Site icon Vistara News

ವಿಸ್ತಾರ ಸಂಪಾದಕೀಯ: ಅಯೋಧ್ಯೆಯ ರಾಮ ಮಂದಿರಕ್ಕೆ ಕರ್ನಾಟಕದ ತೇಜಸ್ಸು!

Vistara Editorial, Ayodhya's Ram Mandir is the glory of Karnataka!

ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರ ನಿರ್ಮಾಣದಲ್ಲಿ ಕರ್ನಾಟಕ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್​​ (Arun Yogiraj) ಅವರು ಕೆತ್ತಿರುವ ಬಾಲರಾಮನ (Ram lalla Statue) ವಿಗ್ರಹ ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿದೆ. ಇದು ಕರುನಾಡಿನ ಪಾಲಿಗೆ ಅತ್ಯಂತ ಸಂಭ್ರಮದ ಸುದ್ದಿ. ಹಲವು ಸ್ಪರ್ಧಿಗಳನ್ನು ಮೀರಿಸಿ ಅರುಣ್‌ ಅವರದೇ ಕೆತ್ತನೆಯನ್ನು ಮಂದಿರದ ಟ್ರಸ್ಟ್​ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಅವರ ಕೈಚಳಕವಿದೆ. ಅವರ ಭಕ್ತಿ, ಶ್ರದ್ಧೆಯಿದೆ. ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರಾರು ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್​. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್​ ಶಿಲ್ಪಿಗಳಾದರೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.

ಅರುಣ್ ಅವರ ಶಿಲ್ಪ ಆಯ್ಕೆಯಾಗಲು ಮೊದಲ ಕಾರಣ ವಿಗ್ರಹದ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ; ಹಾಗೆಯೇ ಇದು ಬಾಲ ರಾಮನ ವಿಗ್ರಹ ಆಗಿರುವುದರಿಂದ, ಇವರ ಕೆತ್ತನೆಯಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಹೆಚ್ಚು ನೈಜತೆಯಿಂದ ಕೂಡಿದೆ. ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ತೇಜಸ್ಸಿನಿಂದ ಕಂಗೊಳಿಸುವ ಇದು ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಕರ್ನಾಟಕದ ಹಲವಾರು ಸಂಗತಿಗಳು ಗಮನಾರ್ಹವಾಗಿ ಮಿಳಿತಗೊಂಡಿವೆ. ಮೊದಲನೆಯದಾಗಿ ಗರ್ಭಗುಡಿಯ ಮೂರ್ತಿ ಕನ್ನಡಿಗ ಕೆತ್ತುತ್ತಿರುವುದು. ಎರಡನೆಯದಾಗಿ, ಇದನ್ನು ಕೆತ್ತುತ್ತಿರುವ ಕಲ್ಲು ಕೂಡ ಕರ್ನಾಟಕದ್ದೇ. ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಇದು ಕೂಡ ನಾಡಿನ ಹೆಮ್ಮೆ.

ಇನ್ನು ಗಮನಾರ್ಹವಾಗಿ, ನಾಡಿನ ಮೂರು ಪ್ರಮುಖ ವ್ಯಕ್ತಿಗಳು ಮಂದಿರ ನಿರ್ಮಾಣದ ವಿವಿಧ ಮೇಲ್ವಿಚಾರಣೆ ವಹಿಸಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಮುಖ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಮಂದಿರ ನಿರ್ಮಾಣದ ಅಡಿಪಾಯದ ಕಟ್ಟುವಿಕೆಯ ಹಂತದಿಂದಲೂ ಅವರು ಜೊತೆಗಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಟ್ರಸ್ಟ್‌ನಲ್ಲಿರುವ ಸಂತರಲ್ಲಿ ದಕ್ಷಿಣ ಭಾರತದಿಂದ ಬಂದಿರುವ ಏಕೈಕ ಶ್ರೀಗಳು ಇವರು. 1985ರಲ್ಲಿ ನಮ್ಮ ರಾಜ್ಯದ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿಯೇ ʼಮಂದಿರವಲ್ಲೇ ಕಟ್ಟುವೆವುʼ ಎಂಬ ನಿರ್ಣಯ ಅಂಗೀಕೃತವಾಗಿದ್ದು, ಅದರ ಸಾಕಾರಕ್ಕಾಗಿ ಕೆಲಸಗಳು ಆರಂಭಗೊಂಡಿದ್ದವು. ಇದರಲ್ಲಿ ದೇಶದ ನೂರಾರು ಸಂತರು, ಮಹಂತರು ಪಾಲ್ಗೊಂಡಿದ್ದರು. ಆದ್ದರಿಂದ, ಇಂದಿನ ರಾಮಮಂದಿರ ಮೂಲ ಬೀಜ ನಮ್ಮ ರಾಜ್ಯದಲ್ಲಿಯೇ ಇದೆ ಎಂದು ತಿಳಿಯಬಹುದು.

ಬೆಂಗಳೂರಿನ ಬಳಿಯ ದೇವನಹಳ್ಳಿಯ ಸಮೀಪದ ಸಾದಹಳ್ಳಿಯ ಅಮೃತಶಿಲೆಯನ್ನು ಭಾರಿ ಪ್ರಮಾಣದಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗಿದೆ. ಸುಮಾರು 700- 800 ಟನ್‌ಗಳಷ್ಟು ಸಾದಹಳ್ಳಿ ಅಮೃತಶಿಲೆಯನ್ನು ಅಯೋಧ್ಯೆಗೆ ಸಾಗಿಸಲಾಗಿದೆ. ಹೀಗಾಗಿ ಕರ್ನಾಟಕದ ಭಕ್ತಾದಿಗಳು ಅಯೋಧ್ಯೆಯ ಮಂದಿರದಲ್ಲಿ ಕಾಲಿಡುವಾಗ ರಾಮಭಕ್ತಿಯೊಂದಿಗೆ ʼನಾ ಮೆಟ್ಟುವ ನೆಲ ಅದೆ ಕರ್ನಾಟಕʼ ಎಂಬ ಭಾವವನ್ನೂ ಸೇರಿಸಿಕೊಳ್ಳಬಹುದು. ಜೊತೆಗೆ ಸುಮಾರು 150 ಕಿಲೋಗಳಷ್ಟು ಅಗರಬತ್ತಿ, ಬೆಳ್ಳಿಯ ಇಟ್ಟಿಗೆಗಳು, ಚಿನ್ನದ ಹಾರಗಳು ಕೂಡ ರಾಮ ಲಲ್ಲಾನ ಪೂಜೆಯಲ್ಲಿ ಕರ್ನಾಟಕದಿಂದ ಸಾಕಾರಗೊಳ್ಳುತ್ತಿವೆ.

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾದ ಗೋಪಾಲ ನಾಗರಕಟ್ಟೆಯವರು ಕನ್ನಡಿಗರಾಗಿದ್ದು, ರಾಮಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಂಪಿಯ ಅಂಜನಾದ್ರಿಯ ಬೆಟ್ಟದ ಕಲ್ಲುಗಳನ್ನೂ ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಇದು ಪೌರಾಣಿಕ, ಐತಿಹಾಸಿಕ ಮಹತ್ವವುಳ್ಳ ಸಂಗತಿಯೇ ಸರಿ. ಯಾಕೆಂದರೆ ಅಂಜನಾದ್ರಿಯು ಶ್ರೀರಾಮಸೇವಕ ಆಂಜನೇಯನ ಜನ್ಮಸ್ಥಳವೆಂದೇ ಭಕ್ತರು ನಂಬಿದ್ದಾರೆ. ಶ್ರೀರಾಮ ಹಾಗೂ ಆಂಜನೇಯರ ಬಾಂಧವ್ಯ ಎಷ್ಟು ಗಾಢವಾದುದು ಎಂಬುದು ರಾಮಾಯಣ ಬಲ್ಲವರಿಗೆ ತಿಳಿದೇ ಇದೆ. ಹೀಗಾಗಿ ಇದೊಂದು ದೈವಿಕ ಬಾಂಧವ್ಯವೂ ಆಗಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತ ವಿರುದ್ಧ ಚೀನಾ ಕೈಗೊಂಬೆ ಮಾಲ್ಡೀವ್ಸ್ ಉದ್ಧಟತನ, ಇದೆಲ್ಲ ಎಷ್ಟು ದಿನ?

Exit mobile version