ತಿರುವನಂತಪುರಂ: ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಾಕಿ ಸಲಹುವ, ತ್ಯಾಗ ಎಂಬ ಪದದ ಸಾಕಾರ ಮೂರ್ತಿಯಂತಿರುವ ತಾಯಿಯ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಹಾಗಾಗಿಯೇ, ಭಾರತದಲ್ಲಿ ತಾಯಿಗೆ ಜಗತ್ತಿನ ಯಾವ ಮೂಲೆಯಲ್ಲೂ ಇರದ ಗೌರವ ಇದೆ. ಆದರೆ, ಕೇರಳದಲ್ಲಿ (Kerala) ದುಷ್ಟ ಮಹಿಳೆಯೊಬ್ಬರು ತನ್ನ ಮಗಳ ಮೇಲೆಯೇ ಪ್ರಿಯತಮ ಅತ್ಯಾಚಾರ ಎಸಗಲು (Physical Abuse) ಅವಕಾಶ ಮಾಡಿಕೊಡುವ ಮೂಲಕ ತಾಯ್ತನಕ್ಕೇ ಕಳಂಕ ಅಂಟಿಸುವ ಕೆಲಸ ಮಾಡಿದ್ದಾರೆ. ಇಂತಹ ನೀಚ ಕೆಲಸ ಮಾಡಿದ ಮಹಿಳೆಗೆ ನ್ಯಾಯಾಲಯವು 40 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕೇರಳದ ಸ್ಪಷೆಲ್ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ಮಹಿಳೆಗೆ 40 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ದಂಡ ವಿಧಿಸಲು ವಿಫಲವಾದರೆ ಮಹಿಳೆಯು ಇನ್ನೂ 6 ತಿಂಗಳು ಜೈಲಿನಲ್ಲಿ ಇರಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಅಲ್ಲದೆ, “ಒಬ್ಬ ತಾಯಿಯಾದವಳು ಮಕ್ಕಳನ್ನು ರಕ್ಷಿಸಬೇಕು. ಆದರೆ, ಇಂತಹ ಪ್ರಕರಣಗಳು ತಾಯ್ತನಕ್ಕೇ ಕಳಂಕ ಅಂಟಿಸುವ ಪ್ರಕರಣಗಳಾಗಿವೆ” ಎಂದು ನ್ಯಾಯಾಲಯವು ಬೇಸರ ವ್ಯಕ್ತಪಡಿಸಿದೆ. 2018-19ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಮಹಿಳೆ ಮಾಡಿದ ನೀಚ ಕೆಲಸಗಳು ಏನೇನು?
ಕೇರಳದ ಮಹಿಳೆಯ ಪತಿಯು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಇದರಿಂದಾಗಿ ಮಹಿಳೆಯು ಆತನನ್ನು ತೊರೆದು ಶಿಶುಪಾಲನ್ ಎಂಬ ಪ್ರಿಯತಮನ ಜತೆ ವಾಸಿಸುತ್ತಿದ್ದಳು. ಮಹಿಳೆಯು ಶಿಶುಪಾಲನ್ ಜತೆ ವಾಸಿಸುವಾಗ ಆಗ 7 ವರ್ಷದವಳಿದ್ದ ಮಗಳನ್ನೂ ಕರೆದುಕೊಂಡು ಹೋಗಿದ್ದರು. ಆದರೆ, ಶಿಶುಪಾಲನ್ ತನ್ನ ಮಗಳ ಮೇಲೆ ಕಣ್ಣು ಹಾಕಿದರೂ ಸುಮ್ಮನಿದ್ದ ಮಹಿಳೆಯು, ತನ್ನೆದುರೇ ಮಗಳ ಮೇಲೆ ಅತ್ಯಾಚಾರ ಎಸಗಲು ಬಿಟ್ಟಿದ್ದಾಳೆ. ಹಲವು ಬಾರಿ ಅತ್ಯಾಚಾರ ಎಸಗಿದರೂ ನೀಚ ಮಹಿಳೆಯು ನೋಡಿ ಸುಮ್ಮನಾಗಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…
ದುಷ್ಟ ಮಹಿಳೆಗೆ 11 ವರ್ಷದ ಇನ್ನೊಬ್ಬ ಮಗಳಿದ್ದು, ಆಕೆ ಅಜ್ಜಿಯ ಮನೆಯಲ್ಲಿ ಇರುತ್ತಾಳೆ. ಅದೊಂದು ದಿನ ತಾಯಿಯ ಮನೆಗೆ ಬಂದ ಆಕೆಯ ಎದುರು 7 ವರ್ಷದ ಬಾಲಕಿಯು ಘಟನೆ ಕುರಿತು ತಿಳಿಸಿದ್ದಾಳೆ. ಇದರಿಂದ ಭಯಗೊಂಡ ಬಾಲಕಿಯು ತಂಗಿಯನ್ನು ಕರೆದುಕೊಂಡು ಅಜ್ಜಿಯ ಮನೆಗೆ ಪರಾರಿಯಾಗಿದ್ದಾಳೆ. ಮನೆಗೆ ಹೋದ ಕೂಡಲೇ ಅಜ್ಜಿಗೆ ತನ್ನ ತಾಯಿ ಮಾಡಿದ ನೀಚ ಕೆಲಸದ ಕುರಿತು ಮಾಹಿತಿ ನೀಡಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಮಹಿಳೆಯ ನೀಚ ಕೆಲಸವು ಬಯಲಾಗಿದೆ.
ಇದನ್ನೂ ಓದಿ: 3 ವರ್ಷದ ಹಿಂದೆ ಯುವತಿ ಮೇಲೆ ಅತ್ಯಾಚಾರ ಎಸಗಿದರು, ಜೈಲಿಂದ ಬಂದು ಆಕೆಯನ್ನೇ ಕೊಂದರು
ಒಬ್ಬನಲ್ಲ ಇಬ್ಬರಿಂದ ಅತ್ಯಾಚಾರ
ಮಹಿಳೆಯು ತನ್ನ ಮಗಳ ಮೇಲೆ ಒಬ್ಬನಲ್ಲ, ಇಬ್ಬರು ಗೆಳೆಯರಿಂದ ಅತ್ಯಾಚಾರ ಎಸಗಲು ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮೊದಲ ಪ್ರಕರಣ ಬಯಲಾದ ಬಳಿಕ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಾದ ನಂತರ ಮಹಿಳೆಯು ಮತ್ತೊಬ್ಬ ಗೆಳೆಯನ ಜತೆ ವಾಸಿಸುತ್ತಿದ್ದಳು. ಆಗ ಆತನೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ