Site icon Vistara News

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

School Children

Vistara Editorial: Hoax Bomb Threat To Schools; Strict Action Should Be Taken Against Culprits

ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ (E-Mail) ಮೂಲಕ ಬೆದರಿಕೆ ಒಡ್ಡುವುದು, ಆ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗುವುದು, ಇದರಿಂದ ಎಲ್ಲೆಡೆ ಇದು ಸುದ್ದಿಯಾಗುವಂತೆ ಮಾಡುವ ಹೀನಾತಿಹೀನ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಸೋಮವಾರ (ಮೇ 6) ಅಹಮದಾಬಾದ್‌ನಲ್ಲಿ ಹಲವು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಇನ್ನು, ಮೇ 1ರಂದು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NRC) ಸುಮಾರು 200ಕ್ಕೂ ಅಧಿಕ ಶಾಲೆಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಮೇಲ್‌ಗಳನ್ನು (Hoax Bomb Threat) ಕಳುಹಿಸಲಾಗಿತ್ತು. ಸಹಜವಾಗಿಯೇ ಇದು ದೇಶಾದ್ಯಂತ ಸುದ್ದಿಯಾಯಿತು. ಶಾಲೆಗಳಿಂದ ಮಕ್ಕಳನ್ನು ಕೂಡಲೇ ಮನೆಗೆ ಕಳುಹಿಸಲಾಯಿತು. ಪೋಷಕರೂ ಶಾಲೆಗಳಿಗೆ ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋದರು. ಈಗಲೂ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಕರೆಸಿಕೊಳ್ಳಲು ಶಿಕ್ಷಕರಿಗೂ ಧೈರ್ಯ ಸಾಲುತ್ತಿಲ್ಲ. ಒಟ್ಟಿನಲ್ಲಿ ಕಿಡಿಗೇಡಿಗಳು ಮಾಡುವ ಉಪದ್ವ್ಯಾಪದಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಮುಳುಗಿದ್ದಾರೆ. ಹಾಗಾಗಿ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆಯೊಡ್ಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನಾಮಧೇಯ ವ್ಯಕ್ತಿಗಳು ಮೇಲ್‌ ಮಾಡುವುದು, ತನಿಖೆ ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸುವುದು, ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿರುವುದರಿಂದ ಇದೊಂದು ದೊಡ್ಡ ವಿಷಯ ಅಲ್ಲ, ನಿರ್ಲಕ್ಷಿಸುವುದು ಒಳಿತು ಎಂದು ಎನಿಸಿದರು, ಹುಸಿ ಬೆದರಿಕೆಗಳು ಅತಿ ಹೆಚ್ಚು ಆತಂಕ ಸೃಷ್ಟಿಸುತ್ತಿವೆ, ಮಕ್ಕಳ ಜತೆಗೆ ಪೋಷಕರ ಮೇಲೂ ಪರಿಣಾಮ ಬೀರುತ್ತಿವೆ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ತುಂಬ ಮುಂದುವರಿದಿದೆ. ಸೈಬರ್‌ ಅಪರಾಧ ವಿಭಾಗವನ್ನೂ ತೆರೆಯಲಾಗಿದೆ. ಹಾಗಾಗಿ, ಸೈಬರ್‌ ಕ್ರೈಂ ಪೊಲೀಸರು ಇಂತಹ ಇ-ಮೇಲ್‌ ಕಡಿಗೇಡಿಗಳನ್ನು ಮಟ್ಟಹಾಕಬೇಕು. ಬೆಂಗಳೂರು, ಅಹಮದಾಬಾದ್‌, ದೆಹಲಿ ಎನ್ನದೆ, ದೇಶಾದ್ಯಂತ ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲ್ನೋಟಕ್ಕೆ ಬೇರೆ ದೇಶದ ವಿಪಿಎನ್‌ (VPN) ಬಳಸಿ ಇ-ಮೇಲ್‌ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗೊತ್ತಾದರೂ, ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಪದ್ವ್ಯಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಹುಸಿ ಬಾಂಬ್‌ ಬೆದರಿಕೆ ಕರೆಗಳು ಹತ್ತಾರು ಪರಿಣಾಮಗಳನ್ನು ಬೀರುತ್ತಿವೆ. ನಗರಗಳಲ್ಲಿ ಮಕ್ಕಳು ಪ್ರಾಣ ಭಯದಲ್ಲಿಯೇ ಶಾಲೆಗಳಿಗೆ ತೆರಳುವಂತಾಗಿದೆ. ಪೋಷಕರಂತೂ ಜೀವ ಹಿಡಿದುಕೊಂಡು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುಮಾರು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಇದು ನೂರಾರು ಶಾಲೆಗಳಲ್ಲಿ ಆತಂಕ ಸೃಷ್ಟಿಸಿತ್ತು. ಎಷ್ಟೋ ದಿನಗಳವರೆಗೆ ಪೋಷಕರು ಮಕ್ಕಳನ್ನು ಶಾಲೆಗಳಿಗೇ ಕಳುಹಿಸರಲಿಲ್ಲ. ಶಾಲೆಗಳ ಆಡಳಿತ ಮಂಡಳಿಗಳೂ ಅಷ್ಟೇ, ಸುಮ್ಮನೆ ಅಪಾಯವನ್ನು ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಮಕ್ಕಳನ್ನು ಹಲವು ದಿನಗಳವರೆಗೆ ಶಾಲೆಗೆ ಕರೆಸಿರಲಿಲ್ಲ. ಈಗ, ದೆಹಲಿ ಹಾಗೂ ಅಹಮದಾಬಾದ್‌ ಶಾಲೆಗಳು, ಮಕ್ಕಳು ಮತ್ತು ಪೋಷಕರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ.

ಮಕ್ಕಳಿಗೆ ಜೀವ ಭಯ, ಪೋಷಕರು ಹಾಗೂ ಶಿಕ್ಷಕರಿಗೆ ಆತಂಕ ಮಾತ್ರವಲ್ಲ, ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಮಕ್ಕಳ ಶೈಕ್ಷಣಿಕ ಏಳಿಗೆಯ ಮೇಲೆಯೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪದೇಪದೆ ಬೆದರಿಕೆ ಒಡ್ಡಿದರೆ ಮಕ್ಕಳು ಶಾಲೆಗಳಿಗೆ ಹೋಗುವುದಿಲ್ಲ. ಇದರಿಂದ ಅವರು ಪಠ್ಯವನ್ನು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಇನ್ನು, ಎಳೆಯ ವಯಸ್ಸಿನಲ್ಲೇ ಅವರು ಆತಂಕದಲ್ಲಿ ಶಾಲೆಗೆ ಹೋದರೆ, ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಯಾದ ಹೋಮ್‌ ವರ್ಕ್‌, ಆಟ-ಪಾಠಗಳಿಗೆ ಕಡಿಮೆ ಸಮಯ ಸಿಗುತ್ತಿದೆ. ಅತಿಯಾದ ಸ್ಪರ್ಧೆಯಿಂದ ಮಕ್ಕಳು ಅಂಕಗಳ ಹಿಂದೆ ಓಡಬೇಕಾದ, ರ‍್ಯಾಂಕ್‌ ಪಡೆಯಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದ ಮಕ್ಕಳು ನಾಲ್ಕೈದು ವರ್ಷದಿಂದಲೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಅಷ್ಟಕ್ಕೂ ಶಿಕ್ಷಣ ಎಂದರೆ, ನಲಿಯುತ್ತ ಕಲಿಯುವುದಾಗಿದೆ. ಒತ್ತಡವಿಲ್ಲದೆ, ಆಡುತ್ತ, ನಲಿಯುತ್ತ, ಬೆರೆಯುತ್ತ ಜ್ಞಾನ ಸಂಪಾದಿಸುವುದಾಗಿದೆ. ಆದರೆ, ಈಗ ಬಾಂಬ್‌ ಬೆದರಿಕೆಯ ಆತಂಕವೂ ಮಕ್ಕಳಲ್ಲಿ ಮೂಡಿದರೆ, ಅದು ಸುದೀರ್ಘ ಅವಧಿಗೆ ಅವರನ್ನು ಕಾಡಲಿದೆ. ಶೈಕ್ಷಣಿಕ ಏಳಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕವಾಗಿಯೂ ಅವರು ಕುಗ್ಗಿಹೋಗಲಿದ್ದಾರೆ. ಇದರ ಮಧ್ಯೆಯೇ, ಹುಸಿ ಬಾಂಬ್‌ ಬೆದರಿಕೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ, ಈ ಸಮಸ್ಯೆಗೊಂದು ಕ್ಷಿಪ್ರವಾಗಿ ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ, ಶೈಕ್ಷಣಿಕ ವಾತಾವರಣವನ್ನೇ ಹಾಳುತ್ತಿರುವ ‘ಇ-ಮೇಲ್‌ ಭಯೋತ್ಪಾದಕರಿಗೆ’ ಕಠಿಣ ಶಿಕ್ಷೆಯಾಗಬೇಕಿದೆ.

ಇದನ್ನೂ ಓದಿ: ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Exit mobile version