ಬಿಹಾರದ ಪಾಟ್ನಾದಲ್ಲಿ ಇಂದು ಬೆಳಗ್ಗೆಯೇ ಶೂಟೌಟ್ ಆಗಿದೆ. ಮೂವರು ಸರಗಳ್ಳರು ನಡೆಸಿದ ಗುಂಡಿನ ದಾಳಿಗೆ (Firing In Patna) ಮಹಿಳೆಯೊಬ್ಬರು ಸೇರಿ, ನಾಲ್ವರು ಮೃತಪಟ್ಟಿದ್ದಾರೆ. ಮೂವರೂ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
ಪಾಟ್ನಾದ ಶಾಸ್ತ್ರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಉರ್ಜಾ ಕ್ರೀಡಾಂಗಣದ ಬಳಿ ಬುಧವಾರ ತಡರಾತ್ರಿ 1 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಮಹಿಳೆ ಸೇರಿ ಒಟ್ಟು ನಾಲ್ವರು ಎಲ್ಲಿಗೋ ಹೋಗಿದ್ದವರು, ಮನೆಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಮೂವರು ಶಸ್ತ್ರಧಾರಿಗಳು ಬಂದು ಅವರನ್ನು ಸುತ್ತುಗಟ್ಟಿದ್ದಾರೆ. ನಾಲ್ವರಲ್ಲಿ ಒಬ್ಬ ಒಂದು ಬಂಗಾರದ ಸರ ಧರಿಸಿದ್ದ. ಅದನ್ನು ಕಿತ್ತುಕೊಡುವಂತೆ ದುಷ್ಕರ್ಮಿಗಳು ಬೆದರಿಸಿದ್ದಾರೆ. ಅವರೆಲ್ಲ ಈ ದರೋಡೆಕೋರರನ್ನು ನೋಡಿ ಅದಾಗಲೇ ಹೆದರಿದ್ದರಿಂದ ಆತ ಕೂಡಲೇ ತನ್ನ ಚೈನ್ ತೆಗೆದು ಕೊಟ್ಟ. ಅಷ್ಟಾದರೂ ಆ ದುರುಳರು ಸುಮ್ಮನೆ ಗಲಾಟೆ ಶುರು ಮಾಡಿದ್ದಾರೆ. ಬಳಿಕ ನಾಲ್ವರಿಗೂ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಲ್ವರನ್ನೂ ಸ್ಥಳೀಯರು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸಂತ್ರಸ್ತರಿಗೆ ಸರ್ಜರಿ ಮಾಡಿ ಗುಂಡನ್ನು ಹೊರತೆಗೆಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಹೊತ್ತಿಗೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಐವರು ಸರಗಳ್ಳರು ಪೊಲೀಸ್ ಬಲೆಗೆ, 20 ಸುಲಿಗೆ ಪ್ರಕರಣಗಳು ಬಯಲಿಗೆ!
ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಘಟನೆ ನಡೆದ ಸ್ಥಳವನ್ನು, ಅಲ್ಲೇ ಸುತ್ತಮುತ್ತಲೂ ಇದ್ದ ಸಿಸಿಟಿವಿ ಫೂಟೇಜ್ಗಳನ್ನೂ ಪರಿಶೀಲನೆ ನಡೆಸಿದ್ದಾರೆ. ಪಾಟ್ನಾದ ಶಾಸ್ತ್ರಿ ನಗರದಲ್ಲಿ ಕಳೆದ ಎರಡು ವಾರದಲ್ಲಿ ನಡೆದ ಎರಡನೇ ಶೂಟೌಟ್ ಇದಾಗಿದೆ. ಈ ಹಿಂದೆ ಇಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು.