ದೇಶದ ಶಕ್ತಿ ಕೇಂದ್ರವಾಗಿರುವ, ರಾಜಧಾನಿ ದಿಲ್ಲಿ ನಗರವು ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಕ್ಷರಶಃ ನಲುಗಿದೆ. ಸಾವಿರಾರು ಜನರು ನಿರ್ವಸತಿಗರಾಗಿದ್ದಾರೆ. ತಗ್ಗು ಪ್ರದೇಶಗಳಿಗೆ ಯಮುನೆ ನುಗ್ಗಿ, ರಾದ್ಧಾಂತ ಸೃಷ್ಟಿದ್ದಾಳೆ. ಸುಪ್ರೀಂ ಕೋರ್ಟ್, ರಾಜಘಾಟ್, ಕೆಂಪುಕೋಟೆವರೆಗೂ ಯಮುನೆ ತನ್ನ ಪಾತ್ರವನ್ನು ಹಿಗ್ಗಿಸಿಕೊಂಡಿದ್ದಾಳೆ. ಕಳೆದ 40 ವರ್ಷದಲ್ಲೇ ದಾಖಲೆ ಮಳೆಯನ್ನು ಈ ಬಾರಿ ದಿಲ್ಲಿ ಕಂಡಿದೆ. ಜತೆಗೆ, ಹರ್ಯಾಣ ಸೇರಿದಂತೆ ದಿಲ್ಲಿ ನೆರೆ ಹೊರೆಯ ರಾಜ್ಯಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮಹಾಪೂರದಂಥ ವಿಕೋಪ ಪರಿಸ್ಥಿತಿಗಳು ಸೃಷ್ಟಿಯಾದಾಗ, ಜನರ ರಕ್ಷಣೆ, ಪರಿಹಾರ ಕಾರ್ಯಾಚರಣೆಯ ಮುಖ್ಯವಾಗಬೇಕು. ಆದರೆ, ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ(ಆಪ್) ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪರಸ್ಪರ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ.
ನೈಸರ್ಗಿಕ ವಿಕೋಪಗಳು ಯಾರ ಕೈಯಲ್ಲೂ ಇಲ್ಲ. ಅವು ಸಂಭವಿಸಿದಾಗ ಎದುರಿಸಬೇಕಷ್ಟೇ. ಸಾಧ್ಯವಿರುವ ಜೀವ ಹಾನಿ, ಆಸ್ತಿ ಹಾನಿಯನ್ನು ತಡೆಯುವತ್ತ ವ್ಯವಸ್ಥೆಗಳು ಕೆಲಸ ಮಾಡಬೇಕಾಗುತ್ತದೆ. ಸಂಕಟದ ಸಮಯದಲ್ಲಿ ನಮ್ಮ ನಡುವಿನ ರಾಜಕೀಯವನ್ನು, ಸಿದ್ಧಾಂತವನ್ನು ಬದಿಗಿಟ್ಟು ಒಂದಾಗಬೇಕು. ಆದರೆ, ದಿಲ್ಲಿಯಲ್ಲಿ ಆಪ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ನೋಡಿದರೆ, ಅವರಿಗೆ ತಮ್ಮ ತಪ್ಪುಗಳನ್ನು ಮತ್ತೊಬ್ಬರ ಮೇಲೆ ಹೊರಿಸುವುದಲ್ಲಿ ಹೆಚ್ಚು ಸಂತುಷ್ಟರಾಗುತ್ತಿರುವಂತೆ ಕಾಣುತ್ತಿದೆ. ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್, ಅಧಿಕಾರ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆ ನಿತ್ಯ ಸಂಘರ್ಷ ನಡೆಸುತ್ತಿದೆ. ಅದಕ್ಕೀಗ ಈ ಪ್ರವಾಹ ನಿಯಂತ್ರಣ ಕೂಡ ಸೇರಿಕೊಂಡಿದೆ. ಅತ್ತ ಬಿಜೆಪಿಯಿಂದಲಾದರೂ ಸಂಯಮದ ನಡೆಯನ್ನು ಜನರು ನಿರೀಕ್ಷಿಸಿದ್ದರು. ಆದರೆ, ಕಮಲ ಪಡೆ ಕೂಡ ಸೇರಿಗೆ ಸವ್ವಾ ಸೇರು ಎಂಬಂತೆ ವರ್ತಿಸುತ್ತಿದೆ. ಅಂತಿಮವಾಗಿ ಯಮುನೆಯ ರುದ್ರ ನರ್ತನಕ್ಕೆ ದಿಲ್ಲಿಗರು ನರಳುತ್ತಿದ್ದಾರೆ. ರಸ್ತೆ, ಸೇತುವೆ ಸೇರಿ ಮೂಲ ಸೌಕರ್ಯಗಳು ಕೊಚ್ಚಿ ಹೋಗುತ್ತಿವೆ. ಹಾಗಾಗಿ, ಆಪ್ ಆಗಲೀ ಅಥವಾ ಬಿಜೆಪಿಯೇ ಆಗಲಿ, ಪ್ರತಿಯೊಂದರಲ್ಲೂ ಪರಸ್ಪರರ ಹುಳುಕುಗಳನ್ನು ಹುಡುಕುವುದರಲ್ಲಿ ತೊಡಗಿ ರಾಜಕೀಯ ಮಾಡುವುದನ್ನು ಬಿಟ್ಟು ಪ್ರವಾಹ ಪೀಡಿತ ಜನರ ಸಂಕಟ ನಿವಾರಿಸಲು ಮುಂದಾಗಬೇಕು.
ಕೆಲವು ಮೂಲಗಳ ಪ್ರಕಾರ, ದಿಲ್ಲಿ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಪ್ರವಾಹ ನಿಯಂತ್ರಣ ಮಂಡಳಿಯ ಸಭೆ ಎರಡು ವರ್ಷಗಳಿಂದ ನಡೆದೇ ಇಲ್ಲ! ಹೀಗಾದರೆ, ಪ್ರವಾಹ ನಿಯಂತ್ರಣ ಹೇಗೆ ಸಾಧ್ಯ? ದಿಲ್ಲಿಯಂಥ ಮಹಾನಗರವು ಯಾವುದೇ ನೈಸರ್ಗಿಕ ವಿಕೋಪವನ್ನು ಎದುರಿಸಲು ಸಜ್ಜಾಗಿರಬೇಕು. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ. ಯಾಕೆಂದರೆ, ದಿಲ್ಲಿಯ ಆಡಳಿತವು ರಾಜ್ಯ ಹಾಗೂ ಕೇಂದ್ರ ನಡುವೆ ಹಂಚಿ ಹೋಗಿದೆ. ಇಲ್ಲಿನ ಎಲ್ಲ ಒಡಕು-ಕೆಡಕುಗಳಿಗೆ ಇಬ್ಬರೂ ಹೊಣೆಗಾರರು. ಒಬ್ಬರು ಮತ್ತೊಬ್ಬರನ್ನು ದೂರಿ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವಂತಿಲ್ಲ. ಈ ಸಂಗತಿಯನ್ನು ಉಭಯ ಪಕ್ಷಗಳು ಅರ್ಥ ಮಾಡಿಕೊಂಡರೆ ಜನರಿಗೆ ಒಳ್ಳೆಯದಾಗಲಿದೆ.
ಈ ಸಂಪಾದಕೀಯವನ್ನೂ ಓದಿ: ಸಂಪಾದಕೀಯ: ಉತ್ತರ ಕನ್ನಡಕ್ಕೆ ಅಗತ್ಯವಾಗಿ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಸದ್ಯಕ್ಕೆ ಯಮುನಾ ನದಿಯ ತೀವ್ರತೆ ಕೊಂಚ ತಗ್ಗುತ್ತಿದೆ ಎಂಬ ಮಾಹಿತಿ ಇದೆ. ಬಹುಶಃ ಮೂರ್ನಾಲ್ಕು ದಿನಗಳಲ್ಲಿ ದಿಲ್ಲಿ ಮತ್ತೆ ಎಂದಿನ ಸ್ಥಿತಿಗೆ ಮರಳಬಹುದು. ಆಗ, ಎಲ್ಲ ಪಕ್ಷಗಳು ಸೇರಿಕೊಂಡು, ಮತ್ತೊಮ್ಮೆ ಇಂಥ ಮಹಾಪೂರ ಸ್ಥಿತಿ ಎದುರಾದರೆ ಏನು ಮಾಡಬೇಕು, ಪ್ರವಾಹವನ್ನು ನಿಯಂತ್ರಿಸುವುದು ಹೇಗೆ, ಒಂದೊಮ್ಮೆ ಸಾಧ್ಯವಾಗದೇ ಹೋದರೆ ಪರಿಹಾರ ಕಾರ್ಯಾಚರಣೆಯನ್ನು ಯಾವ ರೀತಿ ಕೈಗೊಳ್ಳಬೇಕು ಎಂಬಿತ್ಯಾದಿ ವಿಷಯಗಳು ಕುರಿತು ಚರ್ಚಿಸಬೇಕು. ಸಂಭಾವ್ಯ ಪರಿಹಾರಗಳನ್ನು ಒಟ್ಟಾಗಿ ಕಂಡುಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಜನರ ಒಳಿತೇ ಅಂತಿಮ ಧ್ಯೇಯವಾಗಿರಬೇಕು. ಹೊರತು ತಮ್ಮ ಒಣ ಪ್ರತಿಷ್ಠೆಯ ರಾಜಕಾರಣ ಅಥವಾ ಸಿದ್ಧಾಂತವೇ ಮುಖ್ಯವಾಗಬಾರದು. ಕನಿಷ್ಠ ಈ ಪ್ರವಾಹದಿಂದಲಾದರೂ ರಾಜಕೀಯ ಪಕ್ಷಗಳು ಪಾಠವನ್ನು ಕಲಿಯಲಿ.
ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.