Site icon Vistara News

ವಿಸ್ತಾರ ಸಂಪಾದಕೀಯ: ಚಂಡೀಗಢ ಮೇಯರ್‌ ಚುನಾವಣೆ ಕುರಿತ ಸುಪ್ರೀಂ ತೀರ್ಪು ಐತಿಹಾಸಿಕ

Vistara Editorial, Historical Verdict on Chandigarh Mayor election by Supreme Court

ಚಂಡೀಗಢದ ಮೇಯರ್‌ ಚುನಾವಣೆಯ (Chandigarh Mayor Election) ಪ್ರಹಸನವನ್ನು ಸುಪ್ರೀಂ ಕೋರ್ಟ್‌ ಕೊನೆಗೊಳಿಸಿದೆ (Supreme Court). ಆಮ್‌ ಆದ್ಮಿ ಪಕ್ಷದ ಕುಲದೀಪ್‌ ಕುಮಾರ್‌ ಅವರನ್ನು ವಿಜೇತರೆಂದು ಕೋರ್ಟ್‌ ಘೋಷಿಸಿದೆ. ವಿವಾದಿತ ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದ ಮತಪತ್ರಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ರಿಟರ್ನಿಂಗ್ ಆಫೀಸರ್ ಆಗಿದ್ದ ಅನಿಲ್ ಮಸೀಹ್ ಅವರು ಅಸಿಂಧು ಎಂದು ಘೋಷಿಸಿದ್ದ ಎಂಟು ಮತಪತ್ರಗಳನ್ನು ಸಿಂಧು ಎಂದು ಘೋಷಿಸಿದೆ. ಮತಪತ್ರಗಳ ಮರುಎಣಿಕೆ ನ್ಯಾಯಪೀಠದ ಮುಂದೆಯೇ ನಡೆಯಿತು. ಇದಕ್ಕೂ ಮುನ್ನ ಮತಪತ್ರಗಳನ್ನು ತಿರುಚಿ ಬಿಜೆಪಿ ಅಭ್ಯರ್ಥಿಯನ್ನು ಮೇಯರ್‌ ಎಂದು ಘೋಷಿಸಿದ್ದ ರಿಟರ್ನಿಂಗ್‌ ಆಫೀಸರ್ ಅನಿಲ್‌ ಮಸೀಹ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರ ಪೀಠ ಆದೇಶಿಸಿದೆ. ಅನಿಲ್ ಮಸೀಹ್ ಬಿಜೆಪಿಯ ನಾಮನಿರ್ದೇಶಿತ ಪಾಲಿಕೆ ಸದಸ್ಯರಾಗಿದ್ದರು. ಇವರನ್ನು ರಿಟರ್ನಿಂಗ್ ಆಫೀಸರ್ ಆಗಿ ನೇಮಿಸಲಾಗಿತ್ತು. ಚಂಡೀಗಢ ಸ್ಥಳೀಯಾಡಳಿತದಲ್ಲಿ ಆಪ್‌ ಮತ್ತು ಕಾಂಗ್ರೆಸ್ ಕೂಟಕ್ಕೆ ಸ್ಪಷ್ಟ ಬಹುಮತವಿದ್ದರೂ ಚುನಾವಣಾಧಿಕಾರಿ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿ ಬಿಜೆಪಿ ಅಭ್ಯರ್ಥಿಯನ್ನು ವಿಜಯಿಯೆಂದು ಘೋಷಿಸಿದ್ದರು. ಸೋಮವಾರ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಹಾಜರಾದ ಅನಿಲ್‌ ಮಸಿಹ್‌ ಮತಪತ್ರಗಳನ್ನು ತಿರುಚಿದ್ದನ್ನು ಒಪ್ಪಿಕೊಂಡಿದ್ದರು. ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸಿಜೆ ನೇತೃತ್ವದ ಪೀಠ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿತ್ತಲ್ಲದೆ ಕುದುರೆ ವ್ಯಾಪಾರದ ವಿರುದ್ಧ ಕಳವಳ ವ್ಯಕ್ತಪಡಿಸಿತ್ತು(Vistara Editorial).

ಈ ತೀರ್ಪು ಹಾಗೂ ಪ್ರಕ್ರಿಯೆ ಇತಿಹಾಸವನ್ನೇ ಸೃಷ್ಟಿಸಿದೆ. ಮೇಯರ್‌ ಹುದ್ದೆಗೆ ಚುನಾವಣೆ ನಡೆಸುವುದು ಸ್ಥಳೀಯಾಡಳಿತ ಹಾಗೂ ಅದಕ್ಕೆ ಸಂಬಂಧಿಸಿದ ರಾಜ್ಯ ಚುನಾವಣಾ ಆಯೋಗದ ಹೊಣೆ. ಮತದಾನ ನ್ಯಾಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು, ಬಳಿಕ ಮತ ಎಣಿಕೆ ಮಾಡಿ ವಿಜಯಿಯನ್ನು ಘೋಷಿಸುವುದು ಕೂಡ ಆಯೋಗದ ರಿಟರ್ನಿಂಗ್‌ ಆಫೀಸರ್‌, ಮತ್ತು ಆ ಮೂಲಕ ರಾಜ್ಯ ಚುನಾವಣಾಧಿಕಾರಿಗಳ ಹೊಣೆ. ಆದರೆ, ಚಂಡೀಗಢದಂಥ ಸ್ಥಳೀಯ ಪಟ್ಟಣವೊಂದರ ಮೇಯರ್‌ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಂಥ ʼಸಣ್ಣʼ ಸಂಗತಿ ಕೂಡ ಸುಪ್ರೀಂ ಕೋರ್ಟ್‌ ಅಂಗಳದಲ್ಲೇ ನಡೆಯಬೇಕಾಗಿ ಬಂದಿದೆ ಎಂಬುದು ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇದಕ್ಕೂ ಸುಪ್ರೀಂ ಕೋರ್ಟೇ ಬೇಕೆ? ಇಂಥ ಪ್ರಕರಣವೊಂದು ಸುಪ್ರೀಂ ಕೋರ್ಟಿನ ಮೆಟ್ಟಿಲೇರುವುದೇ ಮೊದಲಿಗೆ ಸರಿಯಲ್ಲ. ಕಾರ್ಪೊರೇಟರ್‌ಗಳ ಮಟ್ಟದಲ್ಲೇ ಮುಗಿಯಬೇಕಾದ ವಿಷಯ ಸರ್ವೋಚ್ಚ ನ್ಯಾಯಾಲಯದ ವರೆಗೂ ಹೋಗಿದೆ ಎಂದರೆ ಅಲ್ಲಿ ಪ್ರಜಾಪ್ರಭುತ್ವಕ್ಕೆ ಸವಾಲು ಎದುರಾಗಿದೆ ಎಂದೇ ಅರ್ಥ.

ಇದನ್ನೇ ನ್ಯಾಯಪೀಠವೂ ಹೇಳಿದೆ. ರಿಟರ್ನಿಂಗ್‌ ಆಫೀಸರ್ ಮಾಡಿದ ಮತಪತ್ರಗಳ ತಿರುಚುವಿಕೆಯ ಕೆಲಸವನ್ನು ಗಮನಿಸಿದ ನ್ಯಾಯಪೀಠ “ಇದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಹೇಳಿತ್ತು. “ಇಂತಹ ಕುತಂತ್ರಗಳಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯು ನಿಷ್ಪ್ರಯೋಜಕವಾಗದಂತೆ ನೋಡಿಕೊಳ್ಳಲು ನ್ಯಾಯಪೀಠ ಕರ್ತವ್ಯ ಬದ್ಧವಾಗಿದೆ” ಎಂದು ಹೇಳಿತ್ತು. “ಮೂಲಭೂತ ಪ್ರಜಾಸತ್ತಾತ್ಮಕ ಆದೇಶವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಇಂತಹ ಅಸಾಧಾರಣ ಸಂದರ್ಭಗಳಲ್ಲಿ ಮುಂದಡಿ ಇಡಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ಪೀಠವು ಹೇಳಿದೆ. ಇಂಥ ʼಚಿಲ್ಲರೆʼ ಕೆಲಸಗಳಿಗೆ ನ್ಯಾಯಪೀಠವನ್ನು ಎಳೆದು ತಂದುದು ಅಧಿಕಾರಿಶಾಹಿಗೆ, ಶಾಸಕಾಂಗಕ್ಕೇ ಮುಖಭಂಗ. ಶಾಸಕಾಂಗ ಹಾಗೂ ಕಾರ್ಯಾಂಗ ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ನ್ಯಾಯಾಂಗ ಮೂಗು ತೂರಿಸುವ ಪ್ರಸಕ್ತಿ ಇಲ್ಲಿ ಬರುತ್ತಿರಲೇ ಇಲ್ಲ.

ರಾಜ್ಯ ಚುನಾವಣಾ ಆಯೋಗವು ಮುನ್ಸಿಪಲ್ ಕಾರ್ಪೊರೇಶನ್‌ಗಳಿಗೆ ಚುನಾವಣೆಗಳನ್ನು ನಡೆಸುವ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ನಿರ್ದೇಶಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಪಾಲಿಕೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ನ್ಯಾಯಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಕಾರ್ಪೊರೇಷನ್‌ ಮೇಯರ್ ಚುನಾವಣೆಯ ಮತ ಎಣಿಕೆಯೇನೂ ಲಕ್ಷಾಂತರ ಸಂಖ್ಯೆಯಲ್ಲಿರುವುದಿಲ್ಲ. ಹಾಡಹಗಲೇ ಇಂಥ ಅಕ್ರಮ ಎಸಗಿ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದ ರಿಟರ್ನಿಂಗ್ ಆಫೀಸರ್ ವಿರುದ್ಧ ಕಠಿಣ ಕ್ರಮ ಆಗಬೇಕು. ಚುನಾವಣೆಯಲ್ಲಿ ಈ ರೀತಿ ಅಕ್ರಮ ಆಗದಂತೆ ನೋಡಿಕೊಳ್ಳಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಪ. ಬಂಗಾಳದ ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣ ಆಘಾತಕಾರಿ

Exit mobile version