ಆರ್ಥಿಕ ಕುಸಿತದಿಂದ ತತ್ತರಿಸುತ್ತಿರುವ, ಸರಿಯಾದ ಆಡಳಿತಾತ್ಮಕ ಸರ್ಕಾರವೂ ಇಲ್ಲದ ಪಾಕಿಸ್ತಾನದಲ್ಲಿ (Pakistan) ಮಂಗಳವಾರ ಎರಡು ಭಯೋತ್ಪಾದಕ ದಾಳಿಗಳು ನಡೆದಿವೆ. ಒಂದೇ ವಾರದಲ್ಲಿ ಮೂರು ಉಗ್ರ ದಾಳಿಗಳು ಘಟಿಸಿವೆ. ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ಮೇಲೆ ಬಲೂಚಿ ಬಂಡುಕೋರರು ಸೋಮವಾರ ದಾಳಿ ನಡೆಸಿದ್ದಾರೆ. ಪಾಕಿಸ್ತಾನದಲ್ಲಿ ನಿಷೇಧಿತವಾಗಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ)ಯ ಮಜೀದ್ ಬ್ರಿಗೇಡ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಬಲೂಚಿಸ್ತಾನದಲ್ಲಿ ಚೀನಾದ ಹಸ್ತಕ್ಷೇಪವನ್ನು ವಿರೋಧಿಸುತ್ತಿರುವ ಸಂಘಟನೆ ಬಿಎಲ್‌ಎ. ಇಂದು ಇನ್ನೊಂದು ಕಡೆ, ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ನಲ್ಲಿ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ದಾಸು ಶಿಬಿರಕ್ಕೆ ಪ್ರಯಾಣಿಸುತ್ತಿದ್ದ ಚೀನಾದ ಎಂಜಿನಿಯರ್‌ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ. ಈ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಮೃತಪಟ್ಟಿದ್ದಾನೆ. ಇದೂ ಕೂಡ ಚೀನೀ ಪ್ರಜೆಗಳನ್ನೇ ಗುರಿಯಾಗಿರಿಸಿಕೊಂಡ ದಾಳಿಯಾದ್ದರಿಂದ ಬಲೂಚಿ ದಾಳಿಕೋರರೇ ಇದನ್ನು ನಡೆಸಿರಬಹುದು ಎನ್ನಲಾಗಿದೆ. ಮಾರ್ಚ್ 20ರಂದು ಇದೇ ಸಂಘಟನೆ ಗ್ವಾದರ್‌ನಲ್ಲಿರುವ ಮಿಲಿಟರಿ ಗುಪ್ತಚರ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ಎಂಟು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು.
ಪಾಕಿಸ್ತಾನದಲ್ಲಿ, ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನವೆಂಬರ್ 2022ರಿಂದ ಉಲ್ಬಣಗೊಂಡಿದೆ. ಅಲ್ಲಿಯವರೆಗೆ ಸರ್ಕಾರ ಮತ್ತು ನಿಷೇಧಿತ ಉಗ್ರಗಾಮಿ ಗುಂಪು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ನಡುವೆ ಕದನ ವಿರಾಮವಿತ್ತು. ಒಂದು ವಾರದಲ್ಲಿ ಪಾಕಿಸ್ತಾನದಲ್ಲಿ ಚೀನಾದ ಹಿತಾಸಕ್ತಿಗಳ ಮೇಲೆ ನಡೆದ ಮೂರನೇ ಪ್ರಮುಖ ದಾಳಿ ಇದಾಗಿದೆ. ಮೊದಲ ಎರಡು ದಾಳಿಗಳು ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ವಾಯುನೆಲೆ ಮತ್ತು ಆಯಕಟ್ಟಿನ ಬಂದರಿನಲ್ಲಿ ನಡೆದಿದ್ದವು. ಅಲ್ಲಿ ಚೀನಾ ಮೂಲಸೌಕರ್ಯ ಯೋಜನೆಗಳಲ್ಲಿ ಶತಕೋಟಿ ಹೂಡಿಕೆ ಮಾಡುತ್ತಿದೆ. ಪಶ್ಚಿಮ ಪ್ರಾಂತ್ಯದ ಖೈಬರ್-ಪಖ್ತುಂಕ್ವಾದಲ್ಲಿ ರಸ್ತೆ ನಿರ್ಮಾಣ ಯೋಜನೆಯ ಭಾಗವಾಗಿ ಚೀನಾದ ಎಂಜಿನಿಯರ್ಗಳು ಮತ್ತು ಪಾಕಿಸ್ತಾನಿ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹತ್ವದ ಅಣೆಕಟ್ಟು ಯೋಜನೆಗೆ ನೆಲೆಯಾಗಿರುವ ದಾಸು ಈ ಹಿಂದೆಯೂ ದಾಳಿಗೆ ಗುರಿಯಾಗಿದ್ದವು. 2021ರಲ್ಲಿ ದಾಸುವಿನಲ್ಲಿ ನಡೆದ ದಾಳಿಯಲ್ಲಿ ಒಂಬತ್ತು ಚೀನೀ ಪ್ರಜೆಗಳು ಮತ್ತು ಇಬ್ಬರು ಪಾಕಿಸ್ತಾನಿ ಮಕ್ಕಳು ಸಾವನ್ನಪ್ಪಿದ್ದರು. ದಾಸು ಜಲವಿದ್ಯುತ್ ಯೋಜನೆಯ ಸ್ಥಳಕ್ಕೆ ಚೀನಾದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಈ ಘಟನೆ ನಡೆದಿತ್ತು.
2022ರಲ್ಲಿ ವಿಶ್ವಾದ್ಯಂತ ಭಯೋತ್ಪಾದನೆ ಸಂಬಂಧಿತ ಸಾವುಗಳಲ್ಲಿ ಪಾಕಿಸ್ತಾನವು ಎರಡನೇ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021ರಲ್ಲಿ 292 ಇದ್ದ ಸಾವಿನ ಸಂಖ್ಯೆ ಕಳೆದ ವರ್ಷದ ಶೇ.120 ಏರಿಕೆ ದಾಖಲಿಸಿದ್ದು, ಒಟ್ಟು 643 ಸಾವು ವರದಿಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಹೆಚ್ಚಳವನ್ನು ಕಾಣುತ್ತಿದೆ. ಭಯೋತ್ಪಾದನೆ ಸಂಬಂಧಿಸಿ ಜನರು ಸಾವನ್ನಪ್ಪುತ್ತಿರುವ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕು ಸ್ಥಾನ ಮೇಲಕ್ಕೆ ಹೋಗಿದ್ದು ಸದ್ಯ ಆರನೇ ಸ್ಥಾನದಲ್ಲಿದೆ. ಇದೆಲ್ಲವೂ ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿಯಲ್ಲಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚೀನಾದ ತಗಾದೆಗೆ ಭಾರತದ ಉತ್ತರ ಒಂದೇ- ಅರುಣಾಚಲ ನಮ್ಮದು
ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಈ ಹಿಂದೆಯೇ ಸಾಬೀತಾದ ಸಂಗತಿ. ಭಯೋತ್ಪಾದನೆಯ ಬೀಜವನ್ನು ಬಿತ್ತಿ, ಬೆಳೆಸಿದ್ದೇ ಪಾಕ್. ಈಗ ಪಾಕ್ ಸ್ವತಃ ಇದರ ಫಲ ಉಣ್ಣುತ್ತಿದೆ. ಪಾಕಿಸ್ತಾನದ ಭಯೋತ್ಪಾದನೆಯ ರಫ್ತು ನೀತಿ ದಾರುಣ ವೈಫಲ್ಯ ಕಂಡಿರುವುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ತನ್ನದೇ ನೆಲವಾದ ಬಲೂಚಿಸ್ತಾನದಲ್ಲಿ ಪಾಕ್‌ನ ಉಗ್ರವಾದದ ನೀತಿ ಅದಕ್ಕೇ ತಿರುಗಿ ಬಿತ್ತು. ಅಲ್ಲಿಯೇ ಪ್ರತ್ಯೇಕತಾವಾದಿಗಳು ಹುಟ್ಟಿಕೊಂಡು ಪಾಕ್‌ನ ವಿರುದ್ಧವೇ ಸಾರಿರುವ ಸಮರ ಈಗ ಉಲ್ಬಣಾವಸ್ಥೆಯಲ್ಲಿದೆ. ಅಲ್ಲಿನ ಭಯೋತ್ಪಾದನೆ ಸಂಬಂಧಿತ ಸಾವುಗಳಿಗೆ ಅತಿ ದೊಡ್ಡ ಕಾರಣವಾಗಿರುವುದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ). ಕಳೆದ ವರ್ಷ ಅಲ್ಲಿ ಭಯೋತ್ಪಾದನೆ ಸಂಬಂಧಿಸಿ ಆದ ಸಾವುಗಳಲ್ಲಿ ಶೇ. 36 ಪಾಲು ಈ ಉಗ್ರ ಸಂಘಟನೆಯದ್ದಿದೆ. ಮತ್ತೊಂದೆಡೆ ಆಫ್ಘನ್ ಮೂಲದ ತಾಲಿಬಾನ್‌ಗಳು ಸರಣಿ ದಾಳಿ ನಡೆಸುತ್ತಿದ್ದಾರೆ. ತಾಲಿಬಾನಿಗಳಿಗೆ ದೊಡ್ಡ ಬೆಂಬಲ ನೀಡಿದ್ದೇ ಪಾಕ್. ಈಗ ಅದು ಭಸ್ಮಾಸುರನಾಗಿದೆ. ಇಂದು ಸಿರಿಯಾ ಮುಂತಾದೆಡೆಗೆ, ಯುರೋಪ್‌ನ ಹಲವೆಡೆಗೆ ವ್ಯಾಪಿಸಿರುವ ಭಯೋತ್ಪಾದನೆಯ ಕಾಳ್ಗಿಚ್ಚಿನ ಹಿಂದೆ ಪಾಕ್‌ನ ದೊಡ್ಡ ಪಾಲಿದೆ.
ಭಾರತವನ್ನು ದ್ವೇಷಿಸುತ್ತ ಪಾಕ್ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಪಾಕ್‌ನ ಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಗಂಟೆ ಕೂಡ. ನೆರೆಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ವ್ಯಾಪಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಅಲ್ಲಿನ ಅಸ್ಥಿರತೆ ಭಾರತದ ಭದ್ರತೆಗೆ ತೊಂದರೆ ಉಂಟುಮಾಡದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಿದೆ.