ಚಂದ್ರಯಾನದ ಯಶಸ್ಸಿನಿಂದ ನಾವೆಲ್ಲ ಇನ್ನೂ ಬೀಗುತ್ತಿರುವಾಗಲೇ ಇಸ್ರೋ ಇನ್ನೂ ಒಂದು ಸಾಹಸವನ್ನು ಮಾಡಹೊರಟಿದೆ. ಅದು ಸೂರ್ಯಯಾನ. ಆದರೆ ಚಂದ್ರನ ಮೇಲೆ ಇಳಿದಂತೆ ಸೂರ್ಯನ ಮೇಲೆ ಏನನ್ನೂ ಇಳಿಸಲು ಸಾಧ್ಯವಿಲ್ಲವಾದ್ದರಿಂದ ಸದ್ಯಕ್ಕೆ ಇದು ಸುರಕ್ಷಿತ ದೂರದಲ್ಲಿ ನಿಂತು ಸೂರ್ಯನ ಅಧ್ಯಯನ ಮಾಡುವ ಯೋಜನೆಯಾಗಿದೆ. ಇಸ್ರೋ ಕೈಗೊಳ್ಳುತ್ತಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಉಡಾವಣೆ ಶನಿವಾರ ಬೆಳಗ್ಗೆ ನಡೆಯಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಿಮ್ಮಲಿರುವ ಆದಿತ್ಯ ಬಾಹ್ಯಾಕಾಶ ನೌಕೆ, ನಾಲ್ಕು ತಿಂಗಳ ಕಾಲ ಸಾಗಿ ಭೂಮಿಯಿಂದ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ, ಭೂಮಿ ಹಾಗೂ ಸೂರ್ಯನ ನಡುವಿನ ಶೂನ್ಯ ಗುರುತ್ವ ಕಕ್ಷೆಯಲ್ಲಿ ನಿಲ್ಲಲಿದೆ. ಅದಕ್ಕೆ ಲಾಗ್ರೇಂಜ್ ಪಾಯಿಂಟ್ ಎಂದು ಹೆಸರು. ಅಲ್ಲಿಂದ ಆದಿತ್ಯ-L1 ಸೂರ್ಯನ 24 ಗಂಟೆಗಳ ಕಾಲದ ಅಡೆತಡೆಯಿಲ್ಲದ ನೋಟವನ್ನು ಪಡೆದು ಭೂಮಿ ಮತ್ತು ಇತರ ಗ್ರಹಗಳ ಸುತ್ತಮುತ್ತಲಿನ ಸೌರ ಪರಿಸರ ಪರಿಸ್ಥಿತಿಗಳ ಮೇಲೆ ಅಧ್ಯಯನ ನಡೆಸಬೇಕು. ಈ ನೌಕೆ ವಿಜ್ಞಾನಿಗಳಿಗೆ ಭೂಮಿಯ ಹವಾಮಾನದ ಇತಿಹಾಸವನ್ನು ಶೋಧಿಸಲು ಸಹಾಯ ಮಾಡಲಿದೆ. ಇದು ಚಂದ್ರಯಾನದ ಬಳಿಕ ಭಾರತದ ಮತ್ತೊಂದು ಮಹತ್ವದ ಮೈಲುಗಲ್ಲು(Vistara Editorial).
ಇದಕ್ಕಾಗುವ ವೆಚ್ಚ ಚಂದ್ರಯಾನದಷ್ಟೂ ಇಲ್ಲ. 2019ರಲ್ಲಿ ಆದಿತ್ಯ-L1 ಮಿಷನ್‌ಗಾಗಿ ಕೇಂದ್ರವು ಸುಮಾರು 380 ಕೋಟಿ ರೂ. ನೀಡಿದೆಯಷ್ಟೇ. ಆದರೆ ಸೂರ್ಯನನ್ನು ಅಧ್ಯಯನ ಮಾಡುತ್ತಿರುವ ಕೆಲವೇ ದೇಶಗಳ ನಡುವೆ ಭಾರತ ಸ್ಥಾನ ಪಡೆಯಲಿದೆ. ಚೀನಾ, ಅಮೆರಿಕ, ಯುರೋಪ್ ಒಕ್ಕೂಟ, ರಷ್ಯಾ, ಜಪಾನ್‌ಗಳು ಸದ್ಯ ಇದನ್ನು ಮಾಡಿವೆ. ಭಾರತ ಸೌರ ಅಧ್ಯಯನವನ್ನು ಮುಖ್ಯವಾಗಿ ಯಾಕೆ ಕೈಗೆತ್ತಿಕೊಂಡಿದೆಯೆಂದರೆ ಭಾರತವಿಂದು ಸೋಲಾರ್ ಇಂಧನ ಬಳಕೆಯ ಜಾಗತಿಕ ವಕ್ತಾರನಾಗಿದೆ. ಜಾಗತಿಕ ಸೋಲಾರ್ ಒಕ್ಕೂಟವನ್ನು ರಚಿಸುವಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನವೂ ಮಹತ್ವದ್ದು. ಜಗತ್ತಿನಾದ್ಯಂತ ಪೆಟ್ರೋಲಿಯಂ ಇಂಧನದ ಮೂಲಗಳು ಇನ್ನೆಷ್ಟು ಕಾಲ ನಮ್ಮ ಬಳಕೆಗೆ ಸಿಗುವುದೋ ತಿಳಿಯದು. ಅದು ಕೂಡ ದುಬಾರಿಯಾಗುತ್ತಿದೆ. ಪುಷ್ಕಳವಾಗಿ ಲಭ್ಯವಿರುವ ಸೋಲಾರ್ ಶಕ್ತಿಯನ್ನು ಬಳಸಿಕೊಳ್ಳುವತ್ತ ವಿಜ್ಞಾನಿಗಳು ನಾನಾ ಬಗೆಯ ಅಧ್ಯಯನ, ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಈ ಆದಿತ್ಯ ಯಾನ ಮಹತ್ವದ್ದು.
ಚಂದ್ರಯಾನ ಹಾಗೂ ಆದಿತ್ಯದಂತೆ ಇಸ್ರೋ ಸಂಸ್ಥೆ ತನ್ನ ಮುಂದೆ ಇನ್ನಷ್ಟು ಸವಾಲುಗಳನ್ನೂ ಸಾಧನೆಗಳನ್ನೂ ಹರಡಿಕೊಂಡಿದೆ. ಬಾಹ್ಯಾಕಾಶದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸುವ ಹಂಬಲದಲ್ಲಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ನಮ್ಮ ಇಸ್ರೋ ಸೇರಿ ಶಕ್ತಿಯುತ ಭೂ ವೀಕ್ಷಣಾ ಉಪಗ್ರಹವನ್ನು ಕಳಿಸಲು ಒಪ್ಪಂದ ಮಾಡಿಕೊಂಡಿವೆ. ಇದು ಮುಂದಿನ ವರ್ಷದ ಆರಂಭದಲ್ಲಿ ಉಡಾವಣೆಯಾಗುವ ಸಾಧ್ಯತೆಯಿದೆ. ನಿಸಾರ್ ಹೆಸರಿನ ಇದು ಹವಾಮಾನ ಬದಲಾವಣೆ, ಇತ್ಯಾದಿಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲಿದೆ. ಇನ್ನು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆ- ಗಗನಯಾನವಂತೂ ಬಹಳ ಸವಾಲಿನ ಕೆಲಸ. ಭೂಮಿಯಿಂದ 400 ಕಿಮೀ ದೂರದ ಕಕ್ಷೆಗೆ 3 ಸದಸ್ಯರಿರುವ ನೌಕೆಯನ್ನು ಉಡಾಯಿಸಿ 3 ದಿನಗಳ ಕಾಲ ಅಲ್ಲಿಟ್ಟು ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಈ ಯೋಜನೆಗೆ ಮುನ್ನ ಎರಡು ಮಾನವರಹಿತ ನೌಕೆಗಳು ಹೋಗಲಿವೆ. ಇದಲ್ಲದೆ ಮಂಗಳಯಾನದ ಯೋಜನೆಯೂ ಇದೆ. ಹೀಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ತಡೆಯಿಲ್ಲದೆ ಸಾಗುತ್ತಿದೆ.
ಬಾಹ್ಯಾಕಾಶದಲ್ಲಿ ನಮಗೆ ಈ ಸಾಧನೆಗಳು ಯಾಕೆ ಬೇಕು? ಮನುಷ್ಯನ ಮುಂದಿನ ಗುರಿ, ದಾರಿ ಎಲ್ಲವೂ ಬಾಹ್ಯಾಕಾಶವೇ ಆಗಿವೆ. ಶಕ್ತಿಶಾಲಿ ರಾಷ್ಟ್ರಗಳೆಲ್ಲವೂ ಬಾಹ್ಯಾಕಾಶದಲ್ಲಿ ತಮ್ಮ ಸ್ಥಾನ ಕೊರೆಯಲು ಪ್ರಯತ್ನಿಸುತ್ತಿವೆ. ಮುಂದೆ ಆಗಬಹುದಾದ ಜಾಗತಿಕ ಅಭಿವೃದ್ಧಿ ಕಾರ್ಯಗಳಲ್ಲಿ ಬಾಹ್ಯಾಕಾಶದ ನೆರವು ಬೇಕು; ಮುಂದೆ ಜಾಗತಿಕ ಯುದ್ಧ ನಡೆದಲ್ಲಿ ಅದರಲ್ಲೂ ಬಾಹ್ಯಾಕಾಶದಲ್ಲಿ ಶಕ್ತರಾದ ದೇಶಗಳಷ್ಟೇ ಗೆಲ್ಲಬಲ್ಲವು. ಭಾರತ ಕಡೆಗಣಿಸಲಾಗದ ವಿಜ್ಞಾನ- ತಂತ್ರಜ್ಞಾನ ಶಕ್ತಿ ಎಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದೆ. ಇದು ಭಾರತದ ಔನ್ನತ್ಯ ಸ್ಥಾನಮಾನಗಳನ್ನು ನಿಸ್ಸಂಶಯವಾಗಿಯೂ ಮತ್ತಷ್ಟು ಮೇಲೆತ್ತಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಏಕಕಾಲ ಚುನಾವಣೆ ಅಗತ್ಯ, ಆದರೆ ವಿಸ್ತೃತ ಚರ್ಚೆಯಾಗಲಿ
ಈಗಾಗಲೇ ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ಸಂಬಂಧಿತ ಉಪಗ್ರಹ ಆಧಾರಿತ ವ್ಯವಹಾರಗಳನ್ನು ಭಾರತ ನಡೆಸುತ್ತಿದೆ. ಈ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಹೆಚ್ಚಲಿದೆ. ಅನೇಕ ದೇಶಗಳಿಗೆ, ಸ್ವಂತ ಬಾಹ್ಯಾಕಾಶ ಸಾಧನೆ ಮಾಡುವ ಸಾಮರ್ಥ್ಯವಿಲ್ಲ. ಅವು ಭಾರತವನ್ನು ನೆಚ್ಚುತ್ತವೆ. 2023ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 546 ಶತಕೋಟಿ ಡಾಲರ್(45.35 ಲಕ್ಷ ಕೋಟಿ ರೂ.) ಮೌಲ್ಯವನ್ನು ತಲುಪಿದೆ. ಕಳೆದ ದಶಕದಲ್ಲಿ ಇದರ ಮೌಲ್ಯದಲ್ಲಿ 91 ಶೇಕಡಾ ಹೆಚ್ಚಳವಾಗಿದೆ. ಭಾರತದ ಬಾಹ್ಯಾಕಾಶ ಆರ್ಥಿಕತೆಯ ಮೊತ್ತ ಸುಮಾರು 11.37 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ವಹಿವಾಟಿನಿಂದ ಏನನ್ನೂ ಸಾಧಿಸಬಹುದಾಗಿದೆ. ಹೀಗಾಗಿಯೇ ಇದೊಂದು ಮಹತ್ವದ ಕ್ಷಣ.