ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ʼಭಾರತ ರತ್ನʼ ಪುರಸ್ಕಾರವನ್ನು ‘ಜನ ನಾಯಕ’ ಕರ್ಪೂರಿ ಠಾಕೂರ್ (Karpoori Thakur) ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಘೋಷಣೆ ಮಾಡಿದೆ. ಹಿಂದುಳಿದ ವರ್ಗದ ನಾಯಕರಾಗಿದ್ದ, ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ 2024ರ ಭಾರತ ರತ್ನ ಪುರಸ್ಕೃತರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಯಾರಿಗೂ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿರಲಿಲ್ಲ. 2019ರಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ನೀಡಿದ್ದೇ ಕೊನೆ. ನಂತರ ಈ ವರ್ಷವೇ ನೀಡಲಾಗುತ್ತಿದೆ. ಸಾಕಷ್ಟು ಜನರಿಗೆ ಈ ಹಿಂದೆಯೂ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ. ಭೂಪೇನ್ ಹಜಾರಿಕಾ, ಮದನಮೋಹನ ಮಾಳವೀಯ, ಜಯಪ್ರಕಾಶ ನಾರಾಯಣ್, ಸರ್ದಾರ್ ವಲ್ಲಭಭಾಯ್ ಪಟೇಲ್, ನಾನಾಜಿ ದೇಶಮುಖ್ ಅವರಿಗೂ ಹೀಗೇ ಮರಣೋತ್ತರವಾಗಿ ನೀಡಲಾಗಿತ್ತು. ವ್ಯಕ್ತಿ ಮೃತಪಟ್ಟ ಸಾಕಷ್ಟು ಕಾಲ ಕಳೆದ ಬಳಿಕವೂ ಒಬ್ಬ ವ್ಯಕ್ತಿಯ ಕೊಡುಗೆಗಳು ಸಮಯದ ಪರೀಕ್ಷೆಯನ್ನು ಉತ್ತರಿಸಿ ಭವಿಷ್ಯದ ಕಾಲಘಟ್ಟದಲ್ಲೂ ಉಳಿದುಕೊಂಡಿವೆ ಎಂಬುದನ್ನು ಈ ಮರಣೋತ್ತರ ಪ್ರಶಸ್ತಿ ಘೋಷಣೆಗಳು ಸೂಚಿಸುತ್ತವೆ(Vistara Editorial).
ಲೋಹಿಯಾ ಚಿಂತನೆಯಿಂದ ಪ್ರೇರಿತರಾಗಿದ್ದ ಠಾಕೂರ್ ಅವರು 1970ರಿಂದ 1971ರವರೆಗೆ ಹಾಗೂ 1977ರಿಂದ 1979ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಸಮಾಜವಾದಿ ಮತ್ತು ಭಾರತೀಯ ಕ್ರಾಂತಿ ದಳ ಪಕ್ಷ, ಜನತಾ ಪಾರ್ಟಿಗಳಲ್ಲಿದ್ದರು. ಅವರು ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಿಹಾರದ ರಾಜಕಾರಣದಲ್ಲಿ ಅಗ್ರಮಾನ್ಯರಾಗಿದ್ದರು. ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಅವರ ಆಡಳಿತ ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ನ್ಯಾಯ ಕಲ್ಪಿಸಲು ನಾಂದಿ ಹಾಡಿತು. ಹೃದಯವಂತ ಸಮಾಜವಾದಿ ನಾಯಕ ಠಾಕೂರ್ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯವಾದಿ ವಿಚಾರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ನಂತರ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು. ಅವರ ರಾಜಕೀಯ ಸಿದ್ಧಾಂತವು ‘ಲೋಹಿಯಾ’ ಚಿಂತನೆಯ ಆಧಾರಿತವಾಗಿದ್ದು, ಇದು ಕೆಳಜಾತಿಗಳ ಸಬಲೀಕರಣಕ್ಕೆ ಒತ್ತು ನೀಡಿತು.
ಸರ್ಕಾರಿ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದ ಮೀಸಲಾತಿಗಾಗಿ “ಕರ್ಪೂರಿ ಠಾಕೂರ್ ಫಾರ್ಮುಲಾ”ವನ್ನು ಪರಿಚಯಿಸಿದ್ದು ಠಾಕೂರ್ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದು. 1978ರ ನವೆಂಬರ್ ತಿಂಗಳಲ್ಲಿ ಅವರು ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ 26% ಮೀಸಲಾತಿಯನ್ನು ಜಾರಿಗೆ ತಂದರು. ಇದು 1990ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳಿಗೆ ವೇದಿಕೆಯನ್ನು ಸಿದ್ಧಪಡಿಸಿತು. ಈ ನೀತಿಯು ಹಿಂದುಳಿದ ವರ್ಗಗಳಿಗೆ ಅಧಿಕಾರ ನೀಡುವುದಲ್ಲದೆ, ಹಿಂದಿಯ ಹೃದಯಭೂಮಿಯಲ್ಲಿ (ಉತ್ತರ ಭಾರತ) ರಾಜಕೀಯದ ಚಹರೆಯನ್ನು ಬದಲಿಸಿ, ಪ್ರಾದೇಶಿಕ ಪಕ್ಷಗಳ ಉದಯಕ್ಕೂ ಕಾರಣವಾಯಿತು. ಶಿಕ್ಷಣ ಮಂತ್ರಿಯಾಗಿ ಠಾಕೂರ್ ಮೆಟ್ರಿಕ್ಯುಲೇಷನ್ ಹಂತದಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿದ್ದನ್ನು ರದ್ದುಗೊಳಿಸಿದರು. ಇಂಗ್ಲಿಷ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತಡೆಗೋಡೆ ಎಂದು ಗುರುತಿಸಿದ್ದರು. ಶಾಲೆ ಕಾಲೇಜುಗಳನ್ನು ಸ್ಥಾಪಿಸಿ, ಹಿಂದುಳಿದ ಪ್ರದೇಶಗಳಲ್ಲಿ ಮತ್ತು 8ನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಿದರು. ಇದರಿಂದ ಶಾಲೆಯನ್ನು ತೊರೆಯುವ ಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಯಿತು. ಪ್ರಮುಖ ಭೂ ಸುಧಾರಣೆಗಳನ್ನು ಜಾರಿಗೆ ತಂದರು. ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣವಾಯಿತು.
ಸಹಜವಾಗಿಯೇ ಇವೆಲ್ಲ ಕ್ರಮಗಳೂ ಜನರಿಗೆ ಹತ್ತಿರವಾಗಿದ್ದವು. ಪರಿಣಾಮವಾಗಿಯೇ ಜನರು ಅವರನ್ನ ಜನ ನಾಯಕ ಎಂದು ಕರೆಯಲಾರಂಭಿಸಿದ್ದು. ಸವಲತ್ತು ಪಡೆದ ವರ್ಗದಿಂದ ಗಮನಾರ್ಹ ಪ್ರತಿರೋಧ ಮತ್ತು ನಿಂದನೆಯನ್ನು ಅವರು ಎದುರಿಸಿದರೂ ಠಾಕೂರ್ ಅವರ ನೀತಿಗಳು ಭವಿಷ್ಯದ ನಾಯಕರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸುವುದನ್ನು ಮುಂದುವರಿಸಲು ಅಡಿಪಾಯವನ್ನು ಹಾಕಿದವು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅವರ ರಾಜಕೀಯ ದೂರದೃಷ್ಟಿಯಿಂದ ಕೂಡಿತ್ತು. ಹೀಗಾಗಿ ನಂತರದ ದಲಿತ, ಹಿಂದುಳಿದ ವರ್ಗಗಳ ನಾಯಕರಿಗೆ ಅದೊಂದು ಮಾದರಿಯನ್ನು ಸೃಷ್ಟಿಸಿತು. ಅವರು ಹಾಕಿಕೊಟ್ಟ ಹಾದಿಯಲ್ಲಿ ಇಂದಿನ ಬಿಹಾರದ- ಉತ್ತರ ಭಾರತದ ರಾಜಕೀಯ ಬಹುದೂರ ಸಾಗಿಬಂದಿದೆ. ದೀನದಲಿತರು, ಶೋಷಿತರು ತಮ್ಮ ಧ್ವನಿಯನ್ನು ಕಂಡುಕೊಂಡಿದ್ದಾರೆ.
ಕರ್ಪೂರಿ ಠಾಕೂರ್ ಅವರನ್ನು ಭಾರತ ರತ್ನ ಪುರಸ್ಕಾರ ನೀಡಿ ಸಮ್ಮಾನಿಸುವ ಮೂಲಕ ಮೋದಿ ಸರ್ಕಾರ ಉತ್ತಮ ಮಾದರಿಯೊಂದನ್ನು ಸೃಷ್ಟಿಸಿದೆ. ಈ ಬಾರಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆರಿಸಿದಾಗಲೂ ಇಂಥದೊಂದು ಸಂದೇಶವನ್ನು ಮೋದಿ ಸರ್ಕಾರ ನೀಡಿದೆ. ದಲಿತರು, ಹಿಂದುಳಿದ ಸಮುದಾಯ ಹಾಗೂ ಬುಡಕಟ್ಟು ಜನಾಂಗದ ನಾಯಕರು ರಾಷ್ಟ್ರ ರಾಜಕೀಯದಲ್ಲಿ ಮುಚೂಣಿಯಲ್ಲಿ ನಿಂತಾಗ, ಭಾರತ ರತ್ನದಂಥ ಪುರಸ್ಕಾರಗಳನ್ನು ಪಡೆದಾಗ, ಅದು ದುರ್ಬಲರಲ್ಲಿ ತಾವೂ ಈ ದೇಶ ಕಟ್ಟಿದವರು ಎಂಬ ಸ್ವಾಭಿಮಾನದ ಭಾವವನ್ನು ಮೂಡಿಸುತ್ತದೆ. ಇದು ಇಂದಿನ ಅಗತ್ಯ. ಕೇಂದ್ರ ಸರ್ಕಾರ ಈ ಉದ್ದೇಶದಲ್ಲಿ ಯಶಸ್ವಿಯಾಗಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಮ ಮಂದಿರ ಭವ್ಯ, ದಿವ್ಯ ಭಾರತಕ್ಕೆ ಮುನ್ನುಡಿಯಾಗಲಿ