ಲಖನೌ: ಗೆಳೆಯ, ಗೆಳತಿ ಕರೆದರೆ ಎಲ್ಲಿಗೆ ಬೇಕಾದರೂ ಹೋಗುತ್ತೇವೆ. ಅವರ ಮೇಲಿನ ನಂಬಿಕೆಯು ಅವರು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಗೆಳೆತನ ನಂಬಿ ಹೋದ ಮಹಿಳೆಯು ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದಾರೆ. ಆಗ್ರಾದ ಹೋಟೆಲ್‌ನಲ್ಲಿ (Agra Hotel) ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕಳೆದ ಶನಿವಾರ (ನವೆಂಬರ್ 11) ರಾತ್ರಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಹೋಮ್ ಸ್ಟೇ ಒಂದರಲ್ಲಿ ಮಹಿಳೆಯು ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅದೇ ಹೋಮ್‌ಸ್ಟೇಗೆ ಗೆಳತಿಯೊಬ್ಬಳು ಬಂದು ತಂಗಿದ್ದಾಳೆ. ಶನಿವಾರ ರಾತ್ರಿ ಗೆಳತಿ ಕರೆದಳು ಎಂದು ಮಹಿಳೆಯು ಅವರ ಕೋಣೆಗೆ ತೆರಳಿದ್ದಾರೆ. ಆಗ ಗೆಳತಿಯ ಗೆಳಯರು ಮಹಿಳೆಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ ಮಹಿಳೆ ಮೇಲೆ ನಾಲ್ವರೂ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
“ಶನಿವಾರ ರಾತ್ರಿ ಹೋಮ್‌ಸ್ಟೇಯಿಂದ ತಾಜ್‌ಗಂಜ್ ಪೊಲೀಸ್ ಠಾಣೆಗೆ ಕರೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ. ಇದಾದ ಬಳಿಕ ಪೊಲೀಸರು ಅಲ್ಲಿಗೆ ತೆರಳಿ ತನಿಖೆ ನಡೆಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಯುವತಿ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಆಗ್ರಾ ಪೊಲೀಸ್ ಸಹಾಯಕ ಆಯುಕ್ತೆ ಅರ್ಚನಾ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Physical Abuse: ಮನೆಗೆಲಸಕ್ಕೆ ಬಂದ ದಲಿತ ಮಹಿಳೆ ಮೇಲೆ ಅತ್ಯಾಚಾರ; ದೇಹ ತುಂಡರಿಸಿದ ಕಟುಕರು
ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಒಂದು ವೈರಲ್ ಆಗಿದೆ. ನನ್ನನ್ನು ಕಾಪಾಡಿ, ಸಹಾಯ ಮಾಡಿ ಎಂಬುದಾಗಿ ಮಹಿಳೆಯು ಕಿರುಚಿದ್ದಾರೆ. ಮಹಿಳೆ ಕಿರುಚಿದರೂ ಯಾರು ಕೂಡ ಸಹಾಯ ಮಾಡಿಲ್ಲ ಎಂದು ತಿಳಿದುಬಂದಿದೆ. ಅತ್ಯಾಚಾರಕ್ಕೀಡಾಗಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ಎಂಬುವರು ಮಹಿಳೆಯನ್ನು ಹೋಟೆಲ್‌ಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ