Site icon Vistara News

ವಿಸ್ತಾರ ಸಂಪಾದಕೀಯ: ಅಪಘಾತಗಳ ರಾಜಧಾನಿ ಆಗುತ್ತಿದೆ ಬೆಂಗಳೂರು

Bangalore is becoming capital of accidents

#image_title

ರಾಜ್ಯದ ರಾಜಧಾನಿ ಬೆಂಗಳೂರು ಅಪಘಾತಗಳ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗುತ್ತಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲೇ 1197 ಅಪಘಾತಗಳು ಸಂಭವಿಸಿದ್ದು, 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಪಘಾತಗಳು ಇದೇ ಪ್ರಮಾಣದಲ್ಲಿ ಸಾಗಿದರೆ ಒಂದೇ ವರ್ಷದಲ್ಲಿ ಸಾವಿನ ಸಂಖ್ಯೆ ಸಾವಿರ ದಾಟಲಿದೆ. 1,051 ಮಂದಿ ರಸ್ತೆ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಇದೆಲ್ಲ ಕಳವಳಕಾರಿ. ಇದಕ್ಕೆ ಕಾರಣವೇನು ಹಾಗೂ ಪರಿಹಾರವೇನು ಎಂದು ಯೋಚಿಸುವುದು ಇಂದಿನ ಜರೂರಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬಳಿ ಇರುವ 2021 ಹಾಗೂ 2022ರಲ್ಲಿ ನಡೆದ ರಸ್ತೆ ಅಪಘಾತಗಳ ಅಂಕಿಸಂಖ್ಯೆ ಪರಿಶೀಲಿಸಿದರೆ, ಅಪಘಾತಗಳ ಸಂಖ್ಯೆಯಲ್ಲಿ ದಿಲ್ಲಿ ಹಾಗೂ ಚೆನ್ನೈಗಳ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಪಘಾತಗಳ ಸಾವಿನ ಸಂಖ್ಯೆಯಲ್ಲೂ ಇದೇ ಅನುಕ್ರಮಣಿಕೆಯನ್ನು ನೋಡಬಹುದು. ಮೂರನೇ ಸ್ಥಾನ ಎಂದು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ಬೆಂಗಳೂರು ಬಲು ವೇಗವಾಗಿ ಬೆಳೆಯುತ್ತಿದೆ ಹಾಗೂ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ಹೊಸ ಹೊಸ ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ವೇಗಳು, ರಿಂಗ್‌ ರಸ್ತೆಗಳು ನಗರಕ್ಕೆ ಸೇರ್ಪಡೆಯಾಗುತ್ತಿವೆ. ಇವು ಹೆಚ್ಚಾದಂತೆ ವಾಹನಗಳ ವೇಗವೂ ಹೆಚ್ಚಾಗುತ್ತದೆ ಹಾಗೂ ಅಪಘಾತಗಳು ಹೆಚ್ಚುತ್ತವೆ.

ಬೆಂಗಳೂರಿನಲ್ಲಿ ಇರುವ ಕೆಟ್ಟ ರಸ್ತೆಗಳು, ಅತಿ ವೇಗದ ಹಾಗೂ ಅಜಾಗರೂಕ ಚಾಲನೆಗಳು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಮುಖ್ಯವಾಗಿ ಕಳಪೆ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆ ವಿಭಜಕಗಳು ಹಾಗೂ ಗುಂಡಿಗಳು ಜೀವಗಳ ಬಲಿ ಪಡೆಯುತ್ತಿವೆ. ರಾತ್ರೋರಾತ್ರಿ ನಿರ್ಮಿಸಿ ಪಟ್ಟಿ ಬಳಿಯದೇ ಹೋದ ಹಂಪ್‌ನಿಂದಾಗಿ ಎಗರಿ ಬಿದ್ದು ಪ್ರಾಣ ಕಳೆದುಕೊಳ್ಳುವ ದ್ವಿಚಕ್ರ ವಾಹನ ಸವಾರರನ್ನು ಕಂಡಿದ್ದೇವೆ. ದಿಡೀರಾಗಿ ಎದುರಿಗೆ ಬರುವ ರಸ್ತೆ ವಿಭಜಕಗಳು ಪ್ರಾಣ ತೆಗೆಯುತ್ತವೆ. ಸರಿಪಡಿಸದೇ ಹಾಗೇ ಬಿಟ್ಟ ಗುಂಡಿಗಳು ವರ್ಷವರ್ಷವೂ ಹತ್ತಾರು ಜೀವಗಳನ್ನು ಬಲಿಪಡೆಯುತ್ತವೆ. ಜನ ಸಾಮಾನ್ಯರು, ಮಾಧ್ಯಮಗಳಿಂದ ಹಿಡಿದು ಹೈಕೋರ್ಟ್ ತನಕ ಮತ್ತೆ ಮತ್ತೆ ಬಿಬಿಎಂಪಿಗೆ ಚಾಟಿ ಬೀಸಿದರೂ ಬೆಂಗಳೂರಿನ ರಸ್ತೆಗಳು ಸುಗಮ, ಸುರಕ್ಷಿತ ರೂಪಕ್ಕೆ ಬರುತ್ತಿಲ್ಲ. ಬಿಬಿಎಂಪಿ, ಜಲ ಮಂಡಳಿ, ಬೆಸ್ಕಾಂ ನಡುವೆ ಇನ್ನೂ ಸಮನ್ವಯತೆ ಇಲ್ಲ. ಇದರ ದುಷ್ಪರಿಣಾಮ ರಸ್ತೆಗಳ ಮೇಲಾಗುತ್ತಿದೆ. ಫುಟ್‌ಪಾತ್ ಒತ್ತುವರಿಯಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ನಡೆದು ಅಪಘಾತಕ್ಕೆ ತುತ್ತಾಗುತ್ತಾರೆ. ಇವೆಲ್ಲ ಸರಿಹೋಗದೇ ಬೆಂಗಳೂರು ಅಪಘಾತಮುಕ್ತ ನಗರವಾಗದು. ವಾಹನ ಮಾಲಿಕರಿಂದ ಪಡೆಯುವ ರಸ್ತೆ ತೆರಿಗೆಯನ್ನು ಸರ್ಕಾರ ಉತ್ತಮ ರಸ್ತೆಗಳ ಪಾಲನೆಗೆ ವಿನಿಯೋಗಿಸಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಿಎಪಿಎಫ್‌ ಪರೀಕ್ಷೆ ಬರೆಯಲು ಕನ್ನಡದಲ್ಲಿ ಅವಕಾಶ ಸ್ವಾಗತಾರ್ಹ

ಬೆಂಗಳೂರಿನ ವಾಹನಗಳನ್ನು ನಿಯಂತ್ರಿಸುವುದೂ ಸುಲಭ ಸಾಧ್ಯವಿಲ್ಲ. ಇಲ್ಲಿ 1.07 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲಿ ನಿರ್ಲಕ್ಷ್ಯ ವಾಹನ ಚಾಲನೆ ಸಂಬಂಧ ಕಳೆದ ಮೂರು ತಿಂಗಳಲ್ಲಿ 660 ಕೇಸ್, ಅತಿ ವೇಗದ ವಾಹನ ಚಾಲನೆ ಸಂಬಂಧ 917 ಪ್ರಕರಣಗಳು ದಾಖಲಾಗಿವೆ. ಸಿಗ್ನಲ್ ಜಂಪ್, ಲೇನ್ ಶಿಸ್ತು ಉಲ್ಲಂಘನೆ ಸಂಬಂಧ 2,32,626 ಪ್ರಕರಣಗಳು ದಾಖಲಾಗಿವೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣಗಳೂ ಸಾಕಷ್ಟು. ಅಂದರೆ ರಸ್ತೆ ಶಿಸ್ತು ಪಾಲನೆಯಾಗುತ್ತಿಲ್ಲ. ಕಠಿಣ ಪರೀಕ್ಷಾ ಮಾನದಂಡಗಳಿಲ್ಲದೆ ಲೈಸೆನ್ಸ್‌ ನೀಡುವುದರಿಂದಲೂ ಅನಾಹುತಗಳಾಗುತ್ತವೆ. ಗಂಭೀರ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದವರ ಪರವಾನಗಿ ರದ್ದು ಮಾಡುವಂಥ ಕಠಿಣ ಕ್ರಮ ಕೈಗೊಂಡಾಗ ನಿರ್ಲಕ್ಷ್ಯದ ಚಾಲನೆಗಳಿಗೆ ತುಸು ಕಡಿವಾಣ ಬೀಳಬಹುದು. ನಮ್ಮಲ್ಲಿ ಪಾದಚಾರಿಗಳಿಗೂ ರಸ್ತೆ ಸುರಕ್ಷತಾ ನಿಯಮಗಳು ಗೊತ್ತಿಲ್ಲ. ಜವಾಬ್ದಾರಿಯುತ ಪೌರ ಪ್ರಜ್ಞೆಯ ಗೈರುಹಾಜರಿಯೇ ಇವೆಲ್ಲವುಗಳ ಮೂಲ. ಹೀಗಾಗಿ ಅಧಿಕಾರಸ್ಥರ ಜತೆಗೆ ವಾಹನ ಚಾಲಕರು ಮತ್ತು ಎಲ್ಲ ಸಾರ್ವಜನಿಕರೂ ಜಾಗರೂಕತೆ ಪಾಲಿಸುವುದು ಅಗತ್ಯವಿದೆ.

ರಸ್ತೆ ಸುರಕ್ಷತಾ ಕ್ರಮಗಳು ಇನ್ನಷ್ಟು ಬಲಗೊಳ್ಳಬೇಕಿವೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ, ವೈಜ್ಞಾನಿಕವಾಗಿ ತಪಾಸಣೆ ನಡೆಸುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮೆರಾಗಳಿದ್ದು, ಅವುಗಳ ಕಟ್ಟುನಿಟ್ಟಿನ ನಿಗಾ ಅಗತ್ಯ. ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಮೀನಮೇಷ ಎಣಿಸದೆ ಕ್ರಮ ಕೈಗೊಂಡರೆ ಅಮಾಯಕರು ಭಯಮುಕ್ತರಾಗಬಹುದು.

Exit mobile version