Site icon Vistara News

ವಿಸ್ತಾರ ಸಂಪಾದಕೀಯ: ಈಶಾನ್ಯ ಭಾರತದಲ್ಲಿ ಶಾಂತಿ ಸ್ಥಾಪನೆಯತ್ತ ಹೆಜ್ಜೆ

Vistara Editorial, A step towards peace in North East India

ಸ್ಸಾಂನ ಸಶಸ್ತ್ರ ಬಂಡುಕೋರ ಬಣವಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (United Liberation Front of Asom- ULFA) ಜೊತೆಗೆ ಕೇಂದ್ರ ಸರ್ಕಾರ ಹಾಗೂ ಅಸ್ಸಾಮ್ ಸರ್ಕಾರಗಳು ಶಾಂತಿ ಒಪ್ಪಂದಕ್ಕೆ (Peace Accord) ಸಹಿ ಹಾಕಿವೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (himanta biswa sarma) ಹಾಜರಿದ್ದರು. ಇದರೊಂದಿಗೆ ಉಲ್ಫಾದ ಈ ಬಣ ಶಸ್ತ್ರ ತ್ಯಾಗ ಮಾಡಿ, ಮುಖ್ಯ ವಾಹಿನಿಯ ಜತೆಗೆ ಬೆರೆಯಲು ನಿರ್ಧರಿಸಿದೆ. ಅರಬಿಂದಾ ರಾಜ್‌ಖೋವಾ ನೇತೃತ್ವದ ಬಣದೊಂದಿಗೆ ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದ ಬೇಷರತ್ ಮಾತುಕತೆ ನಡೆಸುತ್ತಿತ್ತು. ಅಸ್ಸಾಮ್‌ನಲ್ಲಿ ದಶಕಗಳಿಂದ ಬಂಡಾಯದ ಹಿಂಸಾಚಾರ ನಡೆಯುತ್ತಿದ್ದು, ಈ ಒಪ್ಪಂದ ಮೂಲಕ ಈ ಹಿಂಸಾಚಾರಕ್ಕೆ ಅಂತ್ಯ ಹಾಡುವ ಸಾಧ್ಯತೆಗಳಿವೆ. ಉಲ್ಫಾದ ಇನ್ನೊಂದು ಬಣ ಈಗಲೂ ಹಿಂಸಾಚಾರ ಪ್ರೇರಿತ ಉಗ್ರ ಬಂಡಾಯದಲ್ಲಿ ನಂಬಿಕೆ ಇಟ್ಟಿದ್ದು, ಅದು ಕೂಡ ಮುಂದೆ ಎಂದಾದರೂ ಶಾಂತಿಗೆ ಒಲಿಯಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು(Vistara Editorial).

1979ರಲ್ಲಿ ಸಾರ್ವಭೌಮ ಅಸ್ಸಾಂನ ಬೇಡಿಕೆಗಾಗಿ ಉಲ್ಫಾ ಸಂಘಟನೆಯನ್ನು ರಚಿಸಿದ ಬಂಡುಕೋರರು ವಿಧ್ವಂಸಕ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಇದನ್ನು 1990ರಲ್ಲಿ ಭಾರತ ಸರ್ಕಾರ ನಿಷೇಧಿಸಿತ್ತು. ನೂರಾರು ಬಂಡುಕೋರರು ಹಾಗೂ ಅಮಾಯಕರು ಈ ಸಶಸ್ತ್ರ ಹೋರಾಟದಲ್ಲಿ ಬಲಿಯಾಗಿದ್ದಾರೆ. ನೂರಾರು ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ನಷ್ಟವಾಗಿದೆ. ಸದ್ಯದ ಶಾಂತಿ ಒಪ್ಪಂದ ಖುಷಿ ಕೊಡುವ ಸಂಗತಿಯಾಗಿದ್ದು, ಅಸ್ಸಾಮ್‌ನ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಹಾರೈಸಬಹುದು.

ದಶಕಗಳಿಂದಲೂ ಅಸ್ಸಾಮ್ ಮತ್ತು ಈಶಾನ್ಯ ಭಾರತದ ರಾಜ್ಯಗಳು ಹಿಂಸಾಚಾರವನ್ನು ಎದುರಿಸುತ್ತಿವೆ. 2014ರಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ದಿಲ್ಲಿ ಮತ್ತು ಈಶಾನ್ಯ ಭಾರತದ ರಾಜ್ಯಗಳ ನಡುವೆ ಉಂಟಾಗಿದ್ದ ಕಂದಕವನ್ನು ಮುಚ್ಚುವ ಕೆಲಸವನ್ನು ಹೆಚ್ಚು ವೇಗವಾಗಿ ಮಾಡಲಾಗುತ್ತಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಲ್ಲೇ ಇದನ್ನು ಆರಂಭಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಈಶಾನ್ಯದ ಇನ್ನೊಂದು ರಾಜ್ಯ ಮಣಿಪುರದಲ್ಲೂ ಶಾಂತಿ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಯಶಸ್ಸನ್ನು ಸಾಧಿಸಿತ್ತು. ಮಣಿಪುರದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (United National Liberation Front – UNLF) ಜೊತೆಗೆ ಕೇಂದ್ರ ಸರ್ಕಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಯುಎನ್‌ಎಲ್‌ಎಫ್ ಜೊತೆಗೆ ಇನ್ನೂ ಹಲವು ಸಂಘಟನೆಗಳು ಮಣಿಪುರದಲ್ಲಿ ಭದ್ರತಾ ಪಡೆಗಳು, ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿಗಳು, ಹತ್ಯೆಗಳು ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಯುಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದವು.

1947ರಲ್ಲಿ ಭಾರತ ಸ್ವತಂತ್ರವಾದ ಬಳಿಕ ದಶಕಗಳ ಕಾಲ ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿಯಾಗಲೀ, ಉದ್ಯೋಗಗಳಾಗಲೀ ಪ್ರವೇಶಿಸಿರಲಿಲ್ಲ. ಇದೇ ವೇಳೆಗೆ ಗಣಿಗಾರಿಕೆ ಮುಂತಾದವು ಈ ಪ್ರದೇಶದ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ತೊಡಗಿದ್ದವು. ಇದರಿಂದೆಲ್ಲ ಸಿಟ್ಟಿಗೆದ್ದಿದ್ದ ಬುಡಕಟ್ಟು ಜನಾಂಗದ ರೆಬೆಲ್‌ ಯುವಕರು ಇಂಥ ಸಶಸ್ತ್ರ ಹೋರಾಟದ ಗುಂಪುಗಳನ್ನು ಕಟ್ಟಿಕೊಂಡು ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದರು. ಕಾಲಕಾಲಕ್ಕೆ ಸರ್ಕಾರಗಳು ಇವುಗಳ ಮೇಲೆ ನಿರ್ಬಂಧ, ನಿಷೇಧ, ಶಾಂತಿ ಒಪ್ಪಂದಗಳನ್ನು ಮಾಡುತ್ತ ಬಂದಿವೆ. ಈಶಾನ್ಯದ ಏಳು ರಾಜ್ಯಗಳಲ್ಲೂ ಇಂಥ ಬಂಡಾಯದ ಗುಂಪುಗಳು ಇವೆ. ಅನೇಕ ಹಳೆಯ ಗುಂಪುಗಳ ಸದಸ್ಯರು ಇಂದು ಹೋರಾಟದ ಹಾದಿ ತೊರೆದು ಸಾಮಾನ್ಯ ನಾಗರಿಕರಾಗಿ ಬದುಕುತ್ತಿದ್ದಾರೆ.

ಕೇಂದ್ರ ಸರ್ಕಾರ ಈಶಾನ್ಯ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ. 2014-15ರಲ್ಲಿ ಇದ್ದ ಇಲ್ಲಿನ ಅಭಿವೃದ್ಧಿ ಕಾರ್ಯಗಳ ವೆಚ್ಚ 36,108 ಕೋಟಿ ರೂಪಾಯಿ; 2022-23ರಲ್ಲಿ ಅದು 76,040 ಕೋಟಿ ರೂಪಾಯಿಗಳಿಗೆ ಏರಿದೆ. 54 ಕೇಂದ್ರ ಸಚಿವಾಲಯಗಳಿಂದ ಬಜೆಟ್‌ನ ಒಟ್ಟು ಭಾಗದಲ್ಲಿ 10% ಇಲ್ಲಿಗೆ ಮೀಸಲಾಗಿದೆ. The Prime Minister’s Development Initiative for the North-East (PM-DevINE) ಎಂಬ ಹೊಸ ಅಭಿವೃದ್ಧಿ ಯೋಜನೆಯನ್ನು 2022-23ರ ಕೇಂದ್ರ ಬಜೆಟ್‌ನಲ್ಲಿ ರೂ 1,500 ಕೋಟಿಗಳ ಆರಂಭಿಕ ಹಂಚಿಕೆಯೊಂದಿಗೆ ಘೋಷಿಸಲಾಗಿದೆ. ಇವೆಲ್ಲವೂ ಇಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ತೆರೆಯಲಿವೆ. 2014ರ ನವೆಂಬರ್‌ನಲ್ಲಿ ಘೋಷಿಸಲಾದ ʼಆಕ್ಟ್ ಈಸ್ಟ್ ಪಾಲಿಸಿ’ಯ ಅಡಿಯಲ್ಲಿ ಇದು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವ ಆರ್ಥಿಕ ಕೇಂದ್ರವಾಗಿದೆ. ಏಷ್ಯಾ-ಪೆಸಿಫಿಕ್ ಪ್ರದೇಶವು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ಹಂತಗಳಲ್ಲಿ ನಮ್ಮ ಈಶಾನ್ಯ ಪ್ರದೇಶದ ರಾಜ್ಯಗಳೊಂದಿಗೆ ಹೆಚ್ಚಿನ ಸಂಪರ್ಕವನ್ನು ಒದಗಿಸುತ್ತದೆ. ಇದು ಮಾದರಿ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಶಾಂತಿ ಒಪ್ಪಂದಗಳು ಜೊತೆಗೆ ಇವುಗಳಿಂದಾಗ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳು, ಹೊಸ ಉದ್ಯೋಗಗಳು, ಹೊಸ ಬದುಕು ಕೂಡ ಇಲ್ಲಿನ ಅಂತಃಕಲಹಗಳನ್ನು ಇಲ್ಲವಾಗಿಸಿ ಶಾಂತ ಸುಂದರ ಬದುಕನ್ನು ತರಲಿ ಎಂದು ಆಶಿಸೋಣ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಂಗನವಾಡಿ ಮಟ್ಟದಲ್ಲೂ ಮತಾಂತರ ಹಾವಳಿ ಆತಂಕಕಾರಿ

Exit mobile version