ರಾಜ್ಯ 25 ಎ- ಗ್ರೇಡ್ ದೇವಸ್ಥಾನಗಳ ಆಮೂಲಾಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುತ್ತಿರುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಇದರ ಜತೆಗೆ ಭಕ್ತಾದಿಗಳಿಗೆ ದೇವಾಲಯಗಳಲ್ಲಿ ನೈರ್ಮಲ್ಯದ ವಾತಾವರಣ ಮತ್ತು ಶುಚಿ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿರುವ ಸ್ವಚ್ಛ ಮಂದಿರ ಅಭಿಯಾನವೂ ಉದ್ಘಾಟನೆಗೆ ಸಿದ್ದವಾಗಿದೆ. ಇದು ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ (Religious & Charitable Endownment) ಯೋಜನೆ. ಇವು ತುರ್ತಾಗಿ ಆಗಬೇಕಿರುವ ಕೆಲಸ. ಅಭಿವೃದ್ಧಿ ಹಾಗೂ ಸ್ವಚ್ಛತೆ ಜತೆ ಜತೆಯಾಗಿ ಸಾಗಬೇಕಿವೆ. ವಾಸ್ತವವಾಗಿ ಮುಜರಾಯಿ ದೇವಾಲಯಗಳಿಗೆ ಸಂಬಂಧಿಸಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ.
ರಾಜ್ಯದಲ್ಲಿ ಮುಜರಾಯಿ ಸುಪರ್ದಿಯಲ್ಲಿರುವ ಕೆಲವು ಕ್ಷೇತ್ರಗಳು ಶ್ರೀಮಂತವಾಗಿವೆ. ಉದಾಹರಣೆಗೆ ಆದಾಯದಲ್ಲಿ ನಂಬರ್ ವನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಗಳಿಸುತ್ತಿರುವ ವಾರ್ಷಿಕ ಆದಾಯ ಸುಮಾರು 100 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ರಾಜ್ಯದ ಟಾಪ್ 10 ದೇವಾಲಯಗಳ ಆದಾಯ ಸರಾಸರಿ 10 ಕೋಟಿಯಿಂದ 100 ಕೋಟಿ ರೂ.ವರೆಗಿದೆ. ಇದರಲ್ಲಿ ಎಷ್ಟು ಕ್ಷೇತ್ರಕ್ಕಾಗಿ ವಿನಿಯೋಗವಾಗುತ್ತಿದೆ ಎಂಬುದರ ಸಮರ್ಪಕವಾದ ಲೆಕ್ಕವಿಲ್ಲ. ಕಳೆದ ಐದು ವರ್ಷಗಳಿಂದ ದೇವಾಲಯದ ಆದಾಯ ಸರಿಯಾದ ಆಡಿಟ್ ಆಗಿಲ್ಲ ಎಂಬ ದೂರು ಇದೆ. ದೇವಾಲಯದಂಥ ಪವಿತ್ರ ಕ್ಷೇತ್ರಗಳ ಆಡಳಿತದ ಬಗ್ಗೆಯೇ ಇಂಥ ಅವ್ಯವಹಾರದ ದೂರುಗಳು ದಾಖಲಾಗಬಾರದು. ಇದು ಒಂದು ಉದಾಹರಣೆ ಮಾತ್ರ. ಇಂಥ ಹಲವಾರು ಶ್ರೀಮಂತ ದೇವಾಲಯಗಳಿವೆ. ಇವುಗಳ ಆದಾಯ ಒಂದು ಭಾಗವನ್ನು ಅಲ್ಲಿಯೇ ಸೂಕ್ತ ರೀತಿಯಲ್ಲಿ ಬಳಸುವ ವ್ಯವಸ್ಥೆ ಆಗಬೇಕು. ಯಾಕೆಂದರೆ ಭಕ್ತಾದಿಗಳು ಈ ಕ್ಷೇತ್ರಗಳಿಗಾಗಿಯೇ ಹಣ ನೀಡುವುದು. ಈ ಹಣದ ಸದ್ಬಳಕೆ ಆಗುತ್ತಿದೆಯೇ ಎಂಬುದು ಮುಖ್ಯ.
ಇನ್ನು ಕೆಲವು ಕ್ಷೇತ್ರಗಳು ಹೆಸರಿಗೆ ಮಾತ್ರ ಮುಜರಾಯಿ. ಶ್ರೀಮಂತ ಕ್ಷೇತ್ರಗಳಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಇಲಾಖೆ, ಇಂಥ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಿಲ್ಲ. ಅಂಥ ಕಡೆ ಕ್ಷೇತ್ರಗಳಿಗೆ ತಲುಪಲು ಸುಗಮ ರಸ್ತೆ, ವಾಹನಗಳ ಸೌಕರ್ಯ, ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ಜನದಟ್ಟಣೆ ನಿಯಂತ್ರಿಸುವುದಕ್ಕೆ ಬೇಕಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯ. ಕೆಲವು ಕಡೆ ಈಗಿರುವ ಸೌಲಭ್ಯಗಳು ಸಾಕಾಗದೆ ಜನರು ಬಯಲಿನಲ್ಲಿಯೇ ಶೌಚ, ಸ್ನಾನ ಮತ್ತು ಅಡುಗೆ ಮಾಡುವುದನ್ನು ಕಾಣಬಹುದು. ಲಕ್ಷಾಂತರ ಆದಾಯ ಹೊಂದಿರುವ ದೇವಸ್ಥಾನ ಸಮಿತಿಗಳು ಹಕ್ಕೊತ್ತಾಯದಿಂದ ಸೌಲಭ್ಯ ಕಲ್ಪಿಸಿಕೊಂಡು ಭಕ್ತರ ಅನುಕೂಲಕ್ಕೆ ಮುಂದಾಗಬೇಕು. ಸುಸಜ್ಜಿತ ವಸತಿ ಗೃಹಗಳು, ಶೌಚಾಲಯ, ಶುದ್ಧ ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಸ್ವಚ್ಛ ಮಂದಿರ ಅಭಿಯಾನದ ಮೂಲಕ ದೇವಸ್ಥಾನಗಳಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ಉತ್ಪತ್ತಿಯಾಗುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಬೇಕು. ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡಲು ಹಾಗೂ ತ್ಯಾಜ್ಯ ಸಂಗ್ರಹಣೆ, ಸಂಸ್ಕರಣೆ, ವಿಲೇವಾರಿಗೆ ವ್ಯವಸ್ಥಿತ ಕ್ರಮ ಆಗಬೇಕು. ದೇವಸ್ಥಾನವನ್ನು ಸುಸ್ಥಿರ ಮತ್ತು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುವ ಗುರಿಯನ್ನು ಸ್ವಚ್ಛ ದೇವಾಲಯ ಯೋಜನೆ ಹೊಂದಿದೆ. ಅದು ಜಾರಿಗೂ ಬರಬೇಕಿದೆ. ನಮ್ಮ ದೇವಾಲಯಗಳಿಗೆ ಹೋದಾಗ ಅಲ್ಲಿನ ಸ್ವಚ್ಛತೆಯಿಂದಲೇ ದೇವತಾ ಸಾನ್ನಿಧ್ಯದ ಪುಳಕ ಭಕ್ತಾದಿಗಳಿಗೆ ಉಂಟಾಗಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲ್ವೆ ಯೋಜನೆಗಳಿಗೆ ದಾಖಲೆಯ ಅನುದಾನ, ಇದು ಕಾರ್ಯರೂಪಕ್ಕೆ ಬರಲಿ
ಇನ್ನು ಒತ್ತುವರಿ, ಅತಿಕ್ರಮಣದ ಸಮಸ್ಯೆ. ಮುಜರಾಯಿ ಇಲಾಖೆಯ ಅಡಿಯಲ್ಲಿ 34,559 ದೇವಾಲಯಗಳಿವೆ. ಇದರಲ್ಲಿ ಸಾವಿರಾರು ದೇವಸ್ಥಾನಗಳನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವಿಗೆ ಸರ್ವೆ ಕಾರ್ಯ ಆಗಬೇಕು. ಇದುವರೆಗೆ 6000 ದೇವಾಲಯಗಳ ಸರ್ವೆ ಆಗಿದ್ದು, ಇನ್ನೂ 28,000 ದೇವಸ್ಥಾನಗಳ ಸರ್ವೇ ಕಾರ್ಯ ಬಾಕಿಯಿದೆ. ಹೀಗಾಗಿ ಒತ್ತುವರಿಯ ಪೂರ್ಣ ಚಿತ್ರಣವೇ ಸಿಕ್ಕಿಲ್ಲ. ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದೆ ಎಂಬುದಂತೂ ಖಚಿತ. ಮುಜರಾಯಿ ಇಲಾಖೆಯು ಭೂಮಾಪಕರ ಕೊರತೆ ಎದುರಿಸುತ್ತಿರುವುದರಿಂದ ಸರ್ವೆಯೂ ಸರಿಯಾಗಿ ಆಗುತ್ತಿಲ್ಲ. ಶೀಘ್ರ ಸರ್ವೆ ಹಾಗೂ ಅತಿಕ್ರಮಣ ತೆರವಾಗಿ ಅದು ಮುಜರಾಯಿ ಬಳಕೆಗೆ ಸಿಗುವಂತಾದರೆ ಅನುಕೂಲವಾಗುತ್ತದೆ.