Site icon Vistara News

ವಿಸ್ತಾರ ಸಂಪಾದಕೀಯ: ಪುನರುತ್ಥಾನದ ಹಾದಿಯಲ್ಲಿ ಹಾಕಿ, ಮತ್ತೆ ಒಲಿಂಪಿಕ್ ಪದಕ ಗುರಿಯಾಗಲಿ

Indian Hockey

ರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು 4-3 ಗೋಲ್​ಗಳಿಂದ ಮಲೇಷ್ಯಾವನ್ನು ಮಣಿಸಿ ದಾಖಲೆಯ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಾಧನೆ ಮೆರೆದಿದೆ. ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಪರಿಗಣಿತವಾಗಿರುವ ಹಾಕಿಯ ಪ್ರತಿ ಗೆಲುವು ಹುಮ್ಮಸ್ಸು ನೀಡುತ್ತದೆ. ಹಾಗಾಗಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತದ ಹಾಕಿ ತಂಡಕ್ಕೆ ಬಹುಮಾನಗಳ ಸುರಿಮಳೆಯಾಗುತ್ತಿದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು 1.1 ಕೋಟಿ ರೂ. ನಗದು ಬಹುಮಾನ ಘೋಷಿಸಿದರೆ, ಹಾಕಿ ಇಂಡಿಯಾ ಕೂಡ ಎಲ್ಲ ಆಟಗಾರರಿಗೆ ತಲಾ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಹಾಕಿ ತಂಡದ ಸಾಧನೆಗೆ ಮನಬಿಚ್ಚಿ ಹೊಗಳಿದ್ದಾರೆ. ಈ ಎಲ್ಲ ಶ್ಲಾಘನೆ ಮತ್ತು ಬಹುಮಾನಕ್ಕೆ ಪ್ರಸಕ್ತ ಹಾಕಿ ತಂಡವು ಅರ್ಹವಾಗಿದೆ.

ಕ್ರಿಕೆಟ್‌ ಅನ್ನೇ ಉಸಿರಾಡುವ ಭಾರತದಲ್ಲಿ ಕ್ರಿಕೆಟ್ ಹೊರತಾದ ಯಾವುದೇ ಕ್ರೀಡೆಯ ಸಾಧನೆಯು ಗರಿಷ್ಠ ಮಟ್ಟದ ಕೀರ್ತಿಗೆ ಕಾರಣವಾಗುತ್ತದೆ. ಅದರಲ್ಲೂ ಹಾಕಿ ತಂಡದ ಗೆಲುವು ತುಸು ಹೆಚ್ಚೇ ಸಂತಸಕ್ಕೆ ಕಾರಣವಾಗುತ್ತದೆ. ಯಾಕೆಂದರೆ, ಒಂದು ಕಾಲದಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತವು ಜಗತ್ತಿನ ಏಕಮೇವಾದ್ವಿತೀಯವಾಗಿತ್ತು. ಒಲಿಂಪಿಕ್ಸ್‌ನಲ್ಲಿ ಸತತ 8 ಬಾರಿ ಚಿನ್ನದ ಪದಕ ಗೆದ್ದ ಹಾಕಿ, ಒಮ್ಮಿಂದಲೇ ಮುಗ್ಗರಿಸಿದ್ದು ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪುರುಷರ ಹಾಕಿ ಮತ್ತು ಮಹಿಳೆಯರ ಹಾಕಿ ತಂಡವು ಪುನರುತ್ಥಾನದ ಹಾದಿಯಲ್ಲಿದೆ. 2020ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ತಂಡವು, 1980ರ ಬಳಿಕ ಪದಕವೊಂದನ್ನು ಗೆಲ್ಲಲು ಸಾಧ್ಯವಾಗಿತ್ತು; ಕಂಚಿಗೆ ಮುತ್ತಿಟ್ಟಿತ್ತು. ಮಹಿಳೆಯರ ಹಾಕಿ ತಂಡವು ಅಷ್ಟೇ, ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ಗೇರುವ ಮೂಲಕ ಅಚ್ಚರಿಯ ಸಾಧನೆಯನ್ನು ಮಾಡಿತ್ತು. ಆ ನಂತರದ ನಡೆದ ಅನೇಕ ಟೂರ್ನಿಗಳಲ್ಲಿ ಭಾರತದ ಹಾಕಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಾ ಬಂದಿದೆ.

ಕ್ರಿಕೆಟ್, ಹಾಕಿ, ಕಬಡ್ಡಿ, ಟೆನಿಸ್, ಬ್ಯಾಡ್ಮಿಂಟನ್… ಹೀಗೆ ಯಾವುದೇ ಕ್ರೀಡೆಯಾಗಲಿ, ಒಂದೊಂದು ಗೆಲುವು ದೇಶದ ಅಂತಃಶಕ್ತಿಯನ್ನು ಬಡಿದೆಬ್ಬಿಸುತ್ತವೆ. ದೇಶದ ಆತ್ಮ ಸಮ್ಮಾನಕ್ಕೆ ಹೊಸ ಮೆರುಗು ನೀಡುತ್ತವೆ. ಹಾಗಾಗಿ, ಪ್ರತಿ ಬಾರಿಯೂ ಭಾರತ ತಂಡವು ಕಣಕ್ಕಿಳಿದಾಗ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲೇ ಪ್ರಾರ್ಥಿಸುತ್ತಿರುತ್ತಾರೆ. ನಮ್ಮ ತಂಡವೇ ಪದಕಕ್ಕೆ ಕೊರಳೊಡ್ಡಲಿ, ಟ್ರೋಫಿಗೆ ಮುತ್ತಿಡಲಿ ಎಂದು. ಇತ್ತೀಚಿನ ವರ್ಷಗಳಲ್ಲಿ ಭಾರತದ ಹಾಕಿಯು ಏರುಗತಿಯಲ್ಲಿ ಸಾಗುತ್ತಿರುವುದು ಸಕಾರಾತ್ಮಕವಾಗಿದೆ. ಭಾರತದ ಪುರುಷರ ಹಾಕಿ ತಂಡವು 2014ರ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ವರ್ಲ್ಡ್ ಕಪ್, 2016ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, 2017ರ ಏಷ್ಯಾ ಕಪ್, 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ವರ್ಲ್ಡ್ ಕಪ್, 2020ರ ಒಲಿಂಪಿಕ್ಸ್, 2021ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ 2022ರ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದಿದೆ. ಈ ಸಾಧನೆಯ ಹಾದಿಯಲ್ಲಿ ಮಹಿಳಾ ತಂಡವೂ ಹಿಂದೆ ಬಿದ್ದಿಲ್ಲ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸುಳ್ಳು ಸುದ್ದಿ ತಡೆಯಲು ಕಠಿಣ ಕಾಯಿದೆ ಸ್ವಾಗತಾರ್ಹ

ಹಾಕಿ ನಿಧಾನವಾಗಿ ತನ್ನ ಗತವೈಭವಕ್ಕೆ ಮರಳುತ್ತಿದೆ. ಆದರೆ, ಸಾಗಬೇಕಾದ ದಾರಿ ಇನ್ನೂ ಬಹಳ ದೂರವಿದೆ. ನಾವು ಇಷ್ಟಕ್ಕೆ ಎದೆಯುಬ್ಬಿಸಿಕೊಂಡು ಮೈ ಮರೆಯುವ ಅಗತ್ಯವಿಲ್ಲ. ಭವಿಷ್ಯದ ತಂಡವನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ನಾವು ಹಾಕಿ ಪುನುರುತ್ಥಾನದ ಕೈಂಕರ್ಯವನ್ನು ಮುಂದುವರಿಸಬೇಕು. ಕ್ರೀಡೆ ಆಧುನಿಕವಾಗುತ್ತಾ ಹೋದಂತೆ ಅದರದ್ದೇ ಆದ ಕೌಶಲಗಳು, ಹೊಸ ವ್ಯವಸ್ಥೆಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಕ್ರೀಡಾ ಆಡಳಿತ ಮಂಡಳಿಗಳು ಯೋಜನೆ ರೂಪಿಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಖಂಡಿತಾ ಸಿಗುತ್ತದೆ. 2024ರ ಜುಲೈ 26ರಿಂದ ಫ್ರಾನ್ಸ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ಹಾಕಿಗೆ ಬಹುದೊಡ್ಡ ಅವಕಾಶವನ್ನು ಒದಗಿಸಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸಿದರೆ ಬಹುಶಃ ಬಂಗಾರದ ಪದಕಕ್ಕೆ ಕೊರಳೊಡ್ಡಬಹುದು. ಆ ಶಕ್ತಿ, ಸಾಮರ್ಥ್ಯ ಮತ್ತು ಕೌಶಲಗಳು ಪ್ರಸಕ್ತ ಹಾಕಿ ತಂಡಕ್ಕಿದೆ. ಜತೆಗೆ 140 ಕೋಟಿ ಭಾರತೀಯ ಹಾರೈಕೆಯಂತೂ ಇದ್ದೇ ಇರುತ್ತದೆ.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version