ಮೈಸೂರು ದಸರಾ (Mysore Dasara) ವೇಳೆ ಕಾರ್ಯಕ್ರಮ ನೀಡಲು ಆಯ್ಕೆಯಾದ ಕಲಾವಿದರಿಂದಲೇ ಕಮಿಷನ್ (Dasara Commission) ಪಡೆಯಲಾಗುತ್ತಿದೆ ಎಂಬ ಆರೋಪ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಇದಕ್ಕೆ ಸಾಂಸ್ಕೃತಿಕ ವಲಯ ದಿಗ್ಭ್ರಾಂತಿಯಿಂದ ಪ್ರತಿಕ್ರಿಯಿಸಿದೆ. ತಾರಾನಾಥರಂಥ ದಿಟ್ಟ, ಘನತೆಯುಳ್ಳ ಕಲಾವಿದರ ಬಳಿಯೂ ಲಂಚಾವತಾರವೇ ಎಂದು ಪ್ರತಿಪಕ್ಷಗಳು ಹಾಗೂ ಪ್ರಜ್ಞಾವಂತರು ಆಕ್ಷೇಪಿಸಿದ್ದರು. ಈ ಬಗ್ಗೆ ಮೊದಲಿನಿದಲೂ ಗುಸುಗುಸು ಸುದ್ದಿಗಳಿವೆ. ಆದರೆ ಈ ಬಾರಿ ಪಂಡಿತ್ ರಾಜೀವ್ ತಾರಾನಾಥರಂಥ ಮೇರು ಕಲಾವಿದರಿಂದ ಕಮಿಷನ್ ಕೇಳಿದ ಪ್ರಕರಣ ಹೊರಗೆ ಬಿದ್ದಿರುವ ಕಾರಣ ಸರ್ಕಾರಕ್ಕೆ ಭಾರಿ ಮುಜುಗರ ಸೃಷ್ಟಿಸಿದೆ. ಇದೀಗ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ(Vistara Editorial).
ವರದಿ ಪ್ರಕಟವಾದ ಕೂಡಲೇ ತರಾತುರಿಯಿಂದ ಎಚ್ಚೆತ್ತುಕೊಂಡು ಸರ್ಕಾರ, ಮುಜುಗರ ತಪ್ಪಿಸಲು ಮುಂದಾಗಿ ನಡೆಸಿದ ಪ್ರಯತ್ನವೂ ನಡೆದಿದೆ. ಪಂಡಿತ್ ತಾರಾನಾಥರ ಬಳಿ ಹೋದ ಸರ್ಕಾರಿ ಅಧಿಕಾರಿಗಳು, ನಿಮ್ಮನ್ನು ಯಾರಾದರೂ ಅಧಿಕಾರಿಗಳು ಸಂಪರ್ಕಿಸಿ ಲಂಚ ಕೇಳಿದರೇ ಎಂದು ಪ್ರಶ್ನಿಸಿ ಅವರಿಂದ ಉತ್ತರ ಪಡೆದು, ಅದನ್ನು ಪೋಸ್ಟರ್ ಹಾಗೂ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ತಾರಾನಾಥರು ಹೇಳಿರುವದೇನೆಂದರೆ, ಯಾವುದೇ ಅಧಿಕಾರಿಗಳಾಗಲೀ, ಸಾಂಸ್ಕೃತಿಕ ಉಪ ಸಮಿತಿಯ ಸದಸ್ಯರಾಗಲಿ ನನ್ನನ್ನು ಸಂಪರ್ಕ ಮಾಡಿಲ್ಲ. ಯಾವುದೋ ಅನಾಮಧೇಯ ವ್ಯಕ್ತಿಯಿಂದ ಇನ್ನೊಬ್ಬರ ಮೊಬೈಲ್ಗೆ ಈ ರೀತಿಯ ಮಾಹಿತಿ ಬಂದಿದೆ ಎಂದಿದ್ದಾರೆ. ಅಲ್ಲಿಗೆ ಕಮಿಷನ್ ದೊಡ್ಡ ಅಧಿಕಾರಿಗಳ ಮಟ್ಟದಲ್ಲಿ ಇಲ್ಲ ಎಂದು ಅಧಿಕಾರಿಗಳು ಸೇಫ್ ಆಗಿದ್ದಾರೆ. ಆದರೆ ಯಾರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬುಕ್ ಮಾಡಲಾಗುತ್ತಿದೆ, ಇದರಲ್ಲಿ ಮಧ್ಯವರ್ತಿಗಳ ಪಾತ್ರವೆಷ್ಟು, ಯಾವ್ಯಾವ ಕಾರ್ಯಕ್ರಮಗಳ ಆಯೋಜನೆಯನ್ನು ಹೊರಗುತ್ತಿಗೆ ಕೊಡಲಾಗಿದೆ ಎಂಬುದೆಲ್ಲವೂ ಮುಖ್ಯವಾಗುತ್ತದೆ. ಕಮಿಷನ್ ಅವತಾರ ನಡೆದೇ ಇಲ್ಲವೆಂದು ರುಜುವಾತಾಗಿಲ್ಲ. ಮೈಸೂರಿನ ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಮಾತನ್ನು ಉಳಿಸಿಕೊಳ್ಳಬೇಕಿದೆ.
ಪಂಡಿತ್ ರಾಜೀವ ತಾರಾನಾಥರು ಸಣ್ಣ ಕಲಾವಿದರಲ್ಲ. ಅಂತಾರಾಷ್ಟ್ರೀಯ ಖ್ಯಾತಿಯ ರವಿಶಂಕರ್, ಚೌರಾಸಿಯಾ, ಝಕೀರ್ ಹುಸೆನ್ ಮುಂತಾದವರ ಸಾಲಿನಲ್ಲಿ ನಿಲ್ಲಬಲ್ಲಂಥ ಸರೋದ್ ವಾದಕರು. ಕನ್ನಡ ಸಾಹಿತ್ಯ ವಲಯದಲ್ಲಿಯೂ ಶ್ರೇಷ್ಠ ಹೆಸರಾಗಿರುವ ಇವರು ನೇರ ನಿಷ್ಠುರ ನಡೆನುಡಿಗೂ ಹೆಸರುವಾಸಿ. ಸಾಹಿತ್ಯ ಹಾಗೂ ಸಂಗೀತದಲ್ಲಿ ʼಶ್ರೇಷ್ಠತೆʼಯನ್ನು ಪ್ರತಿಪಾದಿಸುವ ರಾಜೀವರು, ಇಂಥ ವ್ಯವಹಾರವನ್ನು ಸಹಿಸುವವರಲ್ಲ. ಅಧಿಕಾರಿಗಳ ಮುಖಾಮುಖಿಯಲ್ಲಿ ಪಂಡಿತರು ನೀಡಿರುವ ಸ್ಪಷ್ಟನೆ ಸರ್ಕಾರಕ್ಕೆ ಆಗುತ್ತಿರುವ ಮುಜುಗರವನ್ನು ತಪ್ಪಿಸುವ ಉದ್ದೇಶದಿಂದ ಕೂಡಿರಬಹುದು. ಆದರೆ ಅವರ ಮಾತುಗಳಲ್ಲಿ ಅವರ ಮನ ನೊಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ʻʻನಾನು ಸಂಗೀತ ಕ್ಷೇತ್ರದವನು. ಈ ಘಟನೆಗಳಿಂದ ನನಗೆ ನಿರಾಶೆಯಾಗಿದೆ. ನಾನು ಮತ್ತು ನನ್ನ ಯೋಚನೆಯೇ ಬೇರೆ. ಇದೆಲ್ಲ ನಮಗೆ ಬೇಕಾಗಿರಲಿಲ್ಲʼʼ ಎಂದಿದ್ದಾರೆ ಅವರು. ಅಂಥ ಕಲಾವಿದರಿಗೇ ಈ ಪರಿಯ ಅನುಭವ ಆಗಿದೆ ಎಂದರೆ, ಇನ್ನು ಸಣ್ಣ ಕಲಾವಿದರನ್ನು ಅಧಿಕಾರಿಗಳೋ, ಏಜೆಂಟರೋ ಯಾವ ಪರಿ ಸುಲಿಗೆ ಮಾಡಿರಬಹುದು?
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿದೇಶಗಳಲ್ಲಿನ ಭಾರತೀಯರ ಕಾರ್ಯಾಚರಣೆಯಲ್ಲಿ ನೈಪುಣ್ಯತೆ ಸಾಧಿಸಿದ ಭಾರತ
ಪಂಡಿತರ ಅಸಮಾಧಾನದ ಸುದ್ದಿ ಫೇಕ್ ನ್ಯೂಸ್ ಎಂದು ಸಾಧಿಸಲು ಮಾಡುವ ಪ್ರಯತ್ನದ ಬದಲು, ಇಂಥ ಹಗರಣ ಇಲ್ಲವಾಗಿಸಲು ಏನು ಮಾಡಬೇಕು ಎನ್ನುವತ್ತ ಸರ್ಕಾರ ಚಿಂತಿಸಲಿ. ನಿಜವಾಗಿಯೂ ಕಮಿಷನ್ ವ್ಯವಹಾರ ನಡೆಯುತ್ತಿದೆಯೇ, ನಡೆದಿದ್ದರೆ ಯಾವ ಹಂತದಲ್ಲಿ, ಇದನ್ನು ತಡೆಗಟ್ಟಲು ಏನು ಮಾಡಬಹುದು ಇತ್ಯಾದಿಗಳ ಬಗೆಗೆ ಚಿಂತಿಸಬೇಕು. ಹಾಗೆಯೇ ಒಮ್ಮೆ ದಸರಾದಲ್ಲಿ ಕಾರ್ಯಕ್ರಮ ನೀಡಿದವರಿಗೆ ಮುಂದಿನ ಮೂರು ವರ್ಷ ಅವಕಾಶವಿಲ್ಲ ಎಂಬ ನಿಯಮವಿದೆ. ಇದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆಯೇ? ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಜಕ್ಕೂ ಪ್ರತಿಭಾವಂತರಿಗೆ ಮಣೆ ಹಾಕಲಾಗುತ್ತಿದೆಯೇ ಅಥವಾ ವಶೀಲಿಬಾಜಿ, ಪ್ರಭಾವಗಳ ಬಳಕೆ ಆಗುತ್ತಿದೆಯೇ? ಇದನ್ನೂ ಗಮನಿಸಬೇಕಿದೆ. ಯಾಕೆಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಗುಣಮಟ್ಟ ಪಾಲನೆಯಾಗುತ್ತಿಲ್ಲ ಎಂಬ ಮಾತನ್ನು ಇದನ್ನು ಸದಾ ಗಮನಿಸುವವರು ಗುರುತಿಸಬಹುದು. ಇದು ಅಗತ್ಯ. ಯಾಕೆಂದರೆ ಮೈಸೂರು ದಸರಾ ಎಂಬುದು ಈ ನಾಡಿನ ಸಾಂಸ್ಕೃತಿಕ ಹೆಗ್ಗುರುತು. ಇಲ್ಲಿ ನಡೆಯುವುದೆಲ್ಲವೂ ನಮ್ಮ ರಾಜ್ಯದ ಅತ್ಯುನ್ನತ ಸಾಂಸ್ಕೃತಿಕ ಸಂಗತಿಗಳು ಎಂದು ಇಲ್ಲಿಗೆ ಭೇಟಿ ನೀಡುವವರು ತಿಳಿಯುತ್ತಾರೆ. ವಿದೇಶದವರೂ ಈ ಕಾರ್ಯಕ್ರಮಕ್ಕಾಗಿಯೇ ಆಗಮಿಸುತ್ತಾರೆ. ಅಂಥವರ ಮುಂದೆ ನಾವು ಈ ಕ್ಷುಲ್ಲಕ ಕಾರಣಗಳಿಂದಾಗಿ ಸಣ್ಣವರಾಗಬಾರದು. ಸರ್ಕಾರಿ ಇಲಾಖೆಗಳಲ್ಲಿ ಲಂಚಾವತಾರ, ಕಮಿಷನ್ ಇರುವುದು ಸುಳ್ಳಲ್ಲ. ಅದು ದಸರಾಗೂ ವ್ಯಾಪಿಸಿದ್ದರೆ ಆಶ್ಚರ್ಯವಿಲ್ಲ. ಆದರೆ ಇದನ್ನು ಮೂಲೋತ್ಪಾಟನೆ ಮಾಡಿ, ದಸರಾಗೆ ಕವಿದ ಕಳಂಕವನ್ನು ನಿವಾರಿಸುವ ಪ್ರಯತ್ನ ಆಗಬೇಕಿದೆ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.