ಆನ್ಲೈನ್ ಸ್ಕ್ಯಾಮ್ (ವಂಚನೆ)ಗಳು (Online Scammer) ಇತ್ತೀಚಿನ ದಿನಗಳಲ್ಲಿ ಆಳ-ಅಗಲ ಹೆಚ್ಚಿಸಿಕೊಳ್ಳುತ್ತಿವೆ. ಸೈಬರ್ ವಂಚಕರು ಒಂದೇ ಒಂದು ಲಿಂಕ್ ಕಳಿಸಿ, ಮುಗ್ಧ ಜನರನ್ನು ಯಾಮಾರಿಸುತ್ತಿದ್ದಾರೆ. ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ವಂಚನೆ ಮಾಡುವುದು, ನಮ್ಮ ವಿಡಿಯೊಕ್ಕೆ ಲೈಕ್ಸ್ ಕೊಟ್ಟರೆ ಹಣ ಕೊಡುತ್ತೇವೆ ಎಂದು ಹೇಳಿ, ನಮಗೇ ಗೊತ್ತಿಲ್ಲದಂತೆ ನಮ್ಮ ಬ್ಯಾಂಕ್ ಅಕೌಂಟ್ ಬರಿದು ಮಾಡುವುದು..ಹೀಗೆ ಡಿಜಿಟಲ್ ವಂಚಕರು, ವಂಚನೆಗೆ ನೂರೆಂಟು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಎಲ್ಲರೂ ಇಂಥ ವಂಚಕರ ಜಾಲಕ್ಕೆ ಸಿಲುಕಿಬಿಡುತ್ತಾರೆ ಎಂದೇನೂ ಇಲ್ಲ. ಕೆಲವರು ಅವರನ್ನು ನಂಬಿ ಹಣ ಕಳೆದುಕೊಳ್ಳುತ್ತಾರೆ, ಇನ್ನು ಕೆಲವರು ಅವರಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಪಾರಾಗಿಬಿಡುತ್ತಾರೆ. ಆದರೆ ಇಲ್ನೋಡಿ, ಈ ಯುವತಿ ಇದೆರಡನ್ನೂ ಮಾಡಲಿಲ್ಲ. ಬದಲಿಗೆ ಸ್ಕ್ಯಾಮರ್ಗಳಿಗೇ ದಾರಿತಪ್ಪಿಸಿಬಿಟ್ಟಿದ್ದಾಳೆ..!
ಇವಳು ಕಾಜಲ್. ಈಕೆಗೆ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿಕೊಂಡು ಆನ್ಲೈನ್ ವಂಚನೆ ಜಾಲದ ಫೋನ್ನಂಬರ್ನಿಂದ ವಾಟ್ಸ್ಆ್ಯಪ್ನಲ್ಲಿ ಸಂದೇಶವೊಂದು ಬಂತು. ಒಬ್ಬಳು ಸುಂದರ ಹುಡುಗಿಯ ಫೋಟೋ ಡಿಪಿಯಲ್ಲಿ ಇತ್ತು. ಆ ಉದ್ಯೋಗ ಭರವಸೆಯ ಮೆಸೇಜ್ ನೋಡುತ್ತಿದ್ದಂತೆ, ಇದೊಂದು ವಂಚನೆಯ ಸಂದೇಶ ಎಂದು ಕಾಜಲ್ಗೆ ಥಟ್ಟನೆ ಅರ್ಥವೂ ಆಯಿತು. ಆಗ ಕಾಜಲ್ ಕೂಡ ಅವನಿಗೆ ವಿಚಿತ್ರವಾಗಿ ರಿಪ್ಲೈ ಮಾಡಿದ್ದಾಳೆ. ಅಪರಿಚಿತ ನಂಬರ್ನ ವ್ಯಕ್ತಿ ಮತ್ತು ಕಾಜಲ್ ನಡುವೆ ವಾಟ್ಸ್ಆ್ಯಪ್ನಲ್ಲಿ ನಡೆದ ಹಾಸ್ಯಮಯ ಸಂಭಾಷಣೆಯ ಸ್ಕ್ರೀನ್ಶಾಟ್ನ್ನು ಸ್ವತಃ ಕಾಜಲ್ ಅವರೇ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದ್ಯಾವುದೋ ಅಪರಿಚಿತ, ಸುಂದರ ಹುಡುಗಿಯ ಫೋಟೋ ಇದ್ದ ನಂಬರ್ನಿಂದ ಕಾಜಲ್ ನಂಬರ್ಗೆ ವಾಟ್ಸ್ಆ್ಯಪ್ನಲ್ಲಿ ‘ಡಿಯರ್, ಏನು ಮಾಡ್ತಿದ್ದೀಯಾ’ ಎಂಬ ಸಂದೇಶ ಬರುತ್ತದೆ. ಆ ನಂಬರ್ ನೋಡುತ್ತಿದ್ದ ಹಾಗೇ ಕಾಜಲ್ಗೆ ಅದೊಂದು ವಂಚನೆ ಜಾಲದ ಫೋನ್ ನಂಬರ್ ಎಂದು ಗೊತ್ತಾಗುತ್ತದೆ. ತಕ್ಷಣವೇ ಆಕೆ ‘ನಾನು ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದೇನೆ’ ಎಂದು ಉತ್ತರಿಸುತ್ತಾಳೆ. ಅದಕ್ಕೆ ಪ್ರತಿಯಾಗಿ ಆ ಬದಿಯಿಂದ ‘ತಮಾಷೆ ಮಾಡಬೇಡಿ, ನಾನು ಯುಎಸ್ಎ ಮೂಲದ ಭಾರತದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಉದ್ಯೋಗಕ್ಕಾಗಿ ಜನರನ್ನು ಹುಡುಕುತ್ತಿದ್ದೇವೆ. ನನಗೆ ಸ್ವಲ್ಪ ಸಮಯ ಕೊಡಿ, ಎಲ್ಲವನ್ನೂ ಹೇಳುತ್ತೇನೆ, ಪ್ಲೀಸ್’ ಎಂಬ ಸಂದೇಶ ಬರುತ್ತದೆ.
ಇದನ್ನೂ ಓದಿ: Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ
ಆದರೆ ಕಾಜಲ್ ತನ್ನ ಆಟ ಮುಂದುವರಿಸಿದ್ದಾಳೆ. ‘ಇಲ್ಲ ನಾನು ಸಾಯುವುದರಲ್ಲಿ ಬ್ಯೂಸಿಯಾಗಿದ್ದೇನೆ. ಸಾಯುವುದು ತುಂಬ ಮುಖ್ಯ’ ಎಂದು ರಿಪ್ಲೈ ಮಾಡಿದ್ದಾಳೆ. ಅಷ್ಟಾದರೂ ಅತ್ತಕಡೆಯ ವಂಚಕ ಸುಮ್ಮನಾಗಲಿಲ್ಲ, ‘ತುಂಬ ಚೆನ್ನಾಗಿ ಜೋಕ್ ಮಾಡುತ್ತೀರಿ ಎಂದು ಹೇಳಿ, ತಮ್ಮ ಕಂಪನಿಯ ಬಗ್ಗೆ ಎಲ್ಲ ವಿವರಿಸಿ ಮೆಸೇಜ್ ಮಾಡುತ್ತಾನೆ. ನಿಮಗೆ ಒಳ್ಳೆ ಸಂಬಳ ಕೊಡುತ್ತೇವೆ’ ಎಂದೂ ಹೇಳುತ್ತಾನೆ. ಆದರೆ ಕಾಜಲ್ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ‘ಇಲ್ಲ ನನ್ನ ಜೀವನ ವ್ಯರ್ಥ ಎನ್ನಿಸುತ್ತಿದೆ. ನಾನು ಸಾಯುತ್ತಿದ್ದೇನೆ ಎಂದ ಮೇಲೆ ನನಗ್ಯಾಕೆ ದುಡ್ಡು, ನಾನು ನನ್ನನ್ನು ಪ್ರೀತಿಸಿಕೊಳ್ಳುತ್ತಿಲ್ಲ’ ಎಂಬಿತ್ಯಾದಿ ಮೆಸೇಜ್ ಮಾಡಿ ಸುಮ್ಮನಾಗುತ್ತಾಳೆ. ಅಷ್ಟಾದ ಮೇಲೆ ಆ ಅಪರಿಚಿತ ನಂಬರ್ನಿಂದ ಮೂರ್ನಾಲ್ಕು ಮೆಸೇಜ್ಗಳು ಬಂದಿವೆ. ಯಾವುದಕ್ಕೂ ಆಕೆ ಉತ್ತರಿಸಲಿಲ್ಲ. ಆದರೆ ಒಂದು ದಿನ ಬಿಟ್ಟು ‘ನಾನು ಅವಳ ಅಮ್ಮ, ಆಕೆ ಸತ್ತು ಹೋದಳು’ ಎಂದು ವಂಚಕರ ನಂಬರ್ಗೆ ಸಂದೇಶ ಕಳಿಸಿದ್ದಾಳೆ. ಹೀಗೆ ಸ್ಕ್ಯಾಮರ್ಗೇ ಮಣ್ಣುಮುಕ್ಕಿಸಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ಗಳ ಫೋಟೋ ವೈರಲ್ ಆಗುತ್ತಿದ್ದ ಹಾಗೇ ನೆಟ್ಟಿಗರಂತೂ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ. ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ನೀವು ತುಂಬ ಪುರುಸೊತ್ತಾಗಿದ್ದಿರಿ ಎಂದೆನಿಸುತ್ತಿದೆ ಎಂದು ಕೆಲವರು ಕಾಜಲ್ ಕಾಲೆಳೆದಿದ್ದಾರೆ. ಇನ್ನೂ ಕೆಲವರು ತಮಗೆ ಈ ಆನ್ಲೈನ್ ವಂಚನೆಯಿಂದ ಆದ ಸಮಸ್ಯೆಗಳ ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ, ಕಾಜಲ್ ಮತ್ತು ಅಪರಿಚಿತ, ವಂಚಕರ ನಂಬರ್ ನಡುವೆ ನಡೆದ ವಾಟ್ಸ್ಆ್ಯಪ್ ಸಂಭಾಷಣೆಯ ಸ್ಕ್ರೀನ್ಶಾಟ್..
These scams are getting out of hand pic.twitter.com/9r1r5dtG3l
— Kajal (@wtfyaarkajal) June 10, 2023