ಹಳೆಯ ಸಂಸತ್ ಸಂಸತ್ ಭವನದಲ್ಲಿ ಸೋಮವಾರ ಕೊನೆಯ ಅಧಿವೇಶನ ನಡೆದಿದ್ದು, ಮಂಗಳವಾರದಿಂದ ವಿಶೇಷ ಸಂಸತ್ ಅಧಿವೇಶನವು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಇದರೊಂದಿಗೆ ಹೊಸ ಭಾರತದ ಹೊಸ ಆಶೋತ್ತರಗಳಿಗೆ ಹೊಸ ಸಂಸತ್ ಭವನ ಇನ್ನು ಮುಂದೆ ಸಾಕ್ಷಿಯಾಗಲಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಳೆ ಸಂಸತ್ ಭವನದ ಹಿರಿಮೆ-ಗರಿಮೆ, ಐತಿಹಾಸಿಕ ಕ್ಷಣಗಳನ್ನು ಮೆಲುಕು ಹಾಕಿದರು. ದೇಶದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಸ್ಥಳವನ್ನು ಕೊಂಡಾಡಿದರು. ಜತೆಗೆ, ಹೊಸ ಹಾದಿಯ ಹೊಳಹುಗಳನ್ನು ಬಿಚ್ಚಿಡುವ ಮೂಲಕ ದೇಶ ಸಾಗಬೇಕಾದ ಗತಿಯನ್ನು ಗುರುತಿಸಿದರು.
1927ರಲ್ಲಿ ಹಾಲಿ ಸಂಸತ್ ಭವನ ನಿರ್ಮಾಣವಾಯಿತು. ಸ್ವಾತಂತ್ರ್ಯೋತ್ತರದ 75 ವರ್ಷದಲ್ಲಿ ದೇಶದ ವಿಕಾಸ ಅನೇಕ ಮಜಲುಗಳಿಗೆ ಈ ಭವನ ಸಾಕ್ಷಿಯಾಗಿ ನಿಂತಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ದಿಗಳು ಹಾಗೂ ಚರ್ಚೆಗಳನ್ನು ಕಂಡಿದೆ. ಇದೇ ಸಂಸತ್‌ನಲ್ಲಿ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು ಸಭೆ ನಡೆಸಲಾಗಿದೆ. ನೆಹರು ಅವರ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಸಚಿವರಾದ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಸಮಗ್ರ ಜನರಿಗೆ ತಲುಪುವ ಯೋಜನೆಗಳನ್ನು ರೂಪಿಸಿದರು. ಆ ಮೂಲಕ ದೇಶದ ಜನರಿಗೆ ಯೋಜನೆ ತಲುಪುವಲ್ಲಿ ಮೊದಲ ಸರ್ಕಾರವು ಮುನ್ನುಡಿ ಬರೆಯಿತು. ಜವಾಹರ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಸೇರಿ ನೂರಾರು ಧೀಮಂತರು, 7,500 ಸಂಸದರು ದೇಶದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಈ ಸಂಸತ್ತು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೂ ಕಂಡಿದೆ, ಯುದ್ಧ ಘೋಷಣೆ ಸೇರಿ ಹಲವು ಕಠಿಣ ನಿರ್ಧಾರಗಳ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ. ಹಳೆಯ ಸಂಸತ್ ಭವನವು ದೇಶದ ಎಲ್ಲರಿಗೂ ಸೌಲಭ್ಯ ನೀಡಿದೆ. ಬಡವರು, ದಲಿತರು, ತುಳಿತಕ್ಕೊಳಗಾದವರ ಭವಿಷ್ಯಕ್ಕೆ ಅಡಿಗಲ್ಲು ಹಾಕಿದೆ. ಉಗ್ರರ ದಾಳಿಗೂ ಗುರಿಯಾಗಿದೆ. ದೇಶ ಈವರೆಗೂ ಸಾಗಿ ಬಂದ ಎಲ್ಲ ಘಟನೆಗಳನ್ನು ಈ ಹಳೇ ಸಂಸತ್ ಭವನ ತನ್ನ ಒಡಲೊಳಗೇ ಇಟ್ಟುಕೊಂಡಿದೆ. ಅದೀಗ ಇತಿಹಾಸದ ಭಾಗವಾಗಬಹುದು. ಆದರೆ, ಆಧುನಿಕ ಭಾರತದ ಜನ್ಮ ತಳೆದ ದೇಗುಲ ಎಂಬ ಹಿರಿಮೆ ಎಂದಿಗೂ ಇದ್ದೇ ಇರುತ್ತದೆ.
ಹಳೆಯದನ್ನು ಬಿಟ್ಟು ಹೊಸದನ್ನು ಸ್ವೀಕರಿಸುವಾಗ ಒಂದಿಷ್ಟು ಹಿಂಜರಿಕೆ ಇದ್ದೇ ಇರುತ್ತದೆ. ಹೊಸ ಸಂಸತ್ ಭವನ ನಿರ್ಮಾಣ ವೇಳೆಯೂ ಅಂಥ ಸಂದರ್ಭ ಎದುರಾದವು. ಹೊಸ ಸಂಸತ್ ಭವನ ಅಗತ್ಯವಿತ್ತೆ ಎಂಬ ಚರ್ಚೆಗಳು ನಡೆದವು. ಅವೆಲ್ಲವೂ ಈಗ ಕಳೆದು ಹೋದ ಕ್ಷಣಗಳು. ನಾವೀಗ ಹೊಸ ಸಂಸತ್ ಭವನದ ಮೂಲಕ ಹೊಸ ಮನ್ವಂತರಕ್ಕೆ ನಾಂದಿಯಾಗುವ ಐತಿಹಾಸಿಕ ಕ್ಷಣದಲ್ಲಿದ್ದೇವೆ. ಆ ಸಂತೋಷವನ್ನು, ಆ ಆನಂದವನ್ನು ಅನುಭವಿಸಬೇಕಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೆಲ್ತ್ ಎಟಿಎಂ ಆರೋಗ್ಯ ಸೇವೆಯ ವ್ಯಾಪ್ತಿ ಹಿಗ್ಗಿಸಲಿ
ವಿಶೇಷ ಸಂಸತ್ ಅಧಿವೇಶನವು ಈಗ ಮಂಗಳವಾರದಿಂದ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ.
ಹೊಸ ಸಂಸತ್ ಭವನವು ಹೊಸ ಭಾರತದ ಪ್ರತೀಕವಾಗಿ ರಚನೆಯಾಗಿದೆ. ನಮ್ಮೆಲ್ಲ ಗುಲಾಮಿ ಮಾನಸಿಕತೆಯನ್ನು ಬದಿಗೊತ್ತಿ, ನಮ್ಮದೇ ಸ್ವಂತ ವಿಚಾರಗಳ ಮೂಲಕ ಜಗತ್ತಿನಲ್ಲೇ ಮುಂಚೂಣಿಯ ನಾಯಕನಾಗುವ ಹಂತದಲ್ಲಿ ಭಾರತವು ಸಾಗುತ್ತಿದೆ. ಅದಕ್ಕೆ ಪೂರಕವಾಗಿಯೇ ನಿರ್ಮಾಣವಾಗಿರುವ ಹೊಸ ಸಂಸತ್ ಭವನವು ಈ ದೇಶದ ಧ್ವನಿ ಇಲ್ಲದವರಿಗೆ ಧ್ವನಿಯಾಗಲಿ, ಪ್ರಜಾಪ್ರಭುತ್ವದ ಹೆಗ್ಗುರುತಾಗಿ ಮೆರೆಯಲಿ. ಇತಿಹಾಸದ ಬಲದೊಂದಿಗೆ ಆಧುನಿಕತೆಯ ಸ್ಪರ್ಶವನ್ನು ಮೇಳೈಯಿಸಿಕೊಂಡು ಭಾರತದ ಅಭಿವೃದ್ಧಿಯ ಪಥಕ್ಕೆ ದೀವಿಗೆಯಾಗಲಿದೆ ಎಂದು ಆಶಿಸೋಣ.