Site icon Vistara News

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

Narendra Modi

8 crore new jobs created in last 3 to 4 years: Says PM Narendra Modi In Mumbai

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆಗಲಿದ್ದಾರೆ. ಇಂದು ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟದ ಸಭೆ ನಡೆದು, ಅಲ್ಲಿ ಮೋದಿಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಜೂನ್‌ 9ರಂದು ಕೆಲವು ಸಚಿವರೊಂದಿಗೆ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೈತ್ರಿಕೂಟದ ಎಲ್ಲ ಸದಸ್ಯರ ಬೆಂಬಲ ಇರುವುದರಿಂದ, ನೂತನ ಸರಕಾರ ರಚನೆ ಕಷ್ಟವಾಗಲಾರದು. ಹತ್ತು ವರ್ಷಗಳ ಅನುಭವವೂ ಮೋದಿಯವರ ಬೆನ್ನಿಗೆ ಇದೆ. ಆದ್ದರಿಂದ ಕೇಂದ್ರ ಸರಕಾರ ರಚನೆಯ ಬಗ್ಗೆ ಅವರಿಗೆ ಯಾರೂ ಕಿವಿಮಾತು ಹೇಳುವುದು ಬೇಕಿಲ್ಲ. ಆದರೆ ಮೈತ್ರಿಧರ್ಮದ ಪಾಲನೆ ಮಾಡಿಕೊಂಡು ಈ ಬಾರಿ ಸರಕಾರ ಮುನ್ನಡೆಸುವುದು ಬಿಜೆಪಿಗೆ ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಎನ್‌ಡಿಎ ಸಭೆಯಲ್ಲಿ ಮೋದಿಯವರು ಭವಿಷ್ಯದ ಹಲವು ಮುನ್ನೋಟದ ನುಡಿಗಳನ್ನು ಆಡಿದ್ದಾರೆ. ದೇಶದ ಜಿಡಿಪಿಯನ್ನು ಇನ್ನಷ್ಟು ಹೆಚ್ಚಿಸುವುದು, ಯುವಜನತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು, ಮಹಿಳೆಯರ ಸಬಲೀಕರಣ, ಹಳ್ಳಿಗಳಿಗೆ ಆರೋಗ್ಯಸೇವೆ ಮತ್ತು ಡಿಜಿಟಲ್‌ ಇಂಡಿಯಾದ ವಿಸ್ತರಣೆ, ಫಲಾನುಭವಿ ಯೋಜನೆಗಳ ವಿಸ್ತರಣೆಯ ಮೂಲಕ ವಿಕಸಿತ ಭಾರತದ ಸಾಕ್ಷಾತ್ಕಾರ, ರೈತರ ಸಬಲೀಕರಣ- ಇತ್ಯಾದಿಗಳು ಈ ಭಾಷಣದಲ್ಲಿ ಸ್ಥಾನ ಪಡೆದಿದ್ದವು. ಮೂಲಸೌಕರ್ಯದಂಥ ವಿಚಾರಗಳಲ್ಲಿ ಮೋದಿ ಸರಕಾರ ದೇಶದ ಬಹಳಷ್ಟು ಹಳ್ಳಿಗಳನ್ನೂ ನಗರಗಳನ್ನೂ ತಲುಪಿದೆ. ವಂದೇಮಾತರಂ ರೈಲುಗಳೂ ಎಕ್ಸ್‌ಪ್ರೆಸ್‌ವೇಗಳೂ ಗ್ರಾಮಸಡಕ್‌ ಯೋಜನೆಗಳೂ ಇದಕ್ಕೆ ಉದಾಹರಣೆ. ಜೈಶಂಕರ್‌, ನಿತಿನ್‌ ಗಡ್ಕರಿ ಮೊದಲಾದ ಮೋದಿ ಎರಡನೇ ಅವಧಿಯ ಸಚಿವರು ಅದ್ಭುತ ಅನ್ನಿಸುವಂಥ ಕಾರ್ಯವೈಖರಿಯನ್ನೇ ಮೆರೆದಿದ್ದಾರೆ. ಇಂಥ ಕರ್ತವ್ಯನಿಷ್ಠರನ್ನು ಮುಂದಿನ ಅವಧಿಗೂ ಮುಂದುವರಿಸಬೇಕಿದೆ. ಆಗ ಮಾತ್ರ ಅವರು ಕೈಗೊಂಡ ಕೆಲಸಗಳು ತಾರ್ಕಿಕ ಅಂತ್ಯ ಕಾಣಬಹುದು.

ಜಾಗತಿಕವಾಗಿ ಎರಡು ಯುದ್ಧಗಳು ನಡೆಯುತ್ತಿರುವ ಈ ಪ್ರಕ್ಷುಬ್ಧ ಅವಧಿಯಲ್ಲಿ ಮೂರನೇ ಬಾರಿಗೆ ಒಂದು ಸರಕಾರ ಆಯ್ಕೆಯಾಗುವುದು ಅಸಾಧಾರಣ ಸಾಧನೆ. ಜಾಗತಿಕ ಅನಿಶ್ಚಿತತೆ ಇರುವ ಸಮಯದಲ್ಲಿ ನಮ್ಮ ದೇಶದ ಜನತೆ ನಿರಂತರತೆ, ಸ್ಥಿರತೆ ಬಯಸಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಗಮನವನ್ನು ವಿಶ್ವ ನಾಯಕರು ಸ್ವಾಗತಿಸಿದ್ದಾರೆ. 121ಕ್ಕೂ ಹೆಚ್ಚು ವಿಶ್ವ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತಹ ವಿಶ್ವ ನಾಯಕರು ಮೋದಿಯವರ ಪುನರಾಗಮನವನ್ನು ಸ್ವಾಗತಿಸಿದ್ದು, ಇವರೊಂದಿಗೆ ಮೋದಿ ವೈಯಕ್ತಿಕ ಸಂಬಂಧವನ್ನೂ ಆತ್ಮೀಯವಾಗಿ ಕಾಪಾಡಿಕೊಂಡಿರುವುದು ಉಲ್ಲೇಖನೀಯ.

ಇನ್ನು ಮೈತ್ರಿಕೂಟದಲ್ಲಿರುವ ಇಬ್ಬರು ಬಲಿಷ್ಠ ಪ್ರಾದೇಶಿಕ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂಬಂಧ. ಇದು ಎನ್‌ಡಿಎಗೆ ಈ ಅವಧಿಯಲ್ಲಿ ಮುಖ್ಯವಾದುದು. ಇಬ್ಬರಿಗೂ ಬಹುತೇಕ ಮೋದಿಯವರಷ್ಟೇ ವಯಸ್ಸು ಆಗಿದೆ. ಇಬ್ಬರೂ ಮಾಗಿದ ರಾಜಕಾರಣಿಗಳು; ಅನವಶ್ಯಕ ರಿಸ್ಕ್‌ ತೆಗೆದುಕೊಳ್ಳುವವರಲ್ಲ. ಈ ಸಲದ ಫಲಿತಾಂಶ ಅವರಿಗೂ ಹಲವು ಪಾಠ ಕಲಿಸಿದೆ. ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲೂ ಬಿಜೆಪಿ ಸಾಕಷ್ಟು ವಿಸ್ತರಿಸಿದೆ; ಈ ಪಕ್ಷಗಳಿಗೆ ಸಮಾನವಾಗಿಯೇ ಸ್ಥಾನಬಲ ಹೆಚ್ಚಿಸಿಕೊಂಡಿದೆ. ಈ ನಾಯಕರಿಗೆ ತಮ್ಮ ರಾಜ್ಯದ ಸಂಬಂಧವನ್ನು ಕೇಂದ್ರದೊಡನೆ ಕಾಪಾಡಿಕೊಂಡು, ರಾಜ್ಯದಲ್ಲೂ ಬೆಲೆ ಭದ್ರಪಡಿಸಿಕೊಂಡು ಉಳಿಯುವ ಹಂಬಲವಿದೆ. ಇಬ್ಬರೂ ಕೇಂದ್ರದಲ್ಲೂ ಸಾಕಷ್ಟು ಅಧಿಕಾರ ಅನುಭವಿಸಿದವರೇ. ಹೀಗಾಗಿ ಒಂದೆರಡು ಸಚಿವ ಸ್ಥಾನಗಳಿಗಾಗಿ ಚೌಕಾಸಿ ಮಾಡಿದರೂ, ಸಂಬಂಧ ಹರಿದುಕೊಳ್ಳುವಷ್ಟರ ಮಟ್ಟಿಗೆ ಯಾರೂ ಹೋಗುವವರಲ್ಲ. ಕರ್ನಾಟಕದ ಜೆಡಿಎಸ್‌ ಕೂಡ ಎರಡು ಸ್ಥಾನಗಳನ್ನು ಹೊಂದಿದ್ದು, ಒಂದು ಸಚಿವ ಸ್ಥಾನವನ್ನಂತೂ ಪಡೆಯುವುದು ಶಕ್ಯವಿದೆ.

ಹೀಗಾಗಿ, ಈ ಬಾರಿಯೂ ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು ಎನ್ನಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

ಇದನ್ನೂ ಓದಿ: Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Exit mobile version