Site icon Vistara News

ವಿಸ್ತಾರ ಸಂಪಾದಕೀಯ: ಹೆಣ್ಣನ್ನು ಅಗೌರವಿಸುವ ಪದಗಳಿಗೆ ನಿರ್ಬಂಧ ಸೂಕ್ತ

8 votes cast in Chandigarh mayoral election were Valid Says Supreme Court

ಹೆಣ್ಣಿನ ಸೂಕ್ಷ್ಮತೆಯನ್ನು ಅಗೌರವಿಸುವ ರೂಢಿಗತ ಪದಗಳ ಬಳಕೆಯ ಬದಲಿಗೆ ಪರ್ಯಾಯ ಪದಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಯಾವೆಲ್ಲ ಪದಗಳಿಗೆ, ಹೇಗೆ ಪರ್ಯಾಯ ವಾಕ್ಯಗಳನ್ನು ಮತ್ತು ಪದಗಳನ್ನು ಬಳಸಬಹುದು ಎಂದು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಹೌಸ್ ವೈಫ್(ಗೃಹಿಣಿ), ಅಫೇರ್(ಅಕ್ರಮ ಸಂಬಂಧ), ಬಾಸ್ಟರ್ಡ್(ಜಾರಿಣಿ ಮಗ), ಚೈಲ್ಡ್ ಪ್ರಾಸ್ಟಿಟ್ಯೂಟ್(ಬಾಲ ವೇಶ್ಯೆ), ಇವ್ ಟೀಸಿಂಗ್(ಚುಡಾಯಿಸುವುದು), ಹೂಕರ್ (ವೇಶ್ಯೆ)… ಈ ರೀತಿಯ ಪದಗಳನ್ನು ಗುರುತಿಸಿ, ಅವುಗಳಿಗೆ ಪರ್ಯಾಯ ಅಥವಾ ವಾಕ್ಯಗಳನ್ನು ಈ ಕೈಪಿಡಿಯಲ್ಲಿ ಸೇರಿಸಲಾಗಿದೆ. ಲಿಂಗ ರೂಢಿಗತ ಪದಗಳನ್ನು ತೊಡೆದು ಹಾಕುವುದಕ್ಕಾಗಿ ಈ ಕೈಪಿಡಿಯು ನ್ಯಾಯಾಧೀಶರಿಗೆ ನೆರವು ನೀಡುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ರೂಢಿಗತ ಪದಗಳನ್ನು ಗುರುತಿಸಲು ಮತ್ತು ತಿಳಿದುಕೊಳ್ಳಲು ಕಾನೂನು ಸಮುದಾಯಕ್ಕೆ ಈ ಕೈಪಿಡಿ ಸಹಾಯ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ(Vistara Editorial).

ಲಿಂಗಸೂಕ್ಷ್ಮತೆಯನ್ನು ಸಮಾಜದ ಎಲ್ಲ ಸ್ತರಗಳಲ್ಲಿ ತರಬೇಕು ಎಂಬುದು ಆಧುನಿಕ ಸಮಾಜದ ಆಶಯಗಳಲ್ಲೊಂದು. ನಮ್ಮ ಸಂವಿಧಾನದ ಆಶಯವೂ ಅದೇ. ಲಿಂಗ ತಾರತಮ್ಯ ಇರಕೂಡದು, ಸಮಾನತೆ ಇರಬೇಕು ಎಂಬುದು ಸಂವಿಧಾನದ ಉನ್ನತ ಆಶಯಗಳಲ್ಲಿ ಒಂದು. ಆದರೆ ನಾವು ದಿನನಿತ್ಯ ಬಳಸುವ ಅನೇಕ ಪದಗಳಲ್ಲಿ, ವಾಕ್ಯಗಳಲ್ಲಿ ಮಹಿಳೆಯರನ್ನು ಹೀಗಳೆಯುವ ಮಾತುಗಳು, ಪದಗಳು ಹೇಗೋ ನುಸುಳಿಕೊಂಡಿವೆ, ರೂಢಿಯಾಗಿಬಿಟ್ಟಿವೆ. ಅವುಗಳನ್ನು ಯಾವುದೇ ಸೂಕ್ಷ್ಮತೆಯಿಲ್ಲದೆ ಬಳಸುತ್ತಿದ್ದೇವೆ. ಈ ರೂಢಿಯನ್ನು ಕೈಬಿಟ್ಟು ಹೊಸ ಪದಗಳನ್ನು ಬೆಳೆಸಿಕೊಳ್ಳಬೇಕಿದ್ದರೆ ಹೊಸ ಸೂಕ್ಷ್ಮತೆಯನ್ನೂ ರೂಢಿಸಿಕೊಳ್ಳಬೇಕಿದೆ. ಅದನ್ನೇ ನಮ್ಮ ಸುಪ್ರೀಂ ಕೋರ್ಟ್‌ ಕೂಡ ಮಾಡಿದೆ. ಮಹಿಳೆಯರ ಕುರಿತು ಬಳಸಲಾಗುವ ರೂಢಿಗತ ಪದಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಬಹಳಷ್ಟು ಪದಗಳನ್ನು ನ್ಯಾಯಾಲಯಗಳು ಈ ಹಿಂದಿನಿಂದಲೂ ಬಳಸಿಕೊಂಡು ಬಂದಿವೆ. ಆದರೆ, ಈ ಪದಗಳ ಬಳಕೆ ತಪ್ಪಾಗಿದ್ದು ಮತ್ತು ಕಾನೂನಿನ ಅನ್ವಯವನ್ನು ಹೇಗೆ ವಿರೂಪಗೊಳಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು ಹೇಳಿದ್ದಾರೆ.

ಉದಾಹರಣೆಗೆ, ತುಂಬ ಸರಳವಾದ ಹೌಸ್‌ವೈಫ್‌ ಎಂಬ ಪದವನ್ನೇ ಗಮನಿಸಬಹುದು. ಇದು ಹೊರಗೆ ಉದ್ಯೋಗಕ್ಕೆ ತೆರಳದ, ಮನೆವಾರ್ತೆಯನ್ನು ನೋಡಿಕೊಳ್ಳುವ ಮಹಿಳೆಯರ ಬಗ್ಗೆ ತಿಳಿಸುವ ಪದ. ಬಳಸುತ್ತಾ ಈ ಪದಕ್ಕೆ ʼಆದಾಯವಿಲ್ಲದ ದುಡಿಮೆಯ ವ್ಯಕ್ತಿʼ ಎಂಬರ್ಥ ಬರುವ ಒಂದು ಬಗೆಯ ನಕಾರಾತ್ಮಕ ಅರ್ಥವು ರೂಢಿಯಾಗಿಬಿಟ್ಟಿದೆ. ಈಗ ಅದರ ಬದಲು ʼಹೋಮ್‌ ಮೇಕರ್‌ʼ ಎಂಬ ಪದವು ಬಳಕೆಯಾಗುತ್ತಿದೆ. ಇದು ಮೊದಲಿನದಕ್ಕಿಂತ ಉತ್ತಮವಾಗಿದೆ; ಇನ್ನಷ್ಟು ಸೂಕ್ತ ಪದ ಬೇಕಿದೆ. ಯಾಕೆಂದರೆ ಗೃಹಿಣಿಯ ಕೆಲಸ ಬರಿಯ ಮನೆಯ ನಿತ್ಯದ ಕೆಲಸಗಳನ್ನು ನೋಡಿಕೊಳ್ಳುವುದು ಮಾತ್ರವೇ ಅಲ್ಲ; ಆಕೆ ಇತರರಿಗೆಲ್ಲ ಬೆನ್ನೆಲುಬಾಗಿರುತ್ತಾಳೆ. ಆಕೆಯ ದುಡಿಮೆಗೆ ಬೆಲೆ ಕಟ್ಟಲೂ ಸಾಧ್ಯವಾಗದು. ಈ ಸೂಕ್ಷ್ಮತೆಯನ್ನು ಸಮಾಜದಲ್ಲಿ ರೂಢಿಸಬೇಕಿದೆ. ಇನ್ನು ನಮ್ಮ ಬೈಗುಳಗಳೆಲ್ಲಾ ಮಾತೃಮೂಲದವಾಗಿವೆ. ಇವುಗಳ ಬಳಕೆಯನ್ನು ನಿಷೇಧಿಸುವ ಬಗ್ಗೆಯೂ ಯೋಚಿಸಬಹುದು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಿಂದುಳಿದ ವರ್ಗಗಳ ಸ್ವಾತಂತ್ರ್ಯದ ಕನಸು ನನಸಾಗುವತ್ತ ಹೆಜ್ಜೆ

ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡ ಈ ಉತ್ತಮ ಕ್ರಮವನ್ನು ಇತರ ಸಾಂವಿಧಾನಿಕ ಸಂಸ್ಥೆಗಳೂ ಅನುಸರಿಸಬಹುದಾಗಿದೆ. ಸಂಸತ್ತಿನ ಎರಡೂ ಸದನಗಳು, ವಿವಿಧ ಇಲಾಖೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬಹುದು. ಬ್ರಿಟಿಷ್ ಕಾಲದ ಕಾಯಿದೆಗಳೇ ಅಪ್ರಸ್ತುತ ಎಂದು ಸರ್ಕಾರ ಬದಲಾಯಿಸಲು ಮುಂದಾಗಿದೆ. ಹೀಗಿರುವಾಗ, ಇಂಥ ಕೆಲವು ಅಪ್ರಸ್ತುತ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಪದಗಳನ್ನು ಬದಲಾಯಿಸುವುದು ಸೂಕ್ತವಾಗಿದೆ. ಕೆಲವು ಪರಿಕಲ್ಪನೆಗಳನ್ನೂ ಬದಲಿಸಲು ಕೋರ್ಟ್‌ ಮುಂದಾಗಿದೆ. ಉದಾಹರಣೆಗೆ, ಮದುವೆಯಾಗದ ಮಹಿಳೆಯರು ನಿರ್ಧಾರ ಕೈಗೊಳ್ಳಲು ಅಸಮರ್ಥರು, ಮದುವೆಯಾದ ಪ್ರತಿ ಮಹಿಳೆಯೂ ಮಗು ಹೆರಲು ಬಯಸುತ್ತಾಳೆ- ಇತ್ಯಾದಿ ಅಪಕಲ್ಪನೆಗಳು. ಇವು ಮತ್ತು ಇಂಥ ಸಾವಿರಾರು ಅಪಕಲ್ಪನೆಗಳು ನಮ್ಮ ಸಮಾಜದಲ್ಲಿ ಬೇರೂರಿದ್ದು, ಇವುಗಳನ್ನು ಬದಲಾಯಿಸಲು ನಿರಂತರ ಜಾಗೃತಿ ನಡೆಯಬೇಕಿದೆ. ಅದಕ್ಕೆ ಕೋರ್ಟ್‌ ಉಪಕ್ರಮ ಮೂಲವಾಗಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version