ಲೋಕಾಯುಕ್ತ ದಾಳಿಯಲ್ಲಿ (Lokayukta raid) ಸಿಕ್ಕಿಬಿದ್ದು ತಪ್ಪಿತಸ್ಥರೆಂದು ಸಾಬೀತಾದ ಅಧಿಕಾರಿಗಳಿಗೆ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ ನೀಡುವ ಮಹತ್ವದ ತೀರ್ಮಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕರ್ತವ್ಯದಲ್ಲಿರುವಾಗ ಹಣಕಾಸು ದುರುಪಯೋಗ ಮಾಡಿಕೊಂಡು, ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದು ತಪ್ಪಿತಸ್ಥರೆಂದು ಸಾಬೀತಾದ ಕೆಲವು ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ತೆರವುಗೊಳಿಸುವ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ಅಂತಿಮವಾಗಿ ಅವರಿಗೆ ಕಡ್ಡಾಯ ನಿವೃತ್ತಿ ನೀಡುವ ತೀರ್ಮಾನ ಮಾಡಲಾಯಿತು. ಈ ಸಂಪುಟ ಸಭೆಯಲ್ಲಿ ಮೂವರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಒಪ್ಪಿಗೆ ನೀಡಲಾಗಿದೆ. ಇದು ಈ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಮಾನವೇ ಅಥವಾ ಸಮಗ್ರವಾಗಿ ತೆಗೆದುಕೊಂಡ ನಿರ್ಧಾರವೇ ಎನ್ನುವುದನ್ನು ಸ್ಪಷ್ಟಪಡಿಸಲಾಗಿಲ್ಲ(Vistara Editorial).
ಅದೇನೇ ಇದ್ದರೂ ಈ ನಿರ್ಣಯ ಉತ್ತಮವಾದುದು ಎನ್ನುವುದರಲ್ಲಿ ಸಂಶಯವಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಅದಕ್ಷತೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಟೆಲಿಕಮ್ಯುನಿಕೇಷನ್ಸ್ ಇಲಾಖೆಯ 10 ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ನಿರ್ದೇಶಿಸಿದ್ದರು. ಇವರೇನೂ ಸಣ್ಣ ಅಧಿಕಾರಿಗಳಾಗಿರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ, ಅದಕ್ಷ ಅಧಿಕಾರಿಗಳ ವಿರುದ್ಧ ಕ್ರಮದ ಭಾಗವಾಗಿದೆ ಇದು. ಕಳೆದ ವರ್ಷವೂ ನೂರಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಮನೆಗೆ ಕಳಿಸಲಾಗಿತ್ತು. ಇಂಥ ಕ್ರಮಗಳಿಂದ ಯಾವ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಆಲೋಚಿಸಬೇಕು. ಅದಕ್ಷತೆ, ಅಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ, ವಿಳಂಬದ್ರೋಹ ಇವುಗಳನ್ನು ಸಹಿಸಲು ಸಾಧ್ಯವಿಲ್ಲ ಎಂಬ ಕಠಿಣ ಸಂದೇಶವನ್ನಂತೂ ಅಧಿಕಾರಶಾಹಿಗೆ ನೀಡಬೇಕಾದುದು ಅಗತ್ಯ. ಚುರುಕಿನ ಆಡಳಿತದ ನಿಟ್ಟಿನಲ್ಲಿ ಇದು ಅತ್ಯಂತ ಸೂಕ್ತ ಕ್ರಮ.
ಬಹು ಕಾಲದಿಂದ ಇರುವ ಒಂದು ಬೇಡಿಕೆಯೆಂದರೆ, ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂಬುದು. ಬಲೆಗೆ ಬಿದ್ದು ಸಸ್ಪೆಂಡ್ ಆದ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಮತ್ತೆ ನೇಮಕವಾಗಿ ಪ್ರಮೋಷನ್ ಪಡೆಯುವುದು ಕಾಣಬರುತ್ತದೆ. ಶಿಕ್ಷೆಯಾಗದೇ ಹೋದರೆ ದಾಳಿಗಳನ್ನು ನಡೆಸಿಯೂ ಪ್ರಯೋಜನವಿಲ್ಲ. ಅದಕ್ಷ ರಾಜಕಾರಣಿಗಳನ್ನು ಕೆಲಸ ಮಾಡದಿದ್ದರೆ ಐದು ವರ್ಷದಲ್ಲಿ ಮತದಾರರು ಮರಳಿ ಆರಿಸದೆ ಮನೆಯಲ್ಲಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಆದರೆ ಅದಕ್ಷ ಅಧಿಕಾರಿಗಳಿಗೆ ಯಾವ ಶಿಕ್ಷೆ? ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದರೆ ಅಮಾನತಾಗಬಹುದು; ಜೈಲುಪಾಲಾಗಬಹುದು. ಆದರೆ ಕೆಲಸವೇ ನಡೆಯದಂತೆ ಕೊಕ್ಕೆ ಹಾಕುವ, ವಿಳಂಬದ್ರೋಹದಿಂದ ವ್ಯವಸ್ಥೆಯೇ ಕುಂಟುವಂತೆ ಮಾಡುವ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದು ಸುಲಭವಲ್ಲ. ಇಂಥ ಸಂದರ್ಭದಲ್ಲಿ ಅಧಿಕಾರಸ್ಥ ಜನಪ್ರತಿನಿಧಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಲೇಬೇಕು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ನಮ್ಮ ಕ್ಲಿನಿಕ್‌ಗಳು ಎಲ್ಲರ ಕ್ಲಿನಿಕ್‌ಗಳಾಗಲಿ
ಕೆಲ ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಕತೆ ಬಿಡುಗಡೆಯಾಗಿತ್ತು. ಅದರಲ್ಲಿ ಅವರು ʼʼಭಾರತದ ಜಡ ಅಧಿಕಾರಶಾಹಿ ಅಲ್ಲಿನ ಪ್ರಗತಿಗೆ ದೊಡ್ಡ ತಡೆಯಾಗಿದೆʼʼ ಎಂದು ಬರೆದಿದ್ದರು. ಅವರು ಸತ್ಯವನ್ನೇ ಹೇಳಿದ್ದಾರೆ ಎಂದು ತಿಳಿಯಲು ಹೆಚ್ಚಿನ ಪರಿಶೀಲನೆ ಬೇಕಿಲ್ಲ. ಸರ್ಕಾರಿ ಕಚೇರಿಗೆ ಯಾವುದೇ ಕೆಲಸ ಮಾಡಿಸಲು ಹೋದರೂ ಹತ್ತಾರು ಮೇಜಿಗೆ ಅಲೆಯದೇ ಕೆಲಸ ಮಾಡಿಸಿಕೊಳ್ಳಲು ಶ್ರೀಸಾಮಾನ್ಯರಿಂದ ಸಾಧ್ಯವಿಲ್ಲ. ಅಧಿಕಾರಶಾಹಿಯ ಮೇಲ್ದರ್ಜೆಯಲ್ಲಿ ಭ್ರಷ್ಟತೆಯಿಲ್ಲದೇ ಹೋದರೆ ತಳವರ್ಗದವರೆಗೆ ಅದು ಹಬ್ಬಲು ಸಾಧ್ಯವಿಲ್ಲ. ಲೋಕಾಯುಕ್ತ ದಾಳಿಗಳಲ್ಲಿ ಇದುವರೆಗೆ ನೂರಾರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ; ಲೆಕ್ಕಕ್ಕೆ ಸಿಕ್ಕದ ಹಣ- ನಗದು ಅವರಲ್ಲಿ ಬಹಳಷ್ಟು ಪತ್ತೆಯಾಗಿದೆ. ಇದಕ್ಕೆಲ್ಲಾ ಒಂದು ಉತ್ತರದಾಯಿತ್ವ ಬೇಡವೇ? ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಮರ್ಪಕವಾಗಿದೆ. ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳಿಂದಾಗಿ ಆಡಳಿತ ಹಳಿ ತಪ್ಪುತ್ತದೆ. ಇವರಿಗೆಲ್ಲಾ ಕಡ್ಡಾಯ ನಿವೃತ್ತಿ ನೀತಿ ಜಾರಿಗೆ ಮಾಡಿದರೆ ಮಾತ್ರ ಆಡಳಿತ ಪಾರದರ್ಶಕ ಮತ್ತು ಚುರುಕುಗೊಳ್ಳಲು ಸಾಧ್ಯ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.