Site icon Vistara News

ವಿಸ್ತಾರ ಸಂಪಾದಕೀಯ: ಪಕ್ಷಗಳ ಒಕ್ಕೂಟ, ಪ್ರಜಾಪ್ರಭುತ್ವದ ಅಣಕ ಆಗದಿರಲಿ

Indian Parliament

2024ರ ಲೋಕಸಭೆ ಎಲೆಕ್ಷನ್‌ಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ‘ಚುನಾವಣಾ ಮಹಾಭಾರತ’ ಸ್ಪಷ್ಟವಾಗುತ್ತಿದೆ. ಬೆಂಗಳೂರಲ್ಲಿ ಪ್ರತಿಪಕ್ಷಗಳು ‘ಇಂಡಿಯಾ’ ಹೆಸರಿನಡಿ ಒಂದಾಗಿ ಕಹಳೆ ಮೊಳಗಿಸಿದರೆ, ಅತ್ತ ದಿಲ್ಲಿಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಹಳೆ ಮಿತ್ರರು ಹಾಗೂ ಹೊಸ ಸ್ನೇಹಿತರನ್ನು ಸೇರಿಸಿಕೊಂಡು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟ(ಎನ್‌ಡಿಎ)ಕ್ಕೆ ಹೊಸ ಚೈತನ್ಯ ತುಂಬಿದೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆಗೆ ಯಾವ ಪಕ್ಷಗಳು, ಯಾವ ಕೂಟದಲ್ಲಿವೆ, ಅವುಗಳ ಕಾರ್ಯಸೂಚಿಗಳು ಬಹುತೇಕವಾಗಿ ಮಂಗಳವಾರ ನಿಚ್ಚಳವಾಗಿದೆ(Vistara Editorial).

ಪ್ರಮುಖ ಪ್ರತಿಪಕ್ಷಗಳೆಲ್ಲವೂ ಈ ಮೊದಲು ಬಿಹಾರದ ಪಾಟ್ನಾದಲ್ಲಿ ಸಭೆ ಸೇರಿ, ತಮ್ಮ ಒಗ್ಗಟ್ಟಿನ ಮಂತ್ರಕ್ಕೆ ಮುನ್ನುಡಿ ಬರೆದಿದ್ದವು. ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ 26 ಪ್ರತಿಪಕ್ಷಗಳು ಕೈಜೋಡಿಸಿದವು. ಇದರೊಂದಿಗೆ ಅವುಗಳ ಬಲ ಕೂಡ ಹೆಚ್ಚಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಡಿಯಾ(I.N.D.I.A) ಹೆಸರಿನಲ್ಲಿ ಒಂದೇ ಸೂರಿನಡಿ ಬಂದು ಕುಳಿತಿವೆ. ಬಹುಶಃ ಅವುಗಳ ಮುಂದಿನ ಸಭೆಗಳಲ್ಲಿ ಈ ‘ಇಂಡಿಯಾ’ ಕೂಟದ ಸಾಮಾನ್ಯ ಕಾರ್ಯಕ್ರಮಗಳು, ನಾಯಕತ್ವದ ಬಗ್ಗೆ ಸ್ಪಷ್ಟವಾಗಿ ತಿಳಿಯಬಹುದು. ಇತ್ತ, ಎನ್‌ಡಿಎ ಶುರುವಾಗಿ 25 ವರ್ಷ ಪೂರೈಸಿದ ನೆಪದಲ್ಲಿ ಬಿಜೆಪಿ, ತನ್ನ ಹಳೆಯ ದೋಸ್ತಿಗಳ ಜತೆಗೆ, ಹೊಸಬರನ್ನು ಕೂಟಕ್ಕೆ ಆಹ್ವಾನಿಸಿ, ಸಭೆ ಮಾಡಿದೆ. ಈಗ ಎನ್‌ಡಿಎ ತೆಕ್ಕೆಯಲ್ಲಿ 38 ಪಕ್ಷಗಳಿವೆ. 2019ರಲ್ಲಿ ಚುನಾವಣೆ ವೇಳೆ, ಅಷ್ಟೇನೂ ಮಹತ್ವದ ಪಡೆಯದ ಎನ್‌ಡಿಎಗೆ ಬಹುಶಃ ಈ ಬಾರಿಯ ಚುನಾವಣೆಯಲ್ಲಿ ತುಸು ಹೆಚ್ಚೇ ಪ್ರಾಮುಖ್ಯತೆ ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.

ಈ ಎರಡೂ ರಾಜಕೀಯ ಪಕ್ಷಗಳ ಕೂಟಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ನಮಗೆ ಭಾರತೀಯ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಅದರ ಸೌಂದರ್ಯ ಗೋಚರಾವಾಗುತ್ತದೆ. ಭಾರತೀಯ ರಾಜಕಾರಣ ಒಂದರೆಡು ಪಕ್ಷಗಳ ಆಟವಲ್ಲ ಎಂಬುದು ಮನವರಿಕೆಯಾಗುತ್ತದೆ. ಇಲ್ಲಿರುವ ಪ್ರತಿಯೊಂದು ಪಕ್ಷವು, ಸಣ್ಣದೇ ಇರದಲೇ ದೊಡ್ಡದೇ ಇರಲಿ, ಅದು ತನ್ನದೇ ಆದ ಮಹತ್ವವನ್ನು, ಪ್ರಭಾವವನ್ನು ಹೊಂದಿದೆ. ಎಷ್ಟೇ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವೈರುಧ್ಯಗಳಿದ್ದರೂ ದೇಶದ ಹಿತಕ್ಕಾಗಿ ಒಗ್ಗೂಡಿಸುವ ಬೆಸುಗೆಯೊಂದಿದೆ. ಅದುವೇ ಭಾರತೀಯ ಪ್ರಜಾಪ್ರಭುತ್ವ. ಇಂಡಿಯಾ ಹೆಸರಿನಲ್ಲಿ ಒಂದಾಗಿರುವ ಪ್ರತಿಪಕ್ಷಗಳನ್ನೇ ತೆಗೆದುಕೊಳ್ಳಿ ಅಥವಾ ಎನ್‌ಡಿಎಯನ್ನಾದರೂ ಪರಿಶೀಲಿಸಿ. ಅಲ್ಲಿ ವಿಭಿನ್ನ ವಿಚಾರಧಾರೆ, ವಿಭಿನ್ನ ಕಲ್ಪನೆಗಳು, ವಿಭಿನ್ನ ಧ್ಯೇಯಗಳು, ಉದ್ದೇಶಗಳು, ಗುರಿಗಳೊಂದಿಗೆ ಶುರುವಾದ ಪಕ್ಷಗಳಿವೆ. ಆದರೂ, ಅವೆಲ್ಲವೂ ತಮಗೆ ಸರಿ ಹೊಂದುವ ಕೂಟಗಳೊಂದಿಗೆ ಹೆಜ್ಜೆ ಹಾಕುತ್ತವೆ ಎಂದರೆ, ಅದು ಭಾರತದ ಗೆಲುವು, ಪ್ರಜಾಪ್ರಭುತ್ವದ ಔದಾರ್ಯ ಎಂದು ಧಾರಾಳವಾಗಿ ಹೇಳಬಹುದು. ಪ್ರಪಂಚದ ಯಾವುದೇ ರಾಷ್ಟ್ರದಲ್ಲೂ ಇಷ್ಟೊಂದು ವೈವಿಧ್ಯತೆಯಲ್ಲಿ ಏಕತೆಯ ಪಕ್ಷ ರಾಜಕಾರಣ ಕಾಣಸಿಗುವುದು ಅಸಾಧ್ಯವೇ ಸರಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಾಕಿಸ್ತಾನವು ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಲಿ

ಯಾವುದೇ ರಾಜಕೀಯ ಪಕ್ಷದ ಅಂತಿಮ ಉದ್ದೇಶ ಚುನಾವಣೆಯನ್ನು ಗೆದ್ದು ಅಧಿಕಾರ ಹಿಡಿಯುವುದು. ತನ್ಮೂಲಕ ರಾಷ್ಟ್ರದ ಸೇವೆ ಮಾಡುವುದೇ ಗುರಿಯಾಗಿರುತ್ತದೆ. ಈ ವಿಷಯದಲ್ಲೇ ಏನೇ ಟೀಕೆ-ಟಿಪ್ಪಣಿಗಳಿದ್ದರೂ ಅದೆಲ್ಲವೂ ರಾಜಕಾರಣದ ಸಾಧನಗಳಷ್ಟೇ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಎನ್‌ಡಿಎಯೇ ಆಗಲೀ, ಇಂಡಿಯಾ ಕೂಟವೇ ಆಗಲಿ ದೇಶದ ಪ್ರಗತಿಯೊಂದನ್ನೇ ಗುರಿಯಾಗಿಸಿಕೊಂಡು ಮುನ್ನಡೆಯಲಿ. ದೇಶದ ಭವ್ಯ ಪರಂಪರೆಯ ಹೆಮ್ಮೆಯೊಂದಿಗೆ ಭವಿಷ್ಯದ ಭವ್ಯ ಭಾರತವನ್ನು ನಿರ್ಮಾಣ ಮಾಡುವ ಸಂಕಲ್ಪಗಳನ್ನು ಜನರ ಮುಂದಿಡಲಿ. ರೈತರು, ಮಹಿಳೆಯರು, ಶ್ರಮಿಕರು, ಹಿಂದುಳಿದವರು, ಆದಿವಾಸಿಗಳು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಸಲಿ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ರೋಡ್ ಮ್ಯಾಪ್ ಹಾಕುವ ಕೆಲಸವನ್ನು ಮಾಡಲಿ. ಈ ರೀತಿಯಾಗಿ ತಮ್ಮೆಲ್ಲ ಕಾರ್ಯಸೂಚಿಗಳೊಂದಿಗೆ ಜನರ ಮುಂದೆ ಹೋಗಲಿ. ಅಂತಿಮವಾಗಿ ಈ ದೇಶದ ಮತದಾರರಿಗೆ ಯಾರ ಮೇಲೆ ವಿಶ್ವಾಸ ಮೂಡುತ್ತದೆಯೋ ಅವರನ್ನು ಆಶೀರ್ವದಿಸುತ್ತಾರೆ. ಅದರೊಂದಿಗೆ ನಮ್ಮ ಪ್ರಜಾಪ್ರಭುತ್ವಕ್ಕೆ ಗೆಲುವಾಗಲಿ. ಹಾಗೆಯೇ, ರಾಜಕೀಯ ಒಕ್ಕೂಟಗಳು ಅವಕಾಶವಾದಿತನದ ಕೂಟ, ಪ್ರಜಾಪ್ರಭುತ್ವದ ಅಣಕ ಕೂಡ ಆಗದಿರಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version