Site icon Vistara News

ವಿಸ್ತಾರ ಸಂಪಾದಕೀಯ | ಹೊಸ ವರ್ಷ ಶಾಂತಿ, ಸಮೃದ್ಧಿ, ನೆಮ್ಮದಿ ತರಲಿ

New Year 2023

ಸಾಕಷ್ಟು ವಿಷಾದ-ವಿನೋದ, ಲಾಭ-ನಷ್ಟ, ಲಯ-ಸೃಷ್ಟಿಗಳನ್ನು ಒಡಲೊಳಗೇ ಇಟ್ಟುಕೊಂಡು 2022 ಎಂಬ ವರ್ಷ ಕಾಲಗರ್ಭದೊಳಗೆ ಲೀನವಾಗಿದೆ. ಹೊಸ ಉಲ್ಲಾಸ, ಹೊಸ ನಿರೀಕ್ಷೆ, ಹೊಸ ಉತ್ಸಾಹದೊಂದಿಗೆ ನಾವೆಲ್ಲರೂ 2023ರ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ. ಮೇಲ್ನೋಟಕ್ಕೆ ಹೊಸ ವರ್ಷ ಎನ್ನುವುದು ಗೋಡೆಯ ಮೇಲೆ ಕ್ಯಾಲೆಂಡರ್ ಬದಲಿಸುವುದಕಷ್ಟೇ ಸೀಮಿತ. ಆದರೆ, ಅಲೌಕಿಕವಾಗಿ, ಭಾವನಾತ್ಮಕವಾಗಿ, ಸಂಕಲ್ಪಗಳ ದೃಷ್ಟಿಯಿಂದ ಹೊಸ ವರ್ಷ ಎನ್ನುವುದು ನಿಜಕ್ಕೂ ಹೊಸದೇ. ಪ್ರತಿ ವರ್ಷ ಕೆಡಕು-ಒಳಿತು ಇದ್ದೇ ಇರುತ್ತದೆ. ಆದರೆ, ನಾವೆಲ್ಲರೂ ಮುಂಬರುವ ವರ್ಷ ಸಂಪೂರ್ಣವಾಗಿ ಹರ್ಷವನ್ನೇ ತರಲಿ ಎಂದು ಆಶಿಸುತ್ತೇವೆ. ಆ ಕಾರಣಕ್ಕಾಗಿಯೇ, 2023 ಕೂಡ ನಮ್ಮೆಲ್ಲರ ಪಾಲಿಗೆ ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನೇ ಹೊತ್ತು ತರಲಿ; ಎಲ್ಲೆಡೆಯೂ ಸಂತೋಷವೇ ತುಂಬಿರಲಿ.

ಹಾಗೆ ನೋಡಿದರೆ, ಭಾರತದ ಮಟ್ಟಿಗೆ 2022 ತೀರಾ ಕೆಡಕಿಗೆ ಸಾಕ್ಷಿಯಾದ ವರ್ಷವೇನೂ ಅಲ್ಲ. ಇಡೀ ಮನುಕುಲಕ್ಕೆ ಕಂಟಕವಾಗಿದ್ದ ಕೊರೊನಾ ಮಹಾಮಾರಿ ನಿಧಾನವಾಗಿ ತಣ್ಣಗಾದ ವರ್ಷವಿದು. ಹೊಸ ವರ್ಷದಲ್ಲಿ ಈ ವೈರಸ್ ನಾಮಾವಶೇಷವಾಗಲಿ ಎಂದು ಆಶಿಸೋಣ. ರಾಜಕೀಯವಾಗಿ, ಹಲವು ರಾಜ್ಯಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡರೂ, ಕೇಂದ್ರದಲ್ಲಿನ ಸ್ಥಿರತೆಯಿಂದಾಗಿ ಅದಾವುದೂ ಜನರಿಗೆ ಅಷ್ಟೇನೂ ಬಾಧಿಸಲಿಲ್ಲ. ಅಂತಾರಾಷ್ಟ್ರೀಯವಾಗಿ ಭಾರತದ ಕೀರ್ತಿ ಪತಾಕೆ ಮೇಲ್ಮಟ್ಟದಲ್ಲೇ ಇದೆ. ವರ್ಷಾಂತ್ಯದಲ್ಲಿ ಭಾರತಕ್ಕೆ ಜಿ20 ಅಧ್ಯಕ್ಷತೆ ಜವಾಬ್ದಾರಿ ದೊರೆತಿದೆ. ಹೊಸ ವರ್ಷ ಭಾರತದ ನೇತೃತ್ವದಲ್ಲಿ ಅದರ ಕಾರ್ಯ ಚಟುವಟಿಕೆ ಮತ್ತು ವೈಭವವನ್ನು ಕಾಣಬಹುದು. ಆದರೆ, ಬಡವರು ಮತ್ತು ಸಾಮಾನ್ಯ ಜನರು ವಿಚಲಿತವಾದ ವರ್ಷವಿದು. ತೈಲ ದರಗಳು ಗಗನಮುಖಿಯಾದರೆ, ನಿತ್ಯದ ಅಗತ್ಯ ವಸ್ತುಗಳ ದರ ಜೇಬಿಗೆ ಹೊರೆಯಾಯಿತು. ಹೊಸ ವರ್ಷದಲ್ಲಿ ಅಗತ್ಯ ಆಹಾರ ಪದಾರ್ಥಗಳು, ತೈಲ ದರಗಳು ಇಳಿಕೆಯಾದರೆ ಜನ ಸಾಮಾನ್ಯರಿಗೆ ಅದೇ ದೊಡ್ಡ ಭಾಗ್ಯ.

ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ತತ್ತರಿಸಿದ್ದ ಜನರಿಗೆ 2022 ರಿಲ್ಯಾಕ್ಸ್ ನೀಡಿದ ವರ್ಷ. ನ್ಯೂ ನಾರ್ಮಲ್ ಜತೆಗೇ ಓಲ್ಡ್ ನಾರ್ಮಲ್ ಪದ್ಧತಿ ಮತ್ತೆ ಮುನ್ನೆಲೆಗೆ ಬಂತು. ಮುಚ್ಚಿದ್ದ ಶಾಲೆಗಳ ಬಾಗಿಲು ತೆರೆದವು, ವರ್ಷಾಂತ್ಯದ ಹೊತ್ತಿಗೆ ಬಹುತೇಕ ಕಂಪನಿಗಳು ಕಚೇರಿಯಿಂದಲೇ ಕಾರ್ಯನಿರ್ವಹಿಸಲು ಆರಂಭಿಸಿದವು, ಕಡಿತಗೊಂಡ ಸಂಬಳ ಜೇಬು ಸೇರಿತು ಇತ್ಯಾದಿ ಲಾಭಗಳ ಪಟ್ಟಿ ಮಾಡಬಹುದು. ಇದೇ ಸ್ಥಿತಿ ಹೊಸ ವರ್ಷದಲ್ಲೂ ಮುಂದುವರಿಯಲಿ, ಇನ್ನಷ್ಟು ಸಮೃದ್ಧಿ ನೆಲೆಸಲಿ. ಕೊರೊನಾ ಸಾಂಕ್ರಾಮಿಕವು ನಮಗೆಲ್ಲ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೊಸ ವರ್ಷದಲ್ಲಿ ಯೋಗ-ಧ್ಯಾನ ಇತ್ಯಾದಿ ಮಾರ್ಗಗಳ ಮೂಲಕ ಆರೋಗ್ಯಕರ ಜೀವನದತ್ತ ಮುಂದಡಿ ಇಡೋಣ.

ದೇಶದ ಭದ್ರತೆಯ ವಿಷಯದಲ್ಲಿ 2022 ನೆನಪಿಡಬೇಕಾದ ವರ್ಷವಾಗಿದೆ. ಕಾಶ್ಮೀರದ ಗಡಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಉಗ್ರರ ಉಪಟಳವನ್ನು ನಿಯಂತ್ರಿಸುವಲ್ಲಿ ಭಾರತದ ಭದ್ರತಾ ಪಡೆಗಳು ಯಶಸ್ವಿಯಾಗಿವೆ. 172 ಉಗ್ರರನ್ನು ಯೋಧರು ನಿರ್ಮೂಲನೆ ಮಾಡಿದ್ದಾರೆ. ದೇಶದೊಳಗೇ ಭದ್ರತೆಗೆ ಸವಾಲಾಗಿದ್ದ ಪಿಎಫ್ಐ ಸಂಘಟನೆಯ ಮೇಲೆ ನಿಷೇಧ ಹೇರಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ದೇಶಾದ್ಯಂತ ನಿರಂತರವಾಗಿ ದಾಳಿ ಮಾಡುವ ಮೂಲಕ ದೇಶದ್ರೋಹಿ ಶಕ್ತಿಗಳನ್ನು ಮಟ್ಟ ಹಾಕಿತು.
ಈ ಎಲ್ಲ ಕಾರಣಗಳಿಂದ ಹೊಸ ವರ್ಷ ನಾವು ಇನ್ನಷ್ಟು ಸುರಕ್ಷತೆಯ ಭಾವವನ್ನು ಅನುಭವಿಸಬಹುದು.

ಇನ್ನು ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ಸಿನಿಮಾ, ಕ್ರೀಡಾ ಕ್ಷೇತ್ರಗಳಲ್ಲಿ ಭಾರತವು ಸಾಕಷ್ಟು ಮೈಲುಗಲ್ಲಗಳನ್ನು ನೆಟ್ಟಿದೆ. ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳು ಈ ವರ್ಷ ಅಕ್ಷರಶಃ ಭಾರತೀಯ ಚಿತ್ರರಂಗವನ್ನು ಆಳಿವೆ. ಈ ಟ್ರೆಂಡ್ 2023ರಲ್ಲೂ ಮುದುವರಿಯಲಿ.

ಇನ್ನು ರಾಜಕೀಯವಾಗಿ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆದಿವೆ. ಬಿಜೆಪಿ ತನ್ನ ಪ್ರಾಬಲ್ಯವನ್ನು ಈ ವರ್ಷವೂ ಮುಂದುವರಿಸಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಮತ್ತೆ ಚಿಗಿತುಕೊಳ್ಳುವ ಆತ್ಮವಿಶ್ವಾಸದೊಂದಿಗೆ ಪಾದಯಾತ್ರೆ ಮಾಡುತ್ತಿದೆ. 2023ರಲ್ಲಿ ಕರ್ನಾಟಕವು ವಿಧಾನಸಭೆ ಚುನಾವಣೆ ಎದುರಿಸಲಿದೆ. ಆದರೆ ರಾಜಕೀಯ ಪಕ್ಷಗಳ ನಡುವೆ ವೈಮನಸ್ಸು, ದ್ವೇಷ, ವಾಕ್ಸಮರ ಎಲ್ಲವೂ ಒಂದು ಮಿತಿಯಲ್ಲಿರಲಿ. ರಾಜಕೀಯ ಜಿದ್ದಾಜಿದ್ದಿ ಆರೋಗ್ಯಕರವಾಗಿರಲಿ. ಸುಸೂತ್ರವಾಗಿ ಚುನಾವಣೆ ನಡೆದು, ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿ. ಅಭಿವೃದ್ಧಿ ಕೇಂದ್ರೀತ ರಾಜಕಾರಣಕ್ಕೆ ನಾಂದಿ ಹಾಡಲಿ. ಕರ್ನಾಟಕದ ಜನತೆ ಅಂಥದ್ದೊಂದು ಪ್ರಬುದ್ಧ ನಿರ್ಧಾರ ಕೈಗೊಳ್ಳುತ್ತಾರೆಂದು ನಿರೀಕ್ಷಿಸೋಣ. ಗತಿಸಿ ಹೋದ ಕಹಿ ಘಟನೆಗಳನ್ನು ಮರೆತು, ಸಿಹಿ ಸಂಗತಿಗಳ ಆಶಯಯೊಂದಿಗೆ 2023ರ ಹೊಸ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಶುಭವಾಗಲಿ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಜನ

Exit mobile version