ. ಈ ದುಷ್ಟರು ಎಷ್ಟರ ಮಟ್ಟಿಗೆ ಧಾರ್ಮಿಕವಾಗಿ ಬ್ರೇನ್‌ ವಾಷ್‌ಗೆ ಒಳಗಾಗಿದ್ದಾರೆ ಎಂದರೆ, ತಮಗೆ ಏನು ಬೇಕಾದರೂ ಆಗಲಿ, ಮಾಡಬೇಕಾದ ಕೆಲಸ ಮಾಡಿ ಮುಗಿಸಿದ್ದೇವೆ ಎಂದು ಹೇಳುವಂತಿದೆ. ತಾವು ಮಾಡಿರುವ ಅಪರಾಧದ ಬಗ್ಗೆ ಪಶ್ಚಾತ್ತಾಪದ ಲವಲೇಶವೂ ಇಲ್ಲದ ಅವರು ಶಿಕ್ಷೆ ಏನಾಗುತ್ತದೆ ಎನ್ನುವ ಕುತೂಹಲವನ್ನಷ್ಟೇ ಹೊಂದಿರುವುದು ಆಘಾತಕಾರಿಯಾಗಿದೆ.

ಉದಯಪುರದಲ್ಲಿ ತಮ್ಮದೇ ಆದ ಒಂದು ಕೂಟವನ್ನು ಕಟ್ಟಿಕೊಂಡು ಅದನ್ನು ಐಸಿಸ್‌ ಮಾದರಿಯಲ್ಲಿ ಬೆಳೆಸುತ್ತಿರುವ ಈ ದುಷ್ಟರು, ಜೈಪುರದಲ್ಲಿ ದಾವತ್‌ ಇಸ್ಲಾಮಿಯ ಸ್ಲೀಪರ್‌ ಸೆಲ್‌ ಸ್ಥಾಪನೆಗೂ ಸಂಚು ನಡೆಸುತ್ತಿದ್ದರು ಎನ್ನಲಾಗಿದೆ. ಈ ತಂಡದ ಕೃತ್ಯಕ್ಕೆ ಬಳಸಿದ ೨೬೧೧ ನಂಬರ್‌ನ ಬೈಕ್‌ ಕೂಡಾ ಅವರ ಒಲವುಗಳನ್ನು ಸ್ಪಷ್ಟವಾಗಿ ಸಾರುತ್ತಿದೆ. ಮುಂಬಯಿ ಉಗ್ರ ದಾಳಿಯ ದಿನಾಂಕವನ್ನೇ ನಂಬರ್‌ ಆಗಿ ಪಡೆಯಲು ೫೦೦೦ ರೂ. ಖರ್ಚು ಮಾಡಿದ್ದರು ಇವರು.

ಇದನ್ನೂ ಓದಿ| Amravati murder: ಕೆಮಿಸ್ಟ್‌ ಕೊಲ್ಹೆ ಕೊಲೆಯ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

Exit mobile version