ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುವ ಇವೆಂಟ್ ಎಂದರೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ. ವಿಶ್ವ ಕಪ್ನಲ್ಲಿ ಆಡಲಿರುವ ಭಾರತ ಕ್ರಿಕೆಟ್ ತಂಡವನ್ನು ಈ ಹಿಂದೆಯೇ ಪ್ರಕಟಿಸಲಾಗಿತ್ತು; ಈಗ ಅದರಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದ ಗುಜರಾತ್ ಮೂಲದ ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ತಂಡಕ್ಕೆ ಅಲಭ್ಯರಾಗುತ್ತಿದ್ದಂತೆ ತಮಿಳುನಾಡು ಮೂಲದ ಬಲಗೈ ಸ್ಪಿನ್ ಆಲ್ರೌಂಡರ್ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಭಾರತ ತಂಡದ ಮಾಜಿ ವೇಗದ ಬೌಲಿಂಗ್ ಆಲ್ರೌಂಡರ್ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಹಿರಿಯರ ಕ್ರಿಕೆಟ್ ತಂಡ ಆಯ್ಕೆ ಸಮಿತಿ ಈ ಬದಲಾವಣೆ ಮಾಡಿಕೊಂಡಿದೆ. ತಂಡದ ಸದಸ್ಯರ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ(Vistara Editorial).
ಅಕ್ಷರ್ ಪಟೇಲ್ ನಿರ್ಗಮನ ಹಾಗೂ ಅಶ್ವಿನ್ ಆಗಮನದ ಹೊರತಾಗಿಯೂ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಹಿರಿಯ ಬ್ಯಾಟರ್ಗಳು ಹಾಗೂ ಅನುಭವಿ ಹಾಗೂ ಅತ್ಯುತ್ತಮ ಫಾರ್ಮ್ನಲ್ಲಿರುವ ಬೌಲರ್ಗಳಿಂದ ತುಂಬಿರುವ 15 ಸದಸ್ಯರ ಭಾರತ ತಂಡ ವಿಶ್ವ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯ ಹೊಂದಿದೆ. ಭಾರತ ತಂಡದ ಆಟಗಾರರ ಆಯ್ಕೆ ಅತ್ಯಂತ ಸಮತೋಲಿತವಾಗಿದೆ. ಆರಂಭಿಕ ಜೋಡಿಯಾಗಿ ಶುಬ್ಮನ್ ಗಿಲ್, ರೋಹಿತ್ ಶರ್ಮಾ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಕ್ಅಪ್ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಇವರು ಸ್ಫೋಟಕ ಬ್ಯಾಟರ್ ಆಗಿರುವುದರಿಂದ ಸ್ಲಾಗ್ ಓವರ್ಗಳಲ್ಲಿ ಬೆಸ್ಟ್ ಚಾಯ್ಸ್. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ವೇಗದ ಬೌಲಿಂಗ್ ಆಲ್ರೌಂಡರ್ಗಳಾದರೆ, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳು. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪರಿಸ್ಥಿತಿಯಲ್ಲಿ ಚೆನ್ನಾಗಿ ನಿಭಾಯಿಸಬಲ್ಲರು.
ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ವೇಗದ ಬೌಲರ್ಗಳು. ಇವರಲ್ಲಿ ಎಲ್ಲರಿಗೂ ಸಿಡಿದೇಳುವ ಹವ್ಯಾಸವಿದೆ. ಎದುರಾಳಿ ತಂಡದ ಬ್ಯಾಟರ್ಗಳ ಬೆನ್ನೆಲುಬು ಮುರಿಯುವ ತಾಕತ್ತಿದೆ. ಇಶಾನ್ ಕಿಶಾನ್ ವಿಕೆಟ್ ಕೀಪಿಂಗ್ ಬ್ಯಾಟರ್. ಇವರು ಕೆ.ಎಲ್ ರಾಹುಲ್ ಬ್ಯಾಕ್ ಅಪ್. ಆರಂಭಿಕ ಬ್ಯಾಟರ್ ಆಗಿರುವ ಅವರನ್ನು ಯಾವ ರೀತಿ ತಂಡ ಬಳಸಿಕೊಳ್ಳುತ್ತದೆ ಎಂಬ ಮೇಲೆ ಅವರ ಪ್ರದರ್ಶನ ನಿಂತಿದೆ. ಭಾರತ ಉಪಖಂಡ ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಆಯ್ಕೆಯಾಗಿರುವ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯ ಈ ಸ್ಥಿತಿಗೆ ಪೂರಕವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಭಾರತ ತಂಡದ ಪಾಲಿಗೆ ಪ್ಲಸ್ ಪಾಯಿಂಟ್. ಇವರಿಬ್ಬರು ಅನುಭವಿಗಳು ಹಾಗೂ ವಿಶ್ವ ಕಪ್ಗೆ ಪಾತ್ರರಾಗಲೇಬೇಕಾದ ಆಟಗಾರರು. ರಾಹುಲ್ ಉತ್ತಮ ಬ್ಯಾಟರ್ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವುದು ಭಾರತ ತಂಡದ ಪಾಲಿಗೆ ಪೂರಕ ಅಂಶ.
ಅಶ್ವಿನ್ ಕ್ರಿಕೆಟ್ ತಂತ್ರಗಾರಿಕೆಯಲ್ಲಿ ನಿಸ್ಸೀಮರು. ಅವರು ಎದುರಾಳಿ ಬ್ಯಾಟರ್ಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಆಡುವ ಆಟಗಾರ. ಅವರಿಂದಲೂ ತಂಡಕ್ಕೆ ಲಾಭವಿದೆ. ಎಡಗೈ ಬ್ಯಾಟರ್ಗಳು ಹಾಗೂ ಬೌಲರ್ಗಳ ಕೊರತೆಯೇ ಭಾರತಕ್ಕೆ ಸ್ವಲ್ಪ ಹಿನ್ನಡೆ. ಜಡೇಜಾ ಎಡಗೈ ಬ್ಯಾಟರ್ ಆಗಿದ್ದು ಕಾಯಂ ಸ್ಥಾನ ಪಡೆಯಲಿದ್ದಾರೆ. ಇಶಾನ್ ಎಡಗೈ ಬ್ಯಾಟರ್. ಆದರೆ ರಾಹುಲ್ ಇರುವ ಕಾರಣ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಖಾತರಿಯಿಲ್ಲ. ಬೌಲಿಂಗ್ನಲ್ಲೂ ಜಡೇಜಾ ಏಕೈಕ ಎಡಗೈ ಬೌಲರ್. ಇದೂ ಕೂಡ ಭಾರತದ ಪಾಲಿನ ಕೊರತೆ. ಇದನ್ನು ಹೊರತುಪಡಿಸಿದರೆ ಭಾರತ ತಂಡದ ಆಟಗಾರರು ತಪ್ಪುಗಳನ್ನು ಎಸಗಿದರೆ ಅಥವಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಹೋದರೆ ಮಾತ್ರ ವಿಶ್ವ ಕಪ್ ಗೆಲ್ಲುವ ಅವಕಾಶ ಸಿಗದು. ಸದ್ಯದ ಪ್ರದರ್ಶನ ಮುಂದುವರಿಸಿಕೊಂಡು ಹೋದರೆ ಭಾರತ ಕ್ರಿಕೆಟ್ನ ಜಾಗತಿಕ ಒಡೆಯನಾಗುವುದು ಖಾತರಿ. ಒಟ್ಟಾರೆ ಭಾರತದ ಪಿಚ್ ಹಾಗೂ ಇನ್ನಿತರ ಕಂಡೀಷನ್ಗಳನ್ನು ಪರಿಗಣಿಸಿದರೆ ಭಾರತವೇ ಪ್ರಶಸ್ತಿಯ ಫೇವರಿಟ್.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ
ಇದುವರೆಗೂ ಭಾರತ ಎರಡು ಏಕದಿನ ಕ್ರಿಕೆಟ್ ವಿಶ್ವಕಪ್ಗಳನ್ನು ಗೆದ್ದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್ ಧೋನಿ ನೇತೃತ್ವದಲ್ಲಿ 2011ರಲ್ಲಿ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿ ಏಕದಿನ ಕ್ರಿಕೆಟ್ನ ಸಂಪೂರ್ಣ ಬೆರಗನ್ನೂ ಅದ್ಭುತವನ್ನೂ ಸಾದರಪಡಿಸುತ್ತದೆ. ಅನೇಕ ಪ್ರತಿಭೆಗಳ ಆಗಮನ ನಿರ್ಗಮನಗಳು, ಹಳೆಯ ದಾಖಲೆಗಳ ಭಂಗ, ಹೊಸ ದಾಖಲೆಗಳ ಸೃಷ್ಟಿಗಳಿಗೆ ಕಾರಣವಾಗುತ್ತದೆ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್ಗಾಗಿ ಹಸಿದಿದೆ. ನಮ್ಮ ಪ್ರತಿಭೆಗಳು ಇದನ್ನು ಗೆಲ್ಲಬಲ್ಲರು; ಗೆಲ್ಲಲಿ ಎಂದು ಆಶಿಸೋಣ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.