Site icon Vistara News

ವಿಸ್ತಾರ ಸಂಪಾದಕೀಯ: ಭಾರತೀಯ ಚದುರಂಗ ಕಣಕ್ಕೆ ರಂಗು ತುಂಬಿದ ಪ್ರಜ್ಞಾನಂದ

Chess Player pragyananda

ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (Chess player Pragyananda) ವಿಶ್ವಕಪ್​ ಚೆಸ್​​ ಫೈನಲ್ ಪ್ರವೇಶಿಸಿ, ವಿಶ್ವ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಕೋಟ್ಯಂತರ ಭಾರತಿಯರು ಕಾದು ಕುಳಿತಿದ್ದ ಈ ಪಂದ್ಯದಲ್ಲಿ ಅವರು ರನ್ನರ್‌ ಅಪ್‌ ಆಗಿರಬಹುದು. ಆದರೆ ಕೋಟ್ಯಂತರ ಭಾರತೀಯರ ಮನಸ್ಸು ಗೆದ್ದಿದ್ದಾರೆ. 2 ದಶಕಗಳ ಬಳಿಕ ಚೆಸ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಭಾರತೀಯ ಆಟಗಾರ ಅವರು. ಇನ್ನೂ ಸಣ್ಣ ಪ್ರಾಯದ (18 ವರ್ಷ) ಪ್ರಜ್ಞಾನಂದರ ಮುಂದೆ ಅವಕಾಶಗಳು ಬಹಳ ಇವೆ. ವಿಶ್ವನಾಥನ್‌ ಆನಂದ್‌ ಬಳಿಕ ಇನ್ನೊಬ್ಬ ಭಾರತೀಯ ವಿಶ್ವ ಚೆಸ್ ಚಾಂಪಿಯನ್ ಆಗುವ ಕನಸು ಇದ್ದೇ ಇದೆ. ಹಾಗಾಗಲಿ ಎಂದು ಹಾರೈಸೋಣ(Vistara Editorial).

ಭಾರತದ ಯುವಜನತೆಯ ಪಾಲಿಗೆ ಕ್ರೀಡೆ ಎಂದರೆ ಕ್ರಿಕೆಟ್‌ ಮಾತ್ರ; ಇಲ್ಲಿನ ಕ್ರೀಡಾಭಿಮಾನಿಗಳು ಕೂಡ ಕ್ರಿಕೆಟ್‌ ಗೀಳಿನಲ್ಲೇ ಸದಾ ಮುಳುಗಿರುವವರು ಎಂಬ ಆರೋಪ ಇದೆ. ಇದರಲ್ಲಿ ಬಹಳಷ್ಟು ಸತ್ಯಾಂಶವಿದೆ. ಸಾಕಷ್ಟು ಮಿಥ್ಯೆಯೂ ಇದೆ. ಬೇರೆ ಬೇರೆ ಕ್ರೀಡೆಗಳಲ್ಲಿ ಇದೀಗ ಭಾರತದ ಯುವಜನತೆಯ ರೋಲ್‌ ಮಾಡೆಲ್‌ ಆಗಿರುವ ಇತರ ಕ್ರೀಡಾಳುಗಳನ್ನು ನೆನೆಯಬಹುದು. ಸದ್ಯ ಚೆಸ್‌ನಲ್ಲಿ ಆ ಸ್ಥಾನವನ್ನು ತುಂಬಿರುವವರು ಪ್ರಜ್ಞಾನಂದ. ಚೆಸ್‌ ಇತರ ಕ್ರೀಡೆಗಳ ಹಾಗಲ್ಲ. ಇದು ದೈಹಿಕ ಕ್ಷಮತೆ, ಕೌಶಲ್ಯಕ್ಕೆ ಸಂಬಂಧಿಸಿದ ಆಟವಲ್ಲ. ಇದು ಸಂಪೂರ್ಣ ಬುದ್ಧಿವಂತಿಕೆ, ಜಾಣ್ಮೆ, ಚಿಂತನ ಮಂಥನಕ್ಕೆ ಸಂಬಂಧಿಸಿದ ಕ್ರೀಡೆ. ಚೆಸ್‌ನ ಬೇರುಗಳು ಭಾರತದ ಪುರಾತನ ಚದುರಂಗದಲ್ಲಿವೆ. ಕಾಲಾನುಕಾಲದಿಂದ ಈ ಕ್ರೀಡೆಯಲ್ಲಿ ರಷ್ಯದವರು ಮೇಲುಗೈ ಸಾಧಿಸುತ್ತ ಬಂದಿದ್ದಾರೆ. ಅವರಿಗೆ ಸೆಡ್ಡು ಹೊಡೆದು ಗೆದ್ದು ಮೆರೆದವರು ವಿಶಿ ಅಥವಾ ವಿಶ್ವನಾಥನ್‌ ಆನಂದ್‌. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಭಾರತಕ್ಕೆ ವಿಶ್ವಕಪ್​ ಗೆದ್ದಿದ್ದರು. ವಿಶಿಯ ಪರಂಪರೆಗೆ ಸಮರ್ಥ ಉತ್ತರಾಧಿಕಾರಿಯಂತೆ ಬಂದವರು ಪ್ರಜ್ಞಾನಂದ. ವಿಶಿಯಂತೆ ಪ್ರಜ್ಞಾನಂದ ಕೂಡ ತಮಿಳುನಾಡಿನ ಚೆನ್ನೈಯವರು.

ಚಿಕ್ಕ ವಯಸ್ಸಿನಲ್ಲೇ ಚೆಸ್‌ ಪ್ರಪಂಚವನ್ನು ಆಳುತ್ತಿರುವ ​ಪ್ರಜ್ಞಾನಂದ ಚೆಸ್ ಆಡಲು ಆರಂಭಿಸಿದ್ದು ತಮ್ಮ 3.5ರ ಪ್ರಾಯದಲ್ಲಿ. ತನ್ನ ಸಹೋದರಿಯಿಂದ ಆಟ ಕಲಿತ. ಕೋಚ್‌ ರಮೇಶ್‌ ಅವರಿಂದ ಸೂಕ್ಷ್ಮಗಳನ್ನು ಕಲಿತು 2013ರಲ್ಲೇ 8 ವರ್ಷದ ಒಳಗಿನವರ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್ ಗೆದ್ದು ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದರು. 2015ರಲ್ಲಿ 10 ವರ್ಷದ ಒಳಗಿನವರ ಫಿಡೆ ಮಾಸ್ಟರ್‌ ಚಾಂಪಿಯನ್ ಆಗಿ ಪ್ರಜ್ಞಾನಂದ ಹೊರ ಹೊಮ್ಮಿದ್ದರು. 2016ರಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಆದರು. 2017ರಲ್ಲಿ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ ಕಿರೀಟ ಸಿಕ್ಕಿತ್ತು. 2019ರಲ್ಲಿ 18 ವರ್ಷದ ಒಳಗಿನವರ ವಿಶ್ವ ಯುವ ಚಾಂಪಿಯನ್ ಎಂಬ ಪಟ್ಟ ಪಡೆದರು. 2021ರಲ್ಲಿಯೇ ವಿಶ್ವ ಚೆಸ್ ವರ್ಲ್ಡ್‌ ಕಪ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಜ್ಞಾನಂದ, 4ನೇ ಸುತ್ತಿನಲ್ಲಿ ಸೋತು ಹೊರಕ್ಕೆ ಬಂದಿದ್ದರು. ಹೀಗೆ ಗೆಲುವಿನ ಮೇಲೆ ಗೆಲುವು ದಾಖಲಿಸುತ್ತ ಹೋದ ಇವರು, ತಮ್ಮದೊಂದು ಯುವ ಅಭಿಮಾನಿಗಳ ಪಡೆಯನ್ನು ಹುಟ್ಟುಹಾಕಿಕೊಂಡಿದ್ದಾರೆ. ಇದು ಮುಂದೆ ಭಾರತದಲ್ಲಿ ಚೆಸ್‌ ಅಭಿಮಾನದ ಅಲೆಗೆ ಕಾರಣವಾದರೆ ಅಚ್ಚರಿಯಿಲ್ಲ.

ಈ ಸಂಪಾದಕೀಯವನ್ನು ಓದಿ: ವಿಸ್ತಾರ ಸಂಪಾದಕೀಯ: ಲ್ಯಾಂಡರ್‌ಗೆ ಪುಟ್ಟ ಹೆಜ್ಜೆ, ಭಾರತಕ್ಕೆ ಮಹಾ ಜಿಗಿತ

ಇಂದು ಚೆಸ್‌ ಆಟದ ಮೂಲಕ ಕೋಟ್ಯಧಿಪತಿ ಆಗಿರುವ ಪ್ರಜ್ಞಾನಂದ ಮನೆ ಪರಿಸ್ಥಿತಿ 10 ವರ್ಷಗಳ ಹಿಂದೆ ಉತ್ತಮವಾಗೇನೂ ಇರಲಿಲ್ಲ. ಪ್ರಜ್ಞಾನಂದ ಅವರ ತಂದೆ ಬ್ಯಾಂಕ್ ಉದ್ಯೋಗಿ ಆದರೂ ಪೋಲಿಯೋ ಪೀಡಿತರು. ಇಬ್ಬರು ಮಕ್ಕಳಾದ ವೈಶಾಲಿ ಹಾಗೂ ಪ್ರಜ್ಞಾನಂದನ ಭವಿಷ್ಯದ ಬಗ್ಗೆ ಹೆತ್ತವರು ಚಿಂತಿತರಾಗಿದ್ದರಂತೆ. ಯಾವಾಗಲೂ ಟಿವಿಯಲ್ಲಿ ಕಾರ್ಟೂನ್ ನೋಡುತ್ತಿದ್ದ ಮಕ್ಕಳ ಮನಸ್ಸನ್ನು ಬೇರೆಡೆ ಸೆಳೆಯುವುದಕ್ಕಾಗಿ ತಂದೆ ತಂದು ಕೊಟ್ಟ ಚೆಸ್ ಬೋರ್ಡನ್ನೇ ಬಳಸಿ ಇಂದು ಪ್ರಜ್ಞಾನಂದ ಜಗತ್ತನ್ನು ಗೆದ್ದುಬಿಟ್ಟಿದ್ದಾರೆ. ಸದಾ ಹಣೆಯಲ್ಲಿ ವಿಭೂತಿ ಧರಿಸುವ ಪ್ರಜ್ಞಾ ದೈವಭಕ್ತರು. ಇಂದು ಭಾರತ ಹೆಮ್ಮೆಯಿಂದ ತಲೆಯೆತ್ತುವಂತೆ ಮಾಡಿರುವ ಪ್ರಜ್ಞಾನಂದ, ಚೆಸ್‌ ಕ್ರೀಡೆಯಲ್ಲಿ ಭಾರತದ ಸ್ಥಾನಮಾನವನ್ನು ಮತ್ತೊಮ್ಮೆ ಭದ್ರಪಡಿಸಿದ್ದಾರೆ. ಚದುರಂಗ ಬುದ್ಧಿವಂತರ ಕ್ರೀಡೆ ಎಂಬುದು ನಿಜ. ಆದರೆ ಯಾರು ಬೇಕಿದ್ದರೂ ಇದನ್ನು ಶ್ರದ್ಧೆ, ತಪಸ್ಸು, ಪರಿಶ್ರಮದ ಮೂಲಕ ಪಳಗಿಸಿಕೊಳ್ಳಬಹುದು ಎಂಬುದನ್ನು ಕೂಡ ಅವರು ಸಾಬೀತುಪಡಿಸಿದ್ದಾರೆ. ಕ್ರಿಕೆಟ್-‌ ಬ್ಯಾಡ್ಮಿಂಟನ್‌ ಮಾತ್ರವಲ್ಲದೆ ನಾವು ಸಾಧಿಸಬಹುದಾದ ಕ್ರೀಡೆಗಳು ಇನ್ನೂ ಬಹಳಷ್ಟಿವೆ; ಅವೆಲ್ಲದರಲ್ಲೂ ಉನ್ನತ ಸ್ಥಾನಕ್ಕೆ ಏರಬಹುದಾದ ಪ್ರತಿಭೆಗಳೂ ನಮ್ಮ ನಡುವೆಯೇ ಇವೆ. ಆದ್ದರಿಂದ ಇವುಗಳನ್ನೆಲ್ಲ ಪೋಷಿಸೋಣ ಎಂಬ ಮನೋಧರ್ಮವನ್ನೂ ಇವು ನಮ್ಮಲ್ಲಿ ಮೂಡಿಸಬೇಕು. ಆಗ ಪ್ರಜ್ಞಾನಂದರ ಸಾಧನೆ ಸಾರ್ಥಕವಾಗುತ್ತದೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version