ಭಾರತದ ರಕ್ಷಣಾ ಕ್ಷೇತ್ರಕ್ಕೆ ಬಲ ನೀಡುವ, ಜಲಾಂತರ್ಗಾಮಿ ನೌಕೆಗಳನ್ನು ನಿಗ್ರಹಿಸುವ (Anti-Submarine Missile System) ಸಾಮರ್ಥ್ಯದ ಸೂಪರ್‌ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪೆಡೊ (SMART Missile) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದು ಭಾರತದ ನೌಕಾಪಡೆಯ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿ ಸ್ಮಾರ್ಟ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಸಾಗರ ಪ್ರದೇಶದಲ್ಲಿ ನೌಕಾಪಡೆಯು ವೈರಿಗಳ ಮೇಲೆ ಇನ್ನಷ್ಟು ನಿಗಾ ಇರಿಸಲು, ಕ್ಷಿಪ್ರವಾಗಿ ಕಾರ್ಯಾಚರಣೆ ಕೈಗೊಳ್ಳಲು, ಪ್ರತಿದಾಳಿ ನಡೆಸಲು ನೆರವಾಗಲಿದೆ. ಇದು ಎರಡನೇ ಪರೀಕ್ಷಾರ್ಥ ಉಡಾವಣೆ. ಇದು ಕ್ಯಾನಿಸ್ಟರ್ ಆಧಾರಿತ, 643 ಕಿ.ಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಸಾಗರ ಪ್ರದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಲಿದೆ. ಆಗಸದಲ್ಲಿಯೇ ಶತ್ರುನೌಕೆಗಳನ್ನು ಡಿಟೆಕ್ಟ್ ಮಾಡುವ ತಂತ್ರಜ್ಞಾನ ಹೊಂದಿದೆ.
ಭಾರತದ ವಾಯುಪಡೆ, ನೌಕಾಪಡೆ ಹಾಗೂ ಭೂಸೇನೆಗಳು ಮೂರೂ ಕಳೆದ ಒಂದು ದಶಕದಲ್ಲಿ ಸಾಕಷ್ಟು ಹೊಸ ಶಸ್ತ್ರಾಸ್ತ್ರಗಳನ್ನು ಪಡೆದಿವೆ. ಭಾರತದ ನೌಕಾಪಡೆ ಈಗ ಸಾಕಷ್ಟು ಯುದ್ಧನೌಕೆಗಳು, ಐಎನ್‌ಎಸ್ ವಿಕ್ರಮಾದಿತ್ಯದಂಥ ಜೆಟ್‌ಫೈಟರ್ ಕ್ಯಾರಿಯರ್‌ಗಳು, ಅರಿಹಂತ್‌ನಂತ ಸಬ್‌ಮರೀನ್‌ಗಳನ್ನು ಹೊಂದಿದೆ. ಪ್ರಸ್ತುತ ಇದು ಜಗತ್ತಿನ 7ನೇ ಅತಿ ಪ್ರಬಲ ನೌಕಾಪಡೆಯೆನಿಸಿದೆ. ಈ ಪ್ರಾಬಲ್ಯ ಭಾರತವನ್ನು ಸುತ್ತುವರಿದ ಸಾಗರ ಪ್ರದೇಶವನ್ನು ರಕ್ಷಿಸುವುದಷ್ಟೇ ಅಲ್ಲ, ಇಲ್ಲ ಓಡಾಡುವ ಮಿತ್ರದೇಶಗಳ ನೌಕೆಗಳ ರಕ್ಷಣೆಗೂ ನೆರವಾಗಿದೆ ಎನ್ನುವುದು ನಮ್ಮ ಹೆಮ್ಮೆ. ಇತ್ತೀಚೆಗೆ ನಮ್ಮ ನೌಕಾದಳ ಬಲ್ಗೇರಿಯಾ ಹಾಗೂ ಇರಾನ್‌ನ ಹಡಗುಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ನಮ್ಮ ಸ್ವಾಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನೆಲೆಯಿಂದ ಲಕ್ಷದ್ವೀಪದಲ್ಲಿ ನೌಕಾಪಡೆಯು ʼಐಎನ್‌ಎಸ್‌ಜಟಾಯುʼ ಹೆಸರಿನ ಮತ್ತೊಂದು ನೆಲೆಯನ್ನು ನಿರ್ಮಿಸುವ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್ ಬಾಜ್ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಹೊಸ ಟಾರ್ಪೆಡೊ (SMART Missile) ಕ್ಷಿಪಣಿ ಕೂಡ ಇದಕ್ಕೆ ಪೂರಕ.
ಇತ್ತೀಚೆಗೆ ನಮ್ಮ ಕ್ಷಿಪಣಿ ಬಲ ಇನ್ನಷ್ಟು ಮೈದುಂಬಿಕೊಳ್ಳುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ, ಹಲವು ಪರಮಾಣು ಬಾಂಬ್‌ಗಳನ್ನು (Nuclear warhead) ಏಕಕಾಲಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಅಗ್ನಿ-ವಿ (Agni-V) ಬಹು ಸಿಡಿತಲೆ ಕ್ಷಿಪಣಿಯ ಇತ್ತೀಚಿನ ಹಾರಾಟ ಪರೀಕ್ಷೆ ಇಲ್ಲಿ ಉಲ್ಲೇಖನೀಯ. ಇದೊಂದು ಬಹು ಸ್ವತಂತ್ರವಾಗಿ ಕಾರ್ಯಾಚರಿಸಬಲ್ಲ, ರೀ-ಎಂಟ್ರಿ ತಂತ್ರಜ್ಞಾನ ಹೊಂದಿರುವ ಕ್ಷಿಪಣಿ. ಇದರ ಸಿಡಿತಲೆಯು ಬಾಹ್ಯಾಕಾಶದಲ್ಲಿ ಬೇರ್ಪಟ್ಟು, ಬೆಂಕಿಯ ಚೆಂಡುಗಳು ವಾತಾವರಣವನ್ನು ಮರು ಪ್ರವೇಶಿಸುತ್ತವೆ. ಪ್ರತಿಯೊಂದು ಸಿಡಿತಲೆಯೂ ವಿಭಿನ್ನ ವೇಗದಲ್ಲಿ ಕೆಳಗಿಳಿದು ನೆಲಕ್ಕೆ ಅಪ್ಪಳಿಸುತ್ತದೆ. MIRVಯ ಮುಖ್ಯ ಸಾಮರ್ಥ್ಯವೇ ಮರು-ಪ್ರವೇಶ. ಪ್ರತಿ ಸಿಡಿತಲೆಯೂ ವಿಭಿನ್ನ ವೇಗಗಳು ಮತ್ತು ಪ್ರತ್ಯೇಕ ಗುರಿಗಳನ್ನು ಹೊಂದಿರುವುದರಿಂದ, ಕ್ಷಿಪಣಿ ವಿರೋಧಿ ಗುರಾಣಿಗಳಿಂದ ಅಗ್ನಿ-V ಅನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ. ಇದನ್ನು ʼಮಿಷನ್ ದಿವ್ಯಾಸ್ತ್ರʼ ಎಂದು ಕರೆಯಲಾಗಿದೆ.
ಏಷ್ಯಾ ಉಪಖಂಡದಲ್ಲಿ ಆ ಮೂಲಕ ಶಸ್ತ್ರಾಸ್ತ್ರ ಪೈಪೋಟಿ ಸೃಷ್ಟಿಸುವುದು ನಮ್ಮ ಉದ್ದೇಶವಲ್ಲ. ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಪ್ರಜಾಪ್ರಭುತ್ವ ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶ. ನಾವು ಬಲಿಷ್ಟರಾದಾಗ ನಮ್ ಮಸುತ್ತಮುತ್ತಲಿನವರೂ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳೂ ʼಭಾರತ ನಮ್ಮ ಮಿತ್ರʼ ಎಂದು ಹಾಡಿ ಹೊಗಳುತ್ತವೆ. ಇಸ್ರೇಲ್, ಆಸ್ಟ್ರೇಲಿಯದಂಥ ದೇಶಗಳು ನಮ್ಮೊಂದಿಗೆ ರಕ್ಷಣಾ ಕೊಡುಕೊಳ್ಳುವಿಕೆಗಳನ್ನು ನಡೆಸುತ್ತವೆ. ಫ್ರಾನ್ಸ್‌ನಂಥ ದೇಶಗಳೇ ರಫೇಲ್‌ನಂಥ ಅದ್ಭುತ ಯುದ್ಧಸಾಮರ್ಥ್ಯವನ್ನು ಹೊಂದಿರುವ ಫೈಟರ್ ಜೆಟ್‌ಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತವೆ. ʼಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಶಾಶ್ವತ ಸ್ಥಾನಮಾನ ನೀಡಬೇಕುʼ ಎಂದು ಬ್ರಿಟನ್ ಪ್ರತಿಪಾದಿಸುತ್ತದೆ. ಇದೆಲ್ಲವೂ ಸ್ವಸಾಮರ್ಥ್ಯ ಇದ್ದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಭಾರತ ನಡೆ ಬಲಿಷ್ಠತೆಯತ್ತ ಸಹಜವಾಗಿ ಮುಂದುವರಿದಿದೆ.
ಇದನ್ನೂ ಓದಿ: SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ