Site icon Vistara News

ವಿಸ್ತಾರ ಸಂಪಾದಕೀಯ: ಅರುಣಾಚಲ ವಿಚಾರದಲ್ಲಿ ಅಮೆರಿಕದ ನಿಲುವು ಭಾರತಕ್ಕೆ ಆನೆಬಲ

Arunachal Pradesh

“ಅರುಣಾಚಲ ಪ್ರದೇಶವು ಭಾರತದ ಭೂಪ್ರದೇಶ” ಎಂದು (Arunachal Pradesh) ಅಮೆರಿಕ ಸ್ಪಷ್ಟವಾಗಿ ಹೇಳಿದೆ. ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಅರುಣಾಚಲ ಪ್ರದೇಶದ ಕುರಿತು ಮಾತನಾಡಿದ್ದಾರೆ. “ಅರುಣಾಚಲ ಪ್ರದೇಶವು ಭಾರತದ್ದು ಎಂದು ಅಮೆರಿಕ ಗುರುತಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಚೀನಾ ಯಾವುದೇ ರೀತಿಯ ಅತಿಕ್ರಮಣ, ನಮ್ಮ ಭೂಪ್ರದೇಶ ಎಂಬುದಾಗಿ ಹೇಳುವುದು, ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದು ಸೇರಿ ಹಲವು ಚಟುವಟಿಕೆಗಳನ್ನು ಅಮೆರಿಕ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ. ಇದು ಹಲವು ರೀತಿಯಲ್ಲಿ ಭಾರತಕ್ಕೆ ಉಪಕಾರಿ. ಮೊದಲನೆಯದಾಗಿ, ಅರುಣಾಚಲ ಪ್ರದೇಶ ನಮ್ಮದು ಎನ್ನುವ ಭಾರತದ ಧ್ವನಿಗೆ ಅಮೆರಿಕ ಧ್ವನಿಗೂಡಿಸಿದಂತಾಗಿ, ಭಾರತಕ್ಕೆ ಹೆಚ್ಚಿನ ಬಲ ಬರುತ್ತದೆ. ಎರಡನೆಯದಾಗಿ, ಅರುಣಾಚಲ ಪ್ರದೇಶ ಯಾರ ವ್ಯಾಪ್ತಿಗೆ ಸೇರಿದ್ದು ಎಂದು ಜಾಗತಿಕ ಸಮುದಾಯ ಭಾವಿಸಬೇಕು ಎಂಬ ವಿಚಾರದಲ್ಲಿ ಅಮೆರಿಕ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಇನ್ನುಳಿದ ರಾಷ್ಟ್ರಗಳೂ ಅನುಸರಿಸುತ್ತವೆ. ಮೂರನೆಯದಾಗಿ, ಇದು ಸದಾ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಲು ತಿಣುಕಾಡುತ್ತಲೇ ಇರುವ, ಆಗಾಗ ಉದ್ಧಟತನ ಎಸಗುವ ಚೀನಾಗೆ ಮಾಡಿದ ಮುಖಭಂಗವೂ ಹೌದು.

ಇತ್ತೀಚೆಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಂಗ್‌ ಕ್ಸಿಯೋಗಾಂಗ್‌ ಅವರು ಅರುಣಾಚಲ ಪ್ರದೇಶದ ಕುರಿತು ಉದ್ಧಟತನದ ಹೇಳಿಕೆ ನೀಡಿದ್ದರು. “ಭಾರತವು ಅಕ್ರಮವಾಗಿ ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಿದೆ. ಅರುಣಾಚಲ ಪ್ರದೇಶವು ಎಂದಿಗೂ ಚೀನಾದ ಅವಿಭಾಜ್ಯ ಅಂಗವಾಗಿದೆ” ಎಂದು ಹೇಳಿದ್ದರು. ಇದಕ್ಕೆ ಭಾರತ ಕೂಡ ಚೀನಾಗೆ ಸರಿಯಾಗಿಯೇ ತಿರುಗೇಟು ನೀಡಿತ್ತು. ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತದೆ. ಕಳೆದ ಬಾರಿ ನರೇಂದ್ರ ಮೋದಿಯವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗಲೂ ಚೀನಾ ವಿರೋಧಿಸಿತ್ತು. ಟಿಬೆಟ್‌ ವಿಚಾರದಲ್ಲಿ ದಲಾಯಿ ಲಾಮ ಅವರಿಗೆ ಆಶ್ರಯ ನೀಡಿರುವ ಭಾರತದ ಕ್ರಮ ಇಂದಿಗೂ ಚೀನಾಗೆ ಇರಸುಮುರಿಸು. ಇಂತಹ ಪರಿಸ್ಥಿತಿಯ ಮಧ್ಯೆಯೇ, ಅಮೆರಿಕವು ಭಾರತದ ಪರವಾಗಿ ನಿಂತಿರುವುದು, ಅರುಣಾಚಲ ಪ್ರದೇಶವು ಭಾರತದ್ದು ಎಂಬುದಾಗಿ ಹೇಳಿರುವುದು ಚೀನಾಗೆ ಹಿನ್ನಡೆಯಾಗಿದೆ.

ಅರುಣಾಚಲ ಪ್ರದೇಶದ ಬಗೆಗೆ ಚೀನಾದ ದಾಹ ಇಂದು ನಿನ್ನೆಯದಲ್ಲ. ಅದು ಅರುಣಾಚಲದ 90,000 ಎಕರೆ ಪ್ರದೇಶವನ್ನು ತನ್ನದೆಂದು ವಾದಿಸುತ್ತದೆ. ಇಡೀ ಅರುಣಾಚಲ ಪ್ರದೇಶವೇ ದಕ್ಷಿಣ ಟಿಬೆಟ್‌ ಎಂಬುದು ಅದರ ಹಳೇ ಪ್ರತಿಪಾದನೆ. ಆದರೆ ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ನಮಗೇ ಸೇರಿದ್ದು, ಹೆಸರು ಬದಲಿಸಿದ ಮಾತ್ರಕ್ಕೆ ವಾಸ್ತವ ಬದಲಿಸಲಾಗದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ವರ್ಷದ ಹಿಂದೆ ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಚೀನಾದ ಸೇನೆ ಉಪಟಳ ಉಂಟುಮಾಡಿತ್ತು. ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ ನಡೆದಿದ್ದು, ಉಭಯ ಕಡೆಗಳ ಸೈನಿಕರಿಗೂ ಗಾಯಗಳಾಗಿದ್ದವು. ಅಂದರೆ ಚೀನಾ ಬರೀ ಬೊಗಳುವ ಶ್ವಾನವಲ್ಲ; ಕಚ್ಚಲೂ ಹೇಸದ ಸ್ವಭಾದ ಅದರದ್ದು. ಹೀಗಾಗಿ ಅರುಣಾಚಲದ ವಿಚಾರವನ್ನು ಎತ್ತಿ ಅದು ತಗಾದೆ ತೆಗೆಯುತ್ತ ಇರುವವರೆಗೂ ನಾವು ಕಟ್ಟೆಚ್ಚರ ವಹಿಸುತ್ತಲೇ ಇರಬೇಕಾದ್ದು ಅಗತ್ಯ. ಅರುಣಾಚಲದಲ್ಲಿ ಕೆಲವು ಕಡೆ ಗಡಿ ಸರಿಯಾಗಿ ನಿರ್ಧಾರವಾಗಿಲ್ಲ ಎಂಬುದು ನಿಜ. ಇಲ್ಲಿ ಚೀನಾ ಸೈನ್ಯ ಸುಲಭವಾಗಿ ಒಳತೂರಿ ಬರುವುದಕ್ಕೆ ಸಾಕಷ್ಟು ಆಸ್ಪದವಿದೆ ಎಂಬುದೂ ನಿಜ. 1962ರ ಯುದ್ಧದ ವೇಳೆಗೆ ಚೀನಾದ ಸೈನಿಕರು ಸುಮಾರು 20 ಕಿಲೋಮೀಟರ್‌ನಷ್ಟು ಒಳಬಂದು, ಯುದ್ಧವಿರಾಮದ ಬಳಿಕ ಹಿಂದೆ ಸರಿದಿದ್ದರು. ಆಗ ಅಂತಾರಾಷ್ಟ್ರೀಯ ಸಮುದಾಯ ಭಾರತದ ಜತೆಗೆ ನಿಂತಿತ್ತು.

ಸಂಪಾದಕೀಯ: ವಿಸ್ತಾರ ಸಂಪಾದಕೀಯ: ನನೆಗುದಿಗೆ ಬಿದ್ದ ಪಬ್ಲಿಕ್‌ ಪರೀಕ್ಷೆಗೆ ಮೋಕ್ಷ ಕೊಡಿ, ವಿದ್ಯಾರ್ಥಿಗಳ ಸಂಕಟ ತಪ್ಪಿಸಿ

ಸದ್ಯ ಭಾರತದ ನಿಲುವನ್ನು ಎತ್ತಿ ಹಿಡಿದಿರುವ ಅಮೆರಿಕದ ಕ್ರಮ, ಅರುಣಾಚಲದಲ್ಲಿ ಭಾರತ ಸಾರ್ವಭೌಮತ್ವವನ್ನು ನಿಸ್ಸಂದೇಹವಾಗಿ ಸ್ಥಾಪಿಸಿದೆ. ಅರುಣಾಚಲ ಪ್ರದೇಶವೇನೂ ಅಂತಾರಾಷ್ಟ್ರೀಯ ವಿವಾದದ ವಿಷಯವಲ್ಲವಾದರೂ, ಅಮೆರಿಕದಂಥ ಬಲಿಷ್ಠ ದೇಶಗಳ ನಿಲುವು ನಮಗೆ ಪೂರಕವಾಗಿರುವುದು ನಿಶ್ಚಿತವಾಗಿಯೂ ನಮಗೆ ಇನ್ನಷ್ಟು ಬಲವನ್ನು ತುಂಬುತ್ತದೆ. ಭಾರತದ ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆ, ಠಕ್ಕ ಚೀನಾದ ಬಗ್ಗೆ ಸದಾ ಎಚ್ಚರ, ಅಕ್ಕಪಕ್ಕದ ದೇಶಗಳ ಜತೆಗಿನ ಆತ್ಮೀಯ ರಾಜನೀತಿ, ಅಮೆರಿಕದಂಥ ಮಿತ್ರ ರಾಷ್ಟ್ರಗಳನ್ನು ಕಾಪಾಡಿಕೊಳ್ಳುವ ಜಾಣ್ಮೆಗಳ ಮೂಲಕ ನಾವು ಅರುಣಾಚಲ ಪ್ರದೇಶವನ್ನು ಕಾಪಾಡಿಕೊಳ್ಳಬಲ್ಲೆವು

Exit mobile version