Site icon Vistara News

ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ

Vistara Editorial, Indian Government must act against Khalistani Terrorists

ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಬುಧವಾರ ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ದಾಳಿ (NIA raid) ನಡೆಸಿದೆ. ಮೂಲಗಳ ಪ್ರಕಾರ, ಖಲಿಸ್ತಾನ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹವಾಲಾ ಆಪರೇಟರ್‌ಗಳು, ದರೋಡೆಕೋರರು, ಮತ್ತಿತರ ಸಂಘಟಿತ ಅಪರಾಧ ಜಾಲಗಳಲ್ಲಿ ಸಕ್ರಿಯರಾದವರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ. ಪಂಜಾಬ್‌ನಲ್ಲಿ 30, ರಾಜಸ್ಥಾನದಲ್ಲಿ 13, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2 ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆದಿದೆ. ಭಾರತದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ 19 ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಈ ಹಿಂದೆ ಎನ್‌ಐಎ ಬಿಡುಗಡೆ ಮಾಡಿತ್ತು. ಇಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಇಂಥದೊಂದು ವ್ಯಾಪಕ ಕಾರ್ಯಾಚರಣೆಯ ಅಗತ್ಯವಿತ್ತು(Vistara Editorial).

ಸದ್ಯ ಕೆನಡಾದಲ್ಲಿ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಬಳಿಕ ಬಿಗಡಾಯಿಸಿರುವ ಕೆನಡಾ- ಭಾರತ ಸಂಬಂಧದ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಖಲಿಸ್ತಾನ್‌ ಸಹಾನುಭೂತಿಪರರ ಹೆಡೆಮುರಿ ಕಟ್ಟುವುದು ಎನ್‌ಐಎಯ ತಕ್ಷಣದ ಉದ್ದೇಶವಾಗಿರುವಂತಿದೆ. ಈಗಾಗಲೇ ಕೆನಡಾದಲ್ಲಿರುವ, ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. ನಿಷೇಧಿತ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಅವರ ತಲೆಗೆ ತಲಾ 10 ಲಕ್ಷ ರೂಪಾಯಿ ಹಾಗೂ ಫಿರೋಜ್‌ಪುರದ ಪರ್ಮಿಂದರ್ ಸಿಂಗ್ ಕೈರಾ, ಪಂಜಾಬ್‌ನ ತರ್ನ್ ತರನ್‌ನ ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಎಂಬವರ ತಲೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್‌ಐಎ ಘೋಷಿಸಿದೆ.

ಒಂದು ಕಾಲದಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಲಾಗಿದ್ದ ಖಲಿಸ್ತಾನ್‌ ಚಳುವಳಿಯ ಪರ ಚಟುವಟಿಕೆ ಇತ್ತೀಚಿನ ಒಂದು ದಶಕದಲ್ಲಿ ನಿಧಾನವಾಗಿ ಹೆಚ್ಚುತ್ತ ಬಂದಿತ್ತು. ಕಾಶ್ಮೀರದಲ್ಲಿ ತನ್ನ ಆಟ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಪಂಜಾಬ್‌ನತ್ತ ಪಾಕಿಸ್ತಾನ ತನ್ನ ದೃಷ್ಟಿಯನ್ನು ಹರಿಸಿದ್ದು, ಖಲಿಸ್ತಾನ ಚಳವಳಿಗಾರರಿಗೆ ಬೆಂಬಲ ನೀಡತೊಡಗಿದೆ. ಹೀಗಾಗಿ, ಇದು ಚಿಗುರುತ್ತಿರುವಾಗಲೇ ಚಿವುಟುವುದು ಅತ್ಯಂತ ಉತ್ತಮ. ಬೆಳೆಯಲು ಬಿಟ್ಟರೆ ಯಾವ ಬಗೆಯ ಅನಾಹುತವನ್ನು ಇದು ಎಸಗಬಹುದು ಎಂಬುದನ್ನು ತೊಂಬತ್ತರ ದಶಕದಲ್ಲಿ ನೋಡಿದ್ದಾಗಿದೆ. ಕಳೆದ ವರ್ಷ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ಖಲಿಸ್ತಾನ್‌ ಉಗ್ರರು ದಾಳಿ ನಡೆಸಿದ್ದರು. ಅದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ರಾಕೆಟ್‌ ಲಾಂಚರ್‌ ಮೂಲಕ, ಡ್ರೋನ್‌ಗಳ ಮೂಲಕ ದಾಳಿ ನಡೆಸುವುದೆಂದರೆ ಮಿಲಿಟರಿ ಮಟ್ಟದ ದಾಳಿ. ಇದು ಗಡಿಯಾಚೆಯಿಂದ ಸ್ಮಗಲ್‌ ಆಗಿ ಬಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದರು. ಯುದ್ಧದ ಹಂತಕ್ಕೆ ಖಲಿಸ್ತಾನಿ ಉಗ್ರರು ಮುಟ್ಟಿದ್ದಾರೆ ಎಂದ ಬಳಿಕ ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಸಂಪಾದಕೀಯವನ್ನೂ ಓದಿ: Khalistani Terrorist: ಖಲಿಸ್ತಾನ್- ಗ್ಯಾಂಗ್‌ಸ್ಟರ್ ಜಾಲ ಭೇದಿಸಲು 6 ರಾಜ್ಯಗಳ 50 ಕಡೆ NIA ದಾಳಿ

1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾಗಿ ಸೃಷ್ಟಿಯಾಗಿದ್ದು, ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನ ಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಪಾಕಿಸ್ತಾನ ಮಾತ್ರವಲ್ಲ ಕೆನಡಾವೂ ನೇರವಾಗಿ ಬೆಂಬಲ ನೀಡುತ್ತಿದೆ. ಕೆನಡಾದಲ್ಲಿ ಮಿತಿ ಮೀರಿರುವ ಸಿಖ್ ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಅಲ್ಲಿನ ಆಡಳಿತವಾಗಲೀ, ರಾಜಕೀಯ ಪಕ್ಷಗಳಾಗಲೀ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಅಲ್ಲಿ ಗಣನೀಯವಾಗಿರುವ ಸಿಖ್ಖರು ಹಾಗೂ ಅವರ ಮತ ಬ್ಯಾಂಕ್.‌ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಕೆನಡಾದಿಂದಲೇ ಸಕ್ರಿಯವಾಗಿದ್ದುಕೊಂಡು ಪಂಜಾಬಿನಲ್ಲಿ ಮತ್ತೆ ಭಯೋತ್ಪಾದನೆ ಬಿತ್ತುತ್ತಿದೆ. ಸಾವಿರಾರು ಹಿಂದೂ ಕುಟುಂಬಗಳು ಕೆನಡಾ, ಆಸ್ಟ್ರೇಲಿಯಾದಲ್ಲಿ ವೃತ್ತಿ ಕಾರಣ ನೆಲೆಸಿವೆ. ಇದೀಗ ಇದೇ ಖಲಿಸ್ತಾನಿಗಳೇ ಕೆನಡಾ ಮತ್ತು ಭಾರತದ ನಡುವೆ ಸಂಬಂಧ ಹಳಸಲು ಕಾರಣರಾಗಿದ್ದಾರೆ. ಇವರನ್ನು ಬುಡದಿಂದಲೇ ಚಿವುಟಿ ಹಾಕಿದಾಗಲಷ್ಟೇ ಇವರ ಆವುಟ ತಣ್ಣಗಾಗಲು ಸಾಧ್ಯ.

ಸದ್ಯ ಕೆನಡಾ ವಿಚಾರದಲ್ಲಿ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಡೆಗಳು ಖಲಿಸ್ತಾನಿಗಳಿಗೆ ನಡುಕ ಹುಟ್ಟಿಸಿರುವಂತೆಯೇ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿವೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದವರು ಭಾರತದ ಏಜೆಂಟರು ಎಂಬುದಕ್ಕೆ ಸಾಕ್ಷ್ಯವಿಲ್ಲವಾದರೂ, ಸತ್ತವರು ಆ ಶಿಕ್ಷೆಗೆ ಒಳಗಾಗಬೇಕಿದ್ದವರೇ ಎಂಬುದರಲ್ಲಿ ಸಂಶಯವಿಲ್ಲ. ಹಾಗೆಯೇ ಭಾರತದಲ್ಲಿರುವ ಖಲಿಸ್ತಾನಿ ಉಗ್ರರು ಮತ್ತು ಅವರ ಸಹಾನುಭೂತಿಪರರೂ ಕಾನೂನು ತನಿಖೆ, ನ್ಯಾಯಾಂಗ ವಿಚಾರಣೆ ಹಾಗೂ ಶಿಕ್ಷೆಯ ವ್ಯಾಪ್ತಿಯಡಿಗೆ ಬರಬೇಕು. ಎನ್‌ಐಎ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಆಶಿಸೋಣ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version