Bangalore is becoming capital of accidents ವಿಸ್ತಾರ ಸಂಪಾದಕೀಯ: ಅಪಘಾತಗಳ ರಾಜಧಾನಿ ಆಗುತ್ತಿದೆ ಬೆಂಗಳೂರು - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಅಪಘಾತಗಳ ರಾಜಧಾನಿ ಆಗುತ್ತಿದೆ ಬೆಂಗಳೂರು

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬಳಿ ಇರುವ 2021 ಹಾಗೂ 2022ರಲ್ಲಿ ನಡೆದ ರಸ್ತೆ ಅಪಘಾತಗಳ ಅಂಕಿಸಂಖ್ಯೆ ಪರಿಶೀಲಿಸಿದರೆ, ಅಪಘಾತಗಳ ಸಂಖ್ಯೆಯಲ್ಲಿ ದಿಲ್ಲಿ ಹಾಗೂ ಚೆನ್ನೈಗಳ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

VISTARANEWS.COM


on

Bangalore is becoming capital of accidents
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್ಯದ ರಾಜಧಾನಿ ಬೆಂಗಳೂರು ಅಪಘಾತಗಳ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗುತ್ತಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲೇ 1197 ಅಪಘಾತಗಳು ಸಂಭವಿಸಿದ್ದು, 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಪಘಾತಗಳು ಇದೇ ಪ್ರಮಾಣದಲ್ಲಿ ಸಾಗಿದರೆ ಒಂದೇ ವರ್ಷದಲ್ಲಿ ಸಾವಿನ ಸಂಖ್ಯೆ ಸಾವಿರ ದಾಟಲಿದೆ. 1,051 ಮಂದಿ ರಸ್ತೆ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಇದೆಲ್ಲ ಕಳವಳಕಾರಿ. ಇದಕ್ಕೆ ಕಾರಣವೇನು ಹಾಗೂ ಪರಿಹಾರವೇನು ಎಂದು ಯೋಚಿಸುವುದು ಇಂದಿನ ಜರೂರಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬಳಿ ಇರುವ 2021 ಹಾಗೂ 2022ರಲ್ಲಿ ನಡೆದ ರಸ್ತೆ ಅಪಘಾತಗಳ ಅಂಕಿಸಂಖ್ಯೆ ಪರಿಶೀಲಿಸಿದರೆ, ಅಪಘಾತಗಳ ಸಂಖ್ಯೆಯಲ್ಲಿ ದಿಲ್ಲಿ ಹಾಗೂ ಚೆನ್ನೈಗಳ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಪಘಾತಗಳ ಸಾವಿನ ಸಂಖ್ಯೆಯಲ್ಲೂ ಇದೇ ಅನುಕ್ರಮಣಿಕೆಯನ್ನು ನೋಡಬಹುದು. ಮೂರನೇ ಸ್ಥಾನ ಎಂದು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ಬೆಂಗಳೂರು ಬಲು ವೇಗವಾಗಿ ಬೆಳೆಯುತ್ತಿದೆ ಹಾಗೂ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ಹೊಸ ಹೊಸ ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ವೇಗಳು, ರಿಂಗ್‌ ರಸ್ತೆಗಳು ನಗರಕ್ಕೆ ಸೇರ್ಪಡೆಯಾಗುತ್ತಿವೆ. ಇವು ಹೆಚ್ಚಾದಂತೆ ವಾಹನಗಳ ವೇಗವೂ ಹೆಚ್ಚಾಗುತ್ತದೆ ಹಾಗೂ ಅಪಘಾತಗಳು ಹೆಚ್ಚುತ್ತವೆ.

ಬೆಂಗಳೂರಿನಲ್ಲಿ ಇರುವ ಕೆಟ್ಟ ರಸ್ತೆಗಳು, ಅತಿ ವೇಗದ ಹಾಗೂ ಅಜಾಗರೂಕ ಚಾಲನೆಗಳು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಮುಖ್ಯವಾಗಿ ಕಳಪೆ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆ ವಿಭಜಕಗಳು ಹಾಗೂ ಗುಂಡಿಗಳು ಜೀವಗಳ ಬಲಿ ಪಡೆಯುತ್ತಿವೆ. ರಾತ್ರೋರಾತ್ರಿ ನಿರ್ಮಿಸಿ ಪಟ್ಟಿ ಬಳಿಯದೇ ಹೋದ ಹಂಪ್‌ನಿಂದಾಗಿ ಎಗರಿ ಬಿದ್ದು ಪ್ರಾಣ ಕಳೆದುಕೊಳ್ಳುವ ದ್ವಿಚಕ್ರ ವಾಹನ ಸವಾರರನ್ನು ಕಂಡಿದ್ದೇವೆ. ದಿಡೀರಾಗಿ ಎದುರಿಗೆ ಬರುವ ರಸ್ತೆ ವಿಭಜಕಗಳು ಪ್ರಾಣ ತೆಗೆಯುತ್ತವೆ. ಸರಿಪಡಿಸದೇ ಹಾಗೇ ಬಿಟ್ಟ ಗುಂಡಿಗಳು ವರ್ಷವರ್ಷವೂ ಹತ್ತಾರು ಜೀವಗಳನ್ನು ಬಲಿಪಡೆಯುತ್ತವೆ. ಜನ ಸಾಮಾನ್ಯರು, ಮಾಧ್ಯಮಗಳಿಂದ ಹಿಡಿದು ಹೈಕೋರ್ಟ್ ತನಕ ಮತ್ತೆ ಮತ್ತೆ ಬಿಬಿಎಂಪಿಗೆ ಚಾಟಿ ಬೀಸಿದರೂ ಬೆಂಗಳೂರಿನ ರಸ್ತೆಗಳು ಸುಗಮ, ಸುರಕ್ಷಿತ ರೂಪಕ್ಕೆ ಬರುತ್ತಿಲ್ಲ. ಬಿಬಿಎಂಪಿ, ಜಲ ಮಂಡಳಿ, ಬೆಸ್ಕಾಂ ನಡುವೆ ಇನ್ನೂ ಸಮನ್ವಯತೆ ಇಲ್ಲ. ಇದರ ದುಷ್ಪರಿಣಾಮ ರಸ್ತೆಗಳ ಮೇಲಾಗುತ್ತಿದೆ. ಫುಟ್‌ಪಾತ್ ಒತ್ತುವರಿಯಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ನಡೆದು ಅಪಘಾತಕ್ಕೆ ತುತ್ತಾಗುತ್ತಾರೆ. ಇವೆಲ್ಲ ಸರಿಹೋಗದೇ ಬೆಂಗಳೂರು ಅಪಘಾತಮುಕ್ತ ನಗರವಾಗದು. ವಾಹನ ಮಾಲಿಕರಿಂದ ಪಡೆಯುವ ರಸ್ತೆ ತೆರಿಗೆಯನ್ನು ಸರ್ಕಾರ ಉತ್ತಮ ರಸ್ತೆಗಳ ಪಾಲನೆಗೆ ವಿನಿಯೋಗಿಸಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಿಎಪಿಎಫ್‌ ಪರೀಕ್ಷೆ ಬರೆಯಲು ಕನ್ನಡದಲ್ಲಿ ಅವಕಾಶ ಸ್ವಾಗತಾರ್ಹ

ಬೆಂಗಳೂರಿನ ವಾಹನಗಳನ್ನು ನಿಯಂತ್ರಿಸುವುದೂ ಸುಲಭ ಸಾಧ್ಯವಿಲ್ಲ. ಇಲ್ಲಿ 1.07 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲಿ ನಿರ್ಲಕ್ಷ್ಯ ವಾಹನ ಚಾಲನೆ ಸಂಬಂಧ ಕಳೆದ ಮೂರು ತಿಂಗಳಲ್ಲಿ 660 ಕೇಸ್, ಅತಿ ವೇಗದ ವಾಹನ ಚಾಲನೆ ಸಂಬಂಧ 917 ಪ್ರಕರಣಗಳು ದಾಖಲಾಗಿವೆ. ಸಿಗ್ನಲ್ ಜಂಪ್, ಲೇನ್ ಶಿಸ್ತು ಉಲ್ಲಂಘನೆ ಸಂಬಂಧ 2,32,626 ಪ್ರಕರಣಗಳು ದಾಖಲಾಗಿವೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣಗಳೂ ಸಾಕಷ್ಟು. ಅಂದರೆ ರಸ್ತೆ ಶಿಸ್ತು ಪಾಲನೆಯಾಗುತ್ತಿಲ್ಲ. ಕಠಿಣ ಪರೀಕ್ಷಾ ಮಾನದಂಡಗಳಿಲ್ಲದೆ ಲೈಸೆನ್ಸ್‌ ನೀಡುವುದರಿಂದಲೂ ಅನಾಹುತಗಳಾಗುತ್ತವೆ. ಗಂಭೀರ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದವರ ಪರವಾನಗಿ ರದ್ದು ಮಾಡುವಂಥ ಕಠಿಣ ಕ್ರಮ ಕೈಗೊಂಡಾಗ ನಿರ್ಲಕ್ಷ್ಯದ ಚಾಲನೆಗಳಿಗೆ ತುಸು ಕಡಿವಾಣ ಬೀಳಬಹುದು. ನಮ್ಮಲ್ಲಿ ಪಾದಚಾರಿಗಳಿಗೂ ರಸ್ತೆ ಸುರಕ್ಷತಾ ನಿಯಮಗಳು ಗೊತ್ತಿಲ್ಲ. ಜವಾಬ್ದಾರಿಯುತ ಪೌರ ಪ್ರಜ್ಞೆಯ ಗೈರುಹಾಜರಿಯೇ ಇವೆಲ್ಲವುಗಳ ಮೂಲ. ಹೀಗಾಗಿ ಅಧಿಕಾರಸ್ಥರ ಜತೆಗೆ ವಾಹನ ಚಾಲಕರು ಮತ್ತು ಎಲ್ಲ ಸಾರ್ವಜನಿಕರೂ ಜಾಗರೂಕತೆ ಪಾಲಿಸುವುದು ಅಗತ್ಯವಿದೆ.

ರಸ್ತೆ ಸುರಕ್ಷತಾ ಕ್ರಮಗಳು ಇನ್ನಷ್ಟು ಬಲಗೊಳ್ಳಬೇಕಿವೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ, ವೈಜ್ಞಾನಿಕವಾಗಿ ತಪಾಸಣೆ ನಡೆಸುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮೆರಾಗಳಿದ್ದು, ಅವುಗಳ ಕಟ್ಟುನಿಟ್ಟಿನ ನಿಗಾ ಅಗತ್ಯ. ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಮೀನಮೇಷ ಎಣಿಸದೆ ಕ್ರಮ ಕೈಗೊಂಡರೆ ಅಮಾಯಕರು ಭಯಮುಕ್ತರಾಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಆಹಾರ ಸುರಕ್ಷತೆಗಾಗಿ ನಿಷೇಧ ಆದೇಶ ಹೊರಡಿಸಿದರೆ ಸಾಕೆ?

1999ರಿಂದ 2016ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆ ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಉಳಿದ ನಿಷೇಧಗಳ ಕತೆಯೂ ಇದೇ ಆಗಿದೆ.

VISTARANEWS.COM


on

Food Safety
Koo

ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು, ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ ನಿರ್ಧಾರ.

ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣಗಳನ್ನು ಇತ್ತೀಚೆಗೆ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಗೋಬಿ ಮಂಚೂರಿಯಲ್ಲಿ ಟಾರ್ಟ್ರಾಸೈನ್ ಎಂಬ ಕೃತಕ ಬಣ್ಣಕಾರಕವನ್ನು ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಇಂಥ ಆಹಾರ ಈಗ ನಿಷೇಧಿತ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ರೆಸ್ಟೋರಂಟ್‌ಗಳಲ್ಲಿ , ಬೀದಿ ಬದಿಯ ಸ್ಟಾಲ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ಈ ಥರದ ಬಣ್ಣಗಳನ್ನು ಬಳಸುವುದು ರೂಢಿಯಾಗಿಬಿಟ್ಟಿದೆ. ಜನರೂ ಇದರ ಅಪಾಯದ ಅರಿವಿಲ್ಲದೆ ಬಳಸುತ್ತಲೇ ಇರುತ್ತಾರೆ. ಈ ನಡುವೆ ಚಿಕನ್‌ ಕಬಾಬ್‌ನಲ್ಲೂ ಕೆಲವರು ಬಣ್ಣಕಾರಕಗಳನ್ನು ಬಳಸುತ್ತಾರೆ. ಇದು ಕೂಡಾ ಅಪಾಯಕಾರಿ. ಆಹಾರ ಇಲಾಖೆಯ ಕಣ್ಣು ಇದರ ಮೇಲೂ ಬಿದ್ದಿದೆ. ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾನೂನುಗಳನ್ನೇನೋ ಮಾಡಬಹುದು. ಆದರೆ ಅನುಷ್ಠಾನದ ಕತೆಯೇನು? ನೋಟೀಸ್ ನೀಡಿ ಬಿಟ್ಟುಬಿಟ್ಟರೆ ಜನ ಬಣ್ಣದ ಬಳಕೆ ಬಿಡುತ್ತಾರೆಯೇ? ಬೀದಿ ಬೀದಿಗಳಲ್ಲಿ ಕಲರ್‌ಫುಲ್ ಕಾಟನ್ ಕ್ಯಾಂಡಿಗಳು ಹಾಗೂ ಗೋಬಿ ಮಂಚೂರಿ ಬಳಕೆ ನಡೆದೇ ಇದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಬೇಡವೇ?

1999ರಿಂದ 2016 ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾದಂತಿಲ್ಲ. ಏಕಬಳಕೆ ಪ್ಲಾಸ್ಟಿಕ್ ಮುಂದುವರಿದಿರುವುದು ಕಾಣಿಸುತ್ತದೆ.

ಇದೆಲ್ಲದರ ಬಗ್ಗೆ ಕಾನೂನು ಮಾಡಿದರೆ ಸಾಲದು, ದೃಢವಾದ ಜಾರಿ ಮಾಡುವಿಕೆ ಇರಬೇಕು. ಸಾರ್ವಜನಿಕರು ಕೂಡ ಇದನ್ನು ಮನಗಂಡು, ಈ ಹಾನಿಕರ ವಸ್ತುಗಳಿಗೆ ಉತ್ತೇಜನ ನೀಡುವುದು ನಿಲ್ಲಿಸಬೇಕು. ಆಗ ಮಾತ್ರ ತಜ್ಞರ, ಆರೋಗ್ಯ ಇಲಾಖೆಯ ಕಳಕಳಿ ಸಾರ್ಥಕ ಆಗಬಹುದು.

ಇದನ್ನೂ ಓದಿ: Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

ಶಿಕ್ಷಣ ಎಂದರೆ ಮಕ್ಕಳು ನಲಿಯುತ್ತ ಕಲಿಯುವುದು. ಆಡುತ್ತ, ನಲಿಯುತ್ತ, ಎಲ್ಲರೊಂದಿಗೆ ಬೆರೆಯುತ್ತ ಜ್ಞಾನವನ್ನು ವೃದ್ಧಿಸಿಕೊಳ್ಳುವುದು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಅಂಕಗಳ ಹಿಂದೆ ಓಡಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸುವ, ಮೊದಲ ರ‍್ಯಾಂಕ್‌ ಪಡೆಯುವ, ಆಟ ಬಿಟ್ಟು ಪಾಠದತ್ತ ಹೆಚ್ಚು ಗಮನ ಹರಿಸುವ, ಎಫರ್ಟ್‌ ಹೆಸರಲ್ಲಿ, ಅಂಕ ಸಾಧನೆ ಹೆಸರಲ್ಲಿ ಇನ್ನಿಲ್ಲದ ಒತ್ತಡ ಅವರ ಮೇಲಿದೆ. ಇಂತಹ ಸಮಸ್ಯೆಗಳ ಮಧ್ಯೆಯೇ, ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುವುದು ಮಕ್ಕಳ ಶೈಕ್ಷಣಿಕ ಏಳಿಗೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ, ಇ-ಮೇಲ್‌ ಮೂಲಕ ಬೆದರಿಕೆ ಹಾಕುವ, ಭಯವನ್ನು ಹುಟ್ಟಿಸುವ ‘ಭಯೋತ್ಪಾದಕರಿಗೆ’ ತಕ್ಕ ಶಾಸ್ತಿ ಆಗಬೇಕಿದೆ.

VISTARANEWS.COM


on

School Children
Koo

ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ (E-Mail) ಮೂಲಕ ಬೆದರಿಕೆ ಒಡ್ಡುವುದು, ಆ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗುವುದು, ಇದರಿಂದ ಎಲ್ಲೆಡೆ ಇದು ಸುದ್ದಿಯಾಗುವಂತೆ ಮಾಡುವ ಹೀನಾತಿಹೀನ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಸೋಮವಾರ (ಮೇ 6) ಅಹಮದಾಬಾದ್‌ನಲ್ಲಿ ಹಲವು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಇನ್ನು, ಮೇ 1ರಂದು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NRC) ಸುಮಾರು 200ಕ್ಕೂ ಅಧಿಕ ಶಾಲೆಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಮೇಲ್‌ಗಳನ್ನು (Hoax Bomb Threat) ಕಳುಹಿಸಲಾಗಿತ್ತು. ಸಹಜವಾಗಿಯೇ ಇದು ದೇಶಾದ್ಯಂತ ಸುದ್ದಿಯಾಯಿತು. ಶಾಲೆಗಳಿಂದ ಮಕ್ಕಳನ್ನು ಕೂಡಲೇ ಮನೆಗೆ ಕಳುಹಿಸಲಾಯಿತು. ಪೋಷಕರೂ ಶಾಲೆಗಳಿಗೆ ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋದರು. ಈಗಲೂ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಕರೆಸಿಕೊಳ್ಳಲು ಶಿಕ್ಷಕರಿಗೂ ಧೈರ್ಯ ಸಾಲುತ್ತಿಲ್ಲ. ಒಟ್ಟಿನಲ್ಲಿ ಕಿಡಿಗೇಡಿಗಳು ಮಾಡುವ ಉಪದ್ವ್ಯಾಪದಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಮುಳುಗಿದ್ದಾರೆ. ಹಾಗಾಗಿ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆಯೊಡ್ಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನಾಮಧೇಯ ವ್ಯಕ್ತಿಗಳು ಮೇಲ್‌ ಮಾಡುವುದು, ತನಿಖೆ ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸುವುದು, ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿರುವುದರಿಂದ ಇದೊಂದು ದೊಡ್ಡ ವಿಷಯ ಅಲ್ಲ, ನಿರ್ಲಕ್ಷಿಸುವುದು ಒಳಿತು ಎಂದು ಎನಿಸಿದರು, ಹುಸಿ ಬೆದರಿಕೆಗಳು ಅತಿ ಹೆಚ್ಚು ಆತಂಕ ಸೃಷ್ಟಿಸುತ್ತಿವೆ, ಮಕ್ಕಳ ಜತೆಗೆ ಪೋಷಕರ ಮೇಲೂ ಪರಿಣಾಮ ಬೀರುತ್ತಿವೆ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ತುಂಬ ಮುಂದುವರಿದಿದೆ. ಸೈಬರ್‌ ಅಪರಾಧ ವಿಭಾಗವನ್ನೂ ತೆರೆಯಲಾಗಿದೆ. ಹಾಗಾಗಿ, ಸೈಬರ್‌ ಕ್ರೈಂ ಪೊಲೀಸರು ಇಂತಹ ಇ-ಮೇಲ್‌ ಕಡಿಗೇಡಿಗಳನ್ನು ಮಟ್ಟಹಾಕಬೇಕು. ಬೆಂಗಳೂರು, ಅಹಮದಾಬಾದ್‌, ದೆಹಲಿ ಎನ್ನದೆ, ದೇಶಾದ್ಯಂತ ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲ್ನೋಟಕ್ಕೆ ಬೇರೆ ದೇಶದ ವಿಪಿಎನ್‌ (VPN) ಬಳಸಿ ಇ-ಮೇಲ್‌ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗೊತ್ತಾದರೂ, ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಪದ್ವ್ಯಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಹುಸಿ ಬಾಂಬ್‌ ಬೆದರಿಕೆ ಕರೆಗಳು ಹತ್ತಾರು ಪರಿಣಾಮಗಳನ್ನು ಬೀರುತ್ತಿವೆ. ನಗರಗಳಲ್ಲಿ ಮಕ್ಕಳು ಪ್ರಾಣ ಭಯದಲ್ಲಿಯೇ ಶಾಲೆಗಳಿಗೆ ತೆರಳುವಂತಾಗಿದೆ. ಪೋಷಕರಂತೂ ಜೀವ ಹಿಡಿದುಕೊಂಡು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುಮಾರು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಇದು ನೂರಾರು ಶಾಲೆಗಳಲ್ಲಿ ಆತಂಕ ಸೃಷ್ಟಿಸಿತ್ತು. ಎಷ್ಟೋ ದಿನಗಳವರೆಗೆ ಪೋಷಕರು ಮಕ್ಕಳನ್ನು ಶಾಲೆಗಳಿಗೇ ಕಳುಹಿಸರಲಿಲ್ಲ. ಶಾಲೆಗಳ ಆಡಳಿತ ಮಂಡಳಿಗಳೂ ಅಷ್ಟೇ, ಸುಮ್ಮನೆ ಅಪಾಯವನ್ನು ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಮಕ್ಕಳನ್ನು ಹಲವು ದಿನಗಳವರೆಗೆ ಶಾಲೆಗೆ ಕರೆಸಿರಲಿಲ್ಲ. ಈಗ, ದೆಹಲಿ ಹಾಗೂ ಅಹಮದಾಬಾದ್‌ ಶಾಲೆಗಳು, ಮಕ್ಕಳು ಮತ್ತು ಪೋಷಕರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ.

ಮಕ್ಕಳಿಗೆ ಜೀವ ಭಯ, ಪೋಷಕರು ಹಾಗೂ ಶಿಕ್ಷಕರಿಗೆ ಆತಂಕ ಮಾತ್ರವಲ್ಲ, ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಮಕ್ಕಳ ಶೈಕ್ಷಣಿಕ ಏಳಿಗೆಯ ಮೇಲೆಯೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪದೇಪದೆ ಬೆದರಿಕೆ ಒಡ್ಡಿದರೆ ಮಕ್ಕಳು ಶಾಲೆಗಳಿಗೆ ಹೋಗುವುದಿಲ್ಲ. ಇದರಿಂದ ಅವರು ಪಠ್ಯವನ್ನು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಇನ್ನು, ಎಳೆಯ ವಯಸ್ಸಿನಲ್ಲೇ ಅವರು ಆತಂಕದಲ್ಲಿ ಶಾಲೆಗೆ ಹೋದರೆ, ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಯಾದ ಹೋಮ್‌ ವರ್ಕ್‌, ಆಟ-ಪಾಠಗಳಿಗೆ ಕಡಿಮೆ ಸಮಯ ಸಿಗುತ್ತಿದೆ. ಅತಿಯಾದ ಸ್ಪರ್ಧೆಯಿಂದ ಮಕ್ಕಳು ಅಂಕಗಳ ಹಿಂದೆ ಓಡಬೇಕಾದ, ರ‍್ಯಾಂಕ್‌ ಪಡೆಯಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದ ಮಕ್ಕಳು ನಾಲ್ಕೈದು ವರ್ಷದಿಂದಲೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಅಷ್ಟಕ್ಕೂ ಶಿಕ್ಷಣ ಎಂದರೆ, ನಲಿಯುತ್ತ ಕಲಿಯುವುದಾಗಿದೆ. ಒತ್ತಡವಿಲ್ಲದೆ, ಆಡುತ್ತ, ನಲಿಯುತ್ತ, ಬೆರೆಯುತ್ತ ಜ್ಞಾನ ಸಂಪಾದಿಸುವುದಾಗಿದೆ. ಆದರೆ, ಈಗ ಬಾಂಬ್‌ ಬೆದರಿಕೆಯ ಆತಂಕವೂ ಮಕ್ಕಳಲ್ಲಿ ಮೂಡಿದರೆ, ಅದು ಸುದೀರ್ಘ ಅವಧಿಗೆ ಅವರನ್ನು ಕಾಡಲಿದೆ. ಶೈಕ್ಷಣಿಕ ಏಳಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕವಾಗಿಯೂ ಅವರು ಕುಗ್ಗಿಹೋಗಲಿದ್ದಾರೆ. ಇದರ ಮಧ್ಯೆಯೇ, ಹುಸಿ ಬಾಂಬ್‌ ಬೆದರಿಕೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ, ಈ ಸಮಸ್ಯೆಗೊಂದು ಕ್ಷಿಪ್ರವಾಗಿ ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ, ಶೈಕ್ಷಣಿಕ ವಾತಾವರಣವನ್ನೇ ಹಾಳುತ್ತಿರುವ ‘ಇ-ಮೇಲ್‌ ಭಯೋತ್ಪಾದಕರಿಗೆ’ ಕಠಿಣ ಶಿಕ್ಷೆಯಾಗಬೇಕಿದೆ.

ಇದನ್ನೂ ಓದಿ: ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

ಬಂಧಿತ ರೇವಣ್ಣ ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಇವರು ಇನ್ನೂ ಎಸ್‌ಐಟಿಗೆ ಸಿಕ್ಕಿಲ್ಲ. ಪ್ರಜ್ವಲ್‌ ಅವರ ಸುಳಿವು ಪತ್ತೆ ಹಚ್ಚಲು ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟಿಸ್ ಪಡೆಯಲು ಎಸ್‌ಐಟಿ ಪ್ರಯತ್ನಿಸುತ್ತಿದೆ.‌ ಪ್ರಭಾವಿಗಳೇ ಭಾಗಿಯಾಗಿರುವ ಆರೋಪವಿರುವ ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ತನಿಖೆಯಾದರೆ ಮಾತ್ರ ಸಂತ್ರಸ್ತರಿಗೆ ಕನಿಷ್ಠ ನ್ಯಾಯ ಒದಗಿಸಲು ಸಾಧ್ಯವಾಗಲಿದೆ.

VISTARANEWS.COM


on

Vistara Editorial
Koo

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್‌.ಡಿ.ರೇವಣ್ಣ (HD Revanna) ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸುತ್ತಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದರು. ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್‌ ಕೇಸ್‌ನಲ್ಲಿ (Pendrive Case) ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಎಸ್‌ಐಟಿ ವಶಕ್ಕೆ ಸೇರಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ಅವರು ಸೆರೆಸಿಕ್ಕಿದ್ದಾರೆ. ಇಲ್ಲಿಗೆ ಪ್ರಕರಣ ಕುತೂಹಲಕಾರಿ ಘಟ್ಟ ಮುಟ್ಟಿದೆ.

ರೇವಣ್ಣ ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಇವರು ಇನ್ನೂ ಎಸ್‌ಐಟಿಗೆ ಸಿಕ್ಕಿಲ್ಲ. ಪ್ರಜ್ವಲ್‌ ಅವರ ಸುಳಿವು ಪತ್ತೆ ಹಚ್ಚಲು ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟೀಸ್‌ ಪಡೆಯಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಅವರು ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದ್ದರೆ ಅವರ ಬಂಧನ ಪ್ರಕ್ರಿಯೆ ಸುಲಭವಾಗಲಿದೆ. “ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ರೇವಣ್ಣ ನಡೆದುಕೊಳ್ಳುತ್ತಾರೆ. ಪ್ರಜ್ವಲ್‌ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್‌ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ ಪ್ರಜ್ವಲ್‌ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.

ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ, ಸಂತ್ರಸ್ತರು ತುಂಬಾ ಮಂದಿ ಇರುವುದರಿಂದ, ಎಸ್‌ಐಟಿ ಚುರುಕಾಗಿ ತನಿಖೆ ನಡೆಸುತ್ತಿದೆ. ಇನ್ನು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಜೆಡಿಎಸ್‌ ಅನ್ನು ಹಣಿಯಲು ಸಿಕ್ಕಿರುವ ಸುವರ್ಣಾವಕಾಶವೂ ಇದಾಗಿರುವುದರಿಂದ, ಗೃಹ ಇಲಾಖೆಯೂ ಬಹಳ ಚುರುಕಾಗಿಯೇ ಇದರಲ್ಲಿ ತೊಡಗಿಕೊಂಡಿದೆ. ಪೊಲೀಸರ ಚುರುಕುತನಕ್ಕೆ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂಬ ನ್ಯಾಯನಿಷ್ಪಕ್ಷಪಾತತೆ ಕಾರಣವೋ, ಅಥವಾ ಮೇಲಿನವರ ಒತ್ತಡವೋ ಎಂದು ಕೇಳಿದರೆ ಸರಿಯಾದ ಉತ್ತರ ಸಿಗಲಾರದು. ಪ್ರಭಾವಿಗಳು ಅಪರಾಧ ನಡೆಸಿದಾಗ ಅವರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಇಷ್ಟೊಂದು ಚುರುಕಾಗಿ ಕಾರ್ಯಪ್ರವೃತ್ತರಾಗುವುದನ್ನು ಹಿಂದೆ ಎಂದೂ ಈ ರಾಜ್ಯ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಪೊಲೀಸ್‌ ಇಲಾಖೆಯನ್ನು ಚುರುಕಾಗಿಸಿದ ಈ ಪ್ರಕರಣ ವಿಶೇಷವೇ ಸರಿ.

ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ನ್ಯಾಯದ ಮುಂದೆ ಎಲ್ಲರೂ ಒಂದೇ. ಇವೆರಡೂ ಸುಂದರವಾದ ಹೇಳಿಕೆಗಳು. ಆದರೆ ವಾಸ್ತವದಲ್ಲಿ ಇವು ಎಷ್ಟು ಸತ್ಯವಾಗಿವೆ ಎಂಬುದನು ಪರಿಶೀಲಿಸಬೇಕು. ರೇವಣ್ಣ ಹಾಗೂ ಪ್ರಜ್ವಲ್‌ ಇಬ್ಬರೂ ಪ್ರಭಾವಿಗಳು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಪ್ರಮುಖ ನಾಯಕರು. ಸಂತ್ರಸ್ತೆ, ದೂರುದಾರರು ಗಟ್ಟಿಯಾಗಿ ನಿಂತು, ಪೊಲೀಸರು ಸಾಕ್ಷ್ಯಗಳನ್ನು ಕರಾರುವಕ್ಕಾಗಿ ಕಲೆಹಾಕಿ ಕೋರ್ಟ್‌ನಲ್ಲಿ ಮಂಡಿಸಿ, ವಿಚಾರಣೆ ಪಾರದರ್ಶಕವಾಗಿ ನಡೆದರೆ ಆರೋಪಿಗಳಿಗೆ ಶಿಕ್ಷೆಯಾಗಬಹುದು. ಇನ್ನು ಮುಂದಿನ ಕೆಲಸ ಪೊಲೀಸರಿಗೂ ಕೋರ್ಟಿಗೂ ಬಿಟ್ಟದ್ದು. ಈ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ಸಾಬೀತಾಗಿದೆ, ಎಷ್ಟರಲ್ಲಿ ಶಿಕ್ಷೆಯಾಗಿದೆ ಎಂಬ ಅಂಕಿಅಂಶಗಳನ್ನು ತೆಗೆದು ನೋಡಿದರೆ ನಿರಾಶೆಯಾಗುತ್ತದೆ. ಈ ಪ್ರಕರಣವೂ ಆ ಸಾಲಿಗೆ ಸೇರದಿರಲಿ.

“ಅಪರಾಧ ನಡೆದಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ” ಎಂದು ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರೂ ಹೇಳಿದ್ದಾರೆ; ಬಿಜೆಪಿ ನಾಯಕರೂ ಹೇಳಿದ್ದಾರೆ. ಪ್ರಕರಣದ ಗಂಭೀರತೆ ಅವರನ್ನು ಅಲುಗಾಡಿಸಿರುವುದು ಅವರ ವರ್ತನೆಯಲ್ಲಿ ಗೋಚರಿಸುತ್ತಿದೆ. ಪ್ರಜ್ವಲ್‌ ಹಾಗೂ ರೇವಣ್ಣ ಅವರನ್ನು ಸಮರ್ಥಿಸಿಕೊಳ್ಳಲು ಯಾರೂ ಮುಂದಾಗಿಲ್ಲ, ಅದು ಸಾಧ್ಯವೂ ಇಲ್ಲ. ಆದರೆ ಈ ಚುನಾವಣೆಯ ಸಂದರ್ಭದಲ್ಲಿ ಉಂಟಾದ ಮೈತ್ರಿ ಏನಾಗಲಿದೆ? ಈ ಪ್ರಕರಣದಿಂದ ಜೆಡಿಎಸ್‌ಗಂತೂ ಲಾಭವಿಲ್ಲ. ಬಿಜೆಪಿಗೂ ಇದ್ದಂತಿಲ್ಲ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಇದೇ 7ರಂದು ನಡೆಯಲಿದೆ. ಈ ಘಟ್ಟದಲ್ಲೇ ಪ್ರಜ್ವಲ್-‌ ರೇವಣ್ಣ ಪ್ರಕರಣ ಸೃಷ್ಟಿಸಿರುವ ಕೋಲಾಹಲ, ಪಕ್ಷದ ಕಾರ್ಯಕರ್ತರನ್ನು ಹತಾಶೆಗೊಳಿಸಿಲ್ಲ ಅಥವಾ ಮತದಾರರನ್ನು ಜೆಡಿಎಸ್‌ನಿಂದ ವಿಮುಖಗೊಳಿಸಿಲ್ಲ ಎಂದು ಹೇಳುವುದು ಹೇಗೆ? ಇದು ರಾಜ್ಯದ ಚುನಾವಣೆ ಮೇಲೆ ಹೇಗೆ ಪ್ರಭಾವ ಬೀಳುವುದೋ, ಫಲಿತಾಂಶ ಬಂದ ನಂತರವೇ ತಿಳಿಯಬೇಕು. ಆಗ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕತೆಯೂ ನಿರ್ಧಾರವಾಗಬಹುದು. ಕರ್ನಾಟಕದ ಏಕೈಕ ಪ್ರಬಲ ಪ್ರಾದೇಶಿಕ ಪಕ್ಷವೆನಿಸಿದ್ದ ಜೆಡಿಎಸ್‌ಗೆ ಇದರಿಂದ ಏನಾಗಲಿದೆ? ಅದು ಫೀನಿಕ್ಸ್‌ನಂತೆ ಧೂಳಿನಿಂದ ಮೇಲೆದ್ದು ಬರಲಿದೆಯೋ ಅಥವಾ ಸರ್ವನಾಶವಾಗಲಿದೆಯೋ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.

ಸದ್ಯಕ್ಕಂತೂ ಒಬ್ಬ ಆರೋಪಿಯ ಸೆರೆಯಾಗಿದೆ. ಇನ್ನೊಬ್ಬ ಆರೋಪಿಯ ಬಂಧನವಾಗಬೇಕಿದೆ. ನಿಷ್ಪಕ್ಷಪಾತವಾದ ತನಿಖೆ ನಡೆದು ಸತ್ಯ ಹೊರಬೀಳಲಿ. ನೂರಾರು ಸಂತ್ರಸ್ತೆಯರ ನಿಟ್ಟುಸಿರಿಗೆ ಕಾರಣವಾದವರು ಶಿಕ್ಷೆಗೆ ಒಳಗಾಗಲಿ. ಹಾಗೆಯೇ, ಮುಖ ಬ್ಲರ್‌ ಕೂಡ ಮಾಡದೆ ಸಂತ್ರಸ್ತ ಮಹಿಳೆಯರ ಸಾರ್ವಜನಿಕ ಅವಮಾನಕ್ಕೆ ಕಾರಣವಾದವರಿಗೆ ಕೂಡ ಶಿಕ್ಷೆಯಾಗಲಿ.

ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್‌ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌, ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಆದರೆ, ಇದಕ್ಕೆ ಭಾರತವು ಸರಿಯಾಗಿಯೇ ತಿರುಗೇಟು ನೀಡಿದೆ. ಪಾಕಿಸ್ತಾನವು ಪ್ರತಿ ಬಾರಿ ಭಾರತದ ಕಡೆ ಬೆರಳು ತೋರಿಸುವ ಬದಲು ತನ್ನ ದೇಶದ ಸಮಸ್ಯೆಗಳನ್ನು ನಿವಾರಿಸಿದರೆ, ಅಲ್ಲಿನ ಜನ ನೆಮ್ಮದಿಯಿಂದ ನಿದ್ದೆ ಮಾಡಬಹುದು.

VISTARANEWS.COM


on

Pakistan PM
Koo

ಭಾರತದ ಆಂತರಿಕ ವಿಚಾರಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಗಾದೆ ತೆಗೆದ ಪಾಕಿಸ್ತಾನಕ್ಕೆ ಭಾರತ ಮತ್ತೆ ತಕ್ಕ ಮಾರುತ್ತರ ನೀಡಿದೆ. ಪಾಕಿಸ್ತಾನ ಎಲ್ಲ ಆಯಾಮಗಳಲ್ಲಿ ಅತ್ಯಂತ ಸಂಶಯಾತ್ಮಕ ಚಟುವಟಿಕೆ, ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌, ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು. ಸವಾಲಿನ ಸ್ಥಿತಿಯಲ್ಲೂ ಭಾರತ ಶಾಂತಿ ಕಾಪಾಡಲು ಯತ್ನಿಸುತ್ತಿದೆ. ರಚನಾತ್ಮಕ ಮಾತುಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಪಾಕ್‌ ಹೇಳಿಕೆ ಅವರ ವಿನಾಶಕಾರಿ ಮನೋಭಾವವನ್ನು ತೋರಿಸುತ್ತದೆ. ರಾಜತಾಂತ್ರಿಕವಾಗಿ ವಿಷಯಗಳನ್ನು ಚರ್ಚಿಸುವುದಕ್ಕೆ ಭಾರತ ಯಾವಾಗಲೂ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಭಯೋತ್ಪಾದನೆ ಎಂಬುದು ಎಲ್ಲಾ ಧರ್ಮಗಳು ಪ್ರತಿಪಾದಿಸುವ ಶಾಂತಿ ಮತ್ತು ಸೌಹಾರ್ದತೆಗೆ ನೇರ ತದ್ವಿರುದ್ಧವಾದ ವಿಚಾರವಾಗಿದೆ. ಅದು ಒಳ್ಳೆಯ ವಿಚಾರಗಳಿಗೆ ಅಡ್ಡಿಯಾಗಿ ನಿಂತಿದ್ದು, ಹಗೆತನವನ್ನು ಹುಟ್ಟುಹಾಕುತ್ತದೆ ಮತ್ತು ವಿಶ್ವಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಧಾರವಾಗಿರುವ ಗೌರವ ಮತ್ತು ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯರು ಒಟ್ಟಾಗಿ ನಿಂತಿ ಪ್ರಪಂಚಾದ್ಯಂತ ಶಾಂತಿ ಸೌಹಾರ್ದತೆ ಕಾಪಾಡಲು ಪಣತೊಡಬೇಕಿದೆ. ಇಡೀ ಪ್ರಪಂಚವೇ ಒಂದು ಕುಟುಂಬ. ನನ್ನ ದೇಶ ಇದರಲ್ಲಿ ನಂಬಿಕೆಯನ್ನಿಟ್ಟುಕೊಂಡಿದೆ ಎಂದು ರುಚಿರಾ ಹೇಳಿದರು. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ, ತಾರತಮ್ಯ ಮತ್ತು ಹಿಂಸಾಚಾರ ಪಾಕಿಸ್ತಾನದಲ್ಲೇ ಇದೀಗ ಹೆಚ್ಚು ಕಂಡುಬರುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಇನ್ನಿಲ್ಲದ ದೌರ್ಜನ್ಯ ನಡೆಯುತ್ತಿದೆ. ಅಸಹಾಯಕರಾಗಿ ಅವರು ಭಾರತದತ್ತ ರಕ್ಷಣೆಗಾಗಿ ನೋಡುತ್ತಿದ್ದಾರೆ. ಇಸ್ಲಾಂ ಧರ್ಮನಿಂದನೆಯ ಹೆಸರಿನಲ್ಲಿ ಅಲ್ಲಿನ ಹಿಂದೂಗಳನ್ನು ದಮನಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆ ಗಮನಿಸಬೇಕಿದೆ.

ಪಾಕಿಸ್ತಾನದ ಹುಳುಕುಗಳು ಲೋಕದ ಕಣ್ಣಿನ ಮುಂದೆ ಸಾಕಷ್ಟು ಸ್ಪಷ್ಟವಾಗಿಯೇ ಇವೆ. ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ಉಗ್ರರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದನ್ನು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುತ್ತದೆ. ಅಲ್ಲಿಂದ ಕಾಶ್ಮೀರಕ್ಕೆ ಅಕ್ರಮವಾಗಿ ನುಸುಳುವ ಈ ಉಗ್ರರು ಅಲ್ಲಿ ನರಮೇಧ ನಡೆಸುತ್ತಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ದೀರ್ಘಾವಧಿಯ ಎನ್‌ಕೌಂಟರ್‌ಗಳು ಹಾಗೂ ಅಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೆನಪಿಸಿಕೊಳ್ಳಬಹುದು. ಹಿಂದೂ, ಕ್ರೈಸ್ತ, ಸಿಖ್‌ ಧರ್ಮದ ಮಹಿಳೆಯರ ಮೇಲೆ ಪಾಕ್‌ನಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿ- 2024ರ ಪ್ರಕಾರ, ಕಳೆದ ವರ್ಷದಲ್ಲಿ ಪಾಕಿಸ್ತಾನ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇಲ್ಲಿ ಬೇರೆ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಉಗ್ರ ದಾಳಿ ಘಟನೆಗಳು ನಡೆದಿವೆ. 2023ರಲ್ಲಿ ಇಲ್ಲಿ 490 ದಾಳಿಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಸಾಬೀತಾದ ಸಂಗತಿ. ಮತಾಂಧರನ್ನು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿ, ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿ ಅದು ಸೃಷ್ಟಿಸಿದ ಅನಾಹುತ, ಮಾನವ ಹಕ್ಕು ಉಲ್ಲಂಘನೆ ಅಷ್ಟಿಷ್ಟಲ್ಲ. ಇಂಥ ದೇಶಕ್ಕೆ ಭಾರತಕ್ಕೆ ಉಪದೇಶ ಮಾಡುವ ನೈತಿಕ ನೆಲೆಯಿಲ್ಲ. ಕಾಶ್ಮೀರದ ಬಗೆಗೂ ಮಾತಾಡುವ ಹಕ್ಕು ಆ ದೇಶಕ್ಕೆ ಇಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಮೂರು ವರ್ಷಗಳಾದವು. ಈ ಸಮಯದಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಅದಕ್ಕಾಗಿಯೇ ಆ ದೇಶ ಮೈಪರಚಿಕೊಳ್ಳುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ.

ಇದನ್ನೂ ಓದಿ: United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Continue Reading
Advertisement
Pune
ದೇಶ2 hours ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ3 hours ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ3 hours ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ3 hours ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ4 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ4 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್4 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Murder Case
ಕರ್ನಾಟಕ4 hours ago

Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Virat Kohli
ಕ್ರೀಡೆ5 hours ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ5 hours ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ21 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌