Site icon Vistara News

ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ

kadugollara Tradition in tumkur

ತುಮಕೂರಿನ‌‌ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನ ಹೊರಗಿಟ್ಟ ಪರಿಣಾಮ‌ ವಿಪರೀತ ಶೀತದಿಂದ ಬಳಲಿ ಮಗು ಸಾವಿಗೀಡಾದ ಘಟನೆ ನಡೆದಿತ್ತು. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಸಾವನ್ನಪ್ಪಿದೆ. ಇಷ್ಟೇ ಆಗಿದ್ದರೆ ಇದೊಂದು ದುರಂತವಾಗಿ ಉಳಿಯುತ್ತಿತ್ತು ಅಷ್ಟೇ. ಆದರೆ ಮುಂದಿನ ಬೆಳವಣಿಗೆ ಆಶಾದಾಯಕವಾಗಿದೆ. ನಿನ್ನೆ ಬಾಣಂತಿ ಇರುವ  ಸಿದ್ದೇಶ್ ಕುಟುಂಬದವರನ್ನು ಭೇಟಿಯಾದ  ಆರೋಗ್ಯ ಇಲಾಖಾ ಅಧಿಕಾರಿಗಳು, ಬಾಣಂತಿಯನ್ನು ಹೊರಗಿಡದಂತೆ ಅವರ ಮನವೊಲಿಸಿದ್ದರು. ಗೊಲ್ಲ ಸಂಪ್ರದಾಯದಂತೆ ಇನ್ನೂ ಒಂದು ತಿಂಗಳು ಬಾಣಂತಿ ಊರ ಹೊರಗೆ ಇರಬೇಕಿತ್ತು. ಆದರೆ ಮನವೊಲಿಕೆ ಬಳಿಕ ಗುರುವಾರ ಬೆಳಗ್ಗೆ ಬಾಣಂತಿ ವಸಂತಾಗೆ ಊರಿನ ಒಳಗೆ ಇರುವ ಮನೆಯೊಳಗೆ ಕುಟುಂಬ ಪ್ರವೇಶ ಕಲ್ಪಿಸಿದೆ. ಸುಧಾರಣೆಯ ಉಪಕ್ರಮಗಳು ಹೇಗೆ ನಡೆಯಬೇಕು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಗೊಲ್ಲರ ಸಮುದಾಯದಲ್ಲಿ ಇದೊಂದು ಆಚರಣೆ ಬೆಳೆದುಬಂದಿದೆ. ತಮ್ಮ ದೇವರಿಗೆ ಸೂತಕ ಆಗಬಾರದು ಎಂದು ಹೆರಿಗೆ ಆದ ಬಳಿಕ ಬಾಣಂತಿ, ಮಗುವನ್ನು  ಕುಟುಂಬಸ್ಥರು ಊರಿನ ಹೊರಗಿರುವ ಜೋಪಡಿಯಲ್ಲಿ‌ ಬಿಡಲಾಗುತ್ತದೆ. ಬಾಣಂತಿ ಅಲ್ಲಿ ತನ್ನ ಹಾಗೂ ಮಗುವಿನ ಆರೈಕೆ ಮತ್ತು ಆರೋಗ್ಯಗಳನ್ನು ತಾನೇ ನೋಡಿಕೊಳ್ಳಬೇಕಾಗುತ್ತದೆ. ಆರೋಗ್ಯ ಬಿಗಡಾಯಿಸಿದರೂ ಯಾರೂ ಬರುವುದಿಲ್ಲ. ಅಡುಗೆಯನ್ನೂ ತಾನೇ ಮಾಡಿಕೊಳ್ಳಬೇಕಾಗುತ್ತದೆ.  ಹಿಂದೆಂದೋ ಆರಂಭವಾದ ಸೂತಕದ ಈ ಆಚರಣೆ ಇಂದೂ ಹಲವು ಕಡೆ ಗಟ್ಟಿಯಾಗಿ ಬೇರೂರಿದೆ. ಇದರಿಂದಾಗಿ ಗೊಲ್ಲರಲ್ಲಿ ಶಿಶು ಮರಣ, ಬಾಣಂತಿ ಮರಣದ ಪ್ರಮಾಣ ಹೆಚ್ಚೇ ಇದೆ. ಪ್ರಸ್ತುತ ಪ್ರಕರಣದಲ್ಲಿ ಮಳೆ, ಗಾಳಿಯಿದ್ದರೂ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ತಾಯಿ, ಮಗುವನ್ನು ಬಿಡಲಾಗಿತ್ತು. ಹೀಗಾಗಿ ಮಗುವಿಗೆ ಶೀತ ಕಾಣಿಸಿಕೊಂಡಿತ್ತು. ಬಾಣಂತಿ ಹಾಗೂ ಮಗುವಿಗೆ ಕುಟುಂಬದ ಗರಿಷ್ಠ ಗಮನ, ಆರೈಕೆ ಬೇಕಾಗಿರುತ್ತದೆ. ಇಬ್ಬರಿಗೂ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ಸಾಮಾನ್ಯ ಜ್ಞಾನಕ್ಕೇ ಹೊಳೆಯಬೇಕಾದ ವಿಷಯ. ಆದರೂ ಸಾಮಾನ್ಯ ಜ್ಞಾನವನ್ನೂ ಮೂಢನಂಬಿಕೆ ಮೀರಿಸಿದೆ.

ಆದ್ದರಿಂದ ಬಾಣಂತಿಯನ್ನು‌ ಮರಳಿ‌ ಮನೆ ಸೇರಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕ್ರಮ ಶ್ಲಾಘನೀಯ. ಮೌಢ್ಯದಲ್ಲಿ ಮುಳುಗಿದವರ ಮನಸ್ಸನ್ನು ತಿದ್ದುವ, ಶಿಕ್ಷಣ ನೀಡುವ ಪ್ರಯತ್ನಗಳು ನಡೆದುಬಂದಿವೆ. ಇನ್ನಷ್ಟು ನಡೆಯಬೇಕಿವೆ. ಬಾಣಂತಿಯರ ಸಾವಿನ ಪ್ರಮಾಣ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚಿನ ಪ್ರಮಾಣದಲ್ಲಿದೆ. ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದಲ್ಲಿ ಇದು ಇನ್ನೂ ಹೆಚ್ಚು. ರಕ್ತಹೀನತೆ, ರಕ್ತದ ಅತಿ ಒತ್ತಡ, ಪ್ರಸವ ನಂತರ ತೀವ್ರ ರಕ್ತಸ್ರಾವ, ಸೋಂಕುಗಳು ಇದಕ್ಕೆ ಕಾರಣ. ಹೆರಿಗೆ ಸಂದರ್ಭ ಮತ್ತು ನಂತರದ ಕೆಲ ದಿನಗಳ ಅವಧಿ ತಾಯಿ ಮಗುವಿನ ಅಳಿವು ಉಳಿವಿಗೆ ನಿರ್ಣಾಯಕ. ಪ್ರಸವ ನಂತರದ ಸೋಂಕುಗಳಿಗೆ ತಾಯಿ ಸುಲಭವಾಗಿ ತುತ್ತಾಗಲು ರಕ್ತಹೀನತೆ ಪ್ರಮುಖ ಕಾರಣವಾದರೆ, ಕಾಮಾಲೆ ಮತ್ತು ಅಪೌಷ್ಟಿಕತೆ ನವಜಾತ ಶಿಶುಗಳ ಜೀವ ತೆಗೆಯುತ್ತವೆ. ಪ್ರಸೂತಿ ಆರೈಕೆ, ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ, ತಾಯಂದಿರ ಆರೋಗ್ಯ ತರಬೇತಿ… ಹೀಗೆ ತಾಯಿ ಮಗುವಿನ ಆರೈಕೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ನಾವು ಮೌಢ್ಯದೊಂದಿಗೂ ಹೊಡೆದಾಡಬೇಕಿದೆ. ಇಂದು ನಾವು ಚಂದ್ರನಲ್ಲಿಗೇ ನೌಕೆ ಕಳಿಸುವಷ್ಟು, ಮಂಗಳನತ್ತ ದೃಷ್ಟಿ ನೆಡುವಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ‌ ನೆಲದಲ್ಲೇ ಇಂಥ ಮೌಢ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದರೆ ನಾವು ಏನೆಲ್ಲ ಸಾಧಿಸಿಯೂ ವ್ಯರ್ಥ. ಹೀಗಾಗಿ‌ ಬಾಣಂತಿ – ಮಗು ಊರಿಂದ ಹೊರಗಿಡುವ ಆಚರಣೆಯನ್ನು ಸಮುದಾಯದ ಮನವೊಲಿಕೆ, ಶಿಕ್ಷಣ ಮುಂತಾದವುಗಳ ಮೂಲಕ ಸಂಪೂರ್ಣ ನಾಶ ಮಾಡಲು ಎಲ್ಲರೂ ದುಡಿಯಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಶ್ಲಾಘ್ಯ ಪ್ರಯತ್ನ.

Exit mobile version