ಮುಂಬೈ: ಬಾಲಿವುಡ್ ನಟ, ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿಧನಕ್ಕೂ ಒಂದು ದಿನ ಮೊದಲು ಸತೀಶ್ ಕೌಶಿಕ್ ಅವರು ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಫಾರ್ಮ್‌ಹೌಸ್ ಮಾಲೀಕನ ವಿಚ್ಛೇದಿತ ಪತ್ನಿಯು, “15 ಕೋಟಿ ರೂಪಾಯಿಗಾಗಿ ನನ್ನ ಮಾಜಿ ಪತಿಯೇ ನಟನನ್ನು ಕೊಂದಿದ್ದಾರೆ” ಎಂದು ನೀಡಿದ ಹೇಳಿಕೆ ಈಗ ಸಂಚಲನ ಮೂಡಿಸಿದೆ.
“ಫಾರ್ಮ್‌ಹೌಸ್ ಮಾಲೀಕನು ಸತೀಶ್ ಕೌಶಿಕ್ ಅವರಿಂದ 15 ಕೋಟಿ ರೂ. ಸಾಲ ಪಡೆದಿದ್ದರು. ಇದನ್ನು ವಾಪಸ್ ನೀಡಲು ನನ್ನ ಮಾಜಿ ಪತಿಗೆ ಇಷ್ಟವಿರಲಿಲ್ಲ. ಹಾಗಾಗಿ, ಸತೀಶ್ ಕೌಶಿಕ್ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ” ಎಂಬುದಾಗಿ ಮಹಿಳೆ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ದೆಹಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಪೊಲೀಸರು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ.
“ಸತೀಶ್ ಕೌಶಿಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ದೂರಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಒಬ್ಬ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗಿದೆ” ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ನಟ ಸತೀಶ್ ಕೌಶಿಕ್ ಮಾರ್ಚ್ 9ರಂದು ಮೃತಪಟ್ಟಿದ್ದು, ಮರಣೋತ್ತರ ವರದಿ ಪ್ರಕಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Satish Kaushik: 800 ರೂ. ಜೇಬಿನಲ್ಲಿಟ್ಟುಕೊಂಡು ಮುಂಬೈಗೆ ಬಂದು ಗೆದ್ದ ಸತೀಶ್ ಕೌಶಿಕ್