ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಕುರ್ಲಾದಲ್ಲಿ (Kurla) ಸೂಟ್ಕೇಸ್ನಲ್ಲಿ ಮಹಿಳೆಯೊಬ್ಬರ ಶವ (Woman Body) ಪತ್ತೆಯಾಗಿದೆ. ಶಾಂತಿ ನಗರದ ಸಿಎಸ್ಟಿ ರೋಡ್ ಬಳಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಿರ್ಮಾಣದ ಸ್ಥಳದಲ್ಲಿ ಸೂಟ್ಕೇಸ್ ಬಿದ್ದಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸೂಟ್ಕೇಸ್ನಲ್ಲಿ (Suitcase) ಮಹಿಳೆಯೊಬ್ಬರ ಶವ ಇರುವುದು ಪತ್ತೆಯಾಗಿದೆ.
“ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸೂಟ್ಕೇಸ್ ಬಿದ್ದಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿದೆ. ಕೂಡಲೇ ಸಿಎಸ್ಟಿ ರಸ್ತೆಗೆ ತೆರಳಿ ಪರಿಶೀಲಿಸಿದಾಗ ಸೂಟ್ಕೇಸ್ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದಾಗ್ಯೂ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಂತಕನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಟಿ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅವರು ಯಾರು, ಯಾವ ಊರಿನವರು, ಅವರ ಹೆಸರೇನು ಎಂಬುದು ಕೂಡ ಗೊತ್ತಾಗಿಲ್ಲ. ಇವರು ಸುಮಾರು 25 ರಿಂದ 35 ವರ್ಷದವರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ವರದಿ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಸುತ್ತಮುತ್ತ ಅಳವಡಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ. ಮುಂಬೈ ಕ್ರೈಂ ಬ್ರ್ಯಾಂಚ್ ಕೂಡ ಪೊಲೀಸರ ತನಿಖೆಗೆ ಜೈಜೋಡಿಸಿದ್ದಾರೆ.
ಇದನ್ನೂ ಓದಿ: Actor Vinod Thomas: ಕಾರಿನಲ್ಲಿ ಖ್ಯಾತ ನಟನ ಶವ ಪತ್ತೆ; ನಿಗೂಢ ಸಾವಿಗೆ ಕಾರಣವೇನು?
ಕೋಲ್ಕೊತಾದಲ್ಲಿ ಯುವಕನ ಶವ ಪತ್ತೆ
ಅಕ್ಟೋಬರ್ 19ರಂದು ಕೂಡ ಕೋಲ್ಕೊತಾದಲ್ಲಿ 19 ವರ್ಷದ ಯುವಕನ ಶವವು ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಯುವಕನನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು, ಆತನ ತಂದೆಗೆ ಕರೆ ಮಾಡಿ 30 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಯುವಕನ ತಂದೆಯು ಪೊಲೀಸರಿಗೆ ದೂರು ನೀಡಿದ್ದರು. ಹಣ ಸಿಗದ ಕಾರಣ ದುಷ್ಕರ್ಮಿಗಳು ಯುವಕನನ್ನು ಕೊಂದು ಹಾಕಿದ್ದರು.