ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರದ (Ram Mandir) ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನೀಡಲಾದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ಇದರಲ್ಲಿ ಭಾಗವಹಿಸುವುದಿಲ್ಲ ಎಂದಿದೆ. ಕಾಂಗ್ರೆಸ್ (Congress Party) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೊಂದು ಆರ್‌ಎಸ್‌ಎಸ್ ಕಾರ್ಯಕ್ರಮವಾಗಿದ್ದು, ಹೀಗಾಗಿ ಇವರು ಪಾಲ್ಗೊಳ್ಳುವುದಿಲ್ಲ. ರಾಮ ದೇವಸ್ಥಾನವನ್ನು ಬಿಜೆಪಿ ಹಾಗೂ ಆರೆಸ್ಸೆಸ್ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿವೆ. ಚುನಾವಣಾ ಲಾಭಕ್ಕಾಗಿ, ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ(Vistara Editorial).
ʼಉಳಿದಂತೆ 2019ರಲ್ಲಿ ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ಬದ್ಧವಿದೆ. ಕೋಟ್ಯಂತರ ರಾಮಭಕ್ತರ ಭಾವನೆಗಳನ್ನು ಗೌರವಿಸುತ್ತೇವೆʼ ಎಂದು ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಇದು ಕೇವಲ ಬಾಯುಪಚಾರದ ಮಾತಾಗಿ ಕೇಳಿಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಅದು ಬದ್ಧವಾಗಿರುವುದು ಮತ್ತು ಕೋಟ್ಯಂತರ ಹಿಂದೂಗಳ ಭಾವನೆಯನ್ನು ಅದು ಗೌರವಿಸುವುದೇ ಹೌದಾದರೆ, ಕಾಂಗ್ರೆಸ್ ನಾಯಕರು ರಾಮ ಮಂದಿರದ ವಿಷಯದಲ್ಲಿ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಕೊನೇ ಪಕ್ಷ ತನ್ನ ಪ್ರತಿನಿಧಿಯನ್ನಾದರೂ ಪಕ್ಷ ಕಳಿಸುತ್ತಿತ್ತು. ಆದರೆ ಇದೀಗ ಪಕ್ಷದ ನಾಯಕರ ಬಾಯಿಯಿಂದ ರಾಮ ಮಂದಿರದ ಬಗ್ಗೆ, ಮುಂಚೂಣಿಯಲ್ಲಿ ನಿಂತು ಅದನ್ನು ಕಟ್ಟಿಸುತ್ತಿರುವವರ ಬಗ್ಗೆ ಅಗೌರವಯುತ ಮಾತುಗಳಷ್ಟೇ ಕೇಳಿಬರುತ್ತಿವೆ.
ಶ್ರೀ ರಾಮ ಮಂದಿರದ ಬಗ್ಗೆ ಭಾರತದ ಹಿಂದೂಗಳಲ್ಲಿ ಒಂದು ಅಭೂತಪೂರ್ವ ಎನ್ನಿಸುವಂಥ ಹುಮ್ಮಸ್ಸಿನ ವಾತಾವರಣ ಕಂಡುಬರುತ್ತಿದೆ. ಅಯೋಧ್ಯೆ ಎಂದೆಂದಿಗೂ ಹಿಂದೂಗಳ ಪಾಲಿಗೆ ಯುಗಪುರುಷ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನಪನ್ನು ತರುವ ಪವಿತ್ರ ತಾಣ. ಆಸ್ತಿಕರು ಬದುಕಿನಲ್ಲೊಮ್ಮೆ ಭೇಟಿ ಕೊಡಬೇಕು ಎಂದುಕೊಳ್ಳುವ ಶ್ರದ್ಧಾಕೇಂದ್ರ. ಇಂಥದೇ ಇನ್ನೊಂದು ಶ್ರದ್ಧಾಕೇಂದ್ರವೆಂದರೆ ವಾರಾಣಸಿ. ಮೋದಿಯವರು ವಾರಾಣಸಿಯಿಂದ ಸಂಸದರಾಗಿ ಆಯ್ಕೆಯಾದ ಬಳಿಕ ಇಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಕಾಶಿಯನ್ನು ಅದ್ಭುತವಾದ ಧಾರ್ಮಿಕ ಪ್ರವಾಸೋದ್ಯಮ ತಾಣವಾಗಿ ಮಾಡಿವೆ. ಇಕ್ಕಟ್ಟು ಗಲ್ಲಿಗಳ ನಡುವೆ ಇದ್ದ ದೇವಾಲಯದ ಆವರಣವನ್ನು ವಿಸ್ತರಿಸಿ, ಲಕ್ಷಾಂತರ ಭಕ್ತರು ಯಾವುದೇ ಸಂಕಷ್ಟಗಳಿಲ್ಲದಂತೆ ದರ್ಶನ ಪಡೆಯುವಂತೆ ರೂಪಿಸಲಾಗಿದೆ. ಮೂಲಸೌಕರ್ಯ ಹಾಗೂ ಸಾರಿಗೆ ವ್ಯವಸ್ಥೆಯೂ ಹೆಚ್ಚಿದೆ. ಇದೆಲ್ಲದರ ಪರಿಣಾಮ, ಇಲ್ಲಿ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಶೇ.30ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಇಂಥದೇ ಬೆಳವಣಿಗೆ ಅಯೋಧ್ಯೆಯಲ್ಲೂ ಆಗುವುದರಲ್ಲಿ ಸಂಶಯವಿಲ್ಲ. ಅಂದರೆ ಇಲ್ಲಿ ಆಗುತ್ತಿರುವುದು ಬರೀ ಧಾರ್ಮಿಕವಲ್ಲ, ಸಾಮಾಜಿಕ, ಆರ್ಥಿಕ ಬೆಳವಣಿಗೆ ಕೂಡ. ಇದನ್ನು ಹೀಗೆ ನೋಡಿದಾಗ, ಕಾಂಗ್ರೆಸ್‌ನ ವಿರೋಧ ಎಷ್ಟು ಬಾಲಿಶವಾದುದು ಎಂದು ಅರ್ಥವಾಗುತ್ತದೆ.
ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೂ ಕಾಂಗ್ರೆಸ್‌ನ ನಾಯಕರಿಗೂ ಸಂಬಂಧವಿದೆ. 1986ರಲ್ಲಿ ಬೀಗ ಹಾಕಿಡಲಾಗಿದ್ದ ಬಾಬರಿ ಮಸೀದಿಯ ಆವರಣದ ಬೀಗ ತೆಗೆಸಿ ಇಲ್ಲಿದ್ದ ರಾಮನ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟವರು ಇದೇ ಕಾಂಗ್ರೆಸ್‌ನ ನಾಯಕ, ಆಗಿನ ಪ್ರಧಾನಿ ರಾಜೀವ್ ಗಾಂಧಿ. 1989ರಲ್ಲಿ ನಡೆದ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರೂ ರಾಜೀವ್ ಗಾಂಧಿಯೇ. ರಾಮ ಜನ್ಮಭೂಮಿಯಲ್ಲಿ ಇದ್ದ ಬಾಬರಿ ಮಸೀದಿ ಉದುರಿ ಬಿದ್ದಾಗ ಕಾಂಗ್ರೆಸ್‌ನ ಪಿ.ವಿ ನರಸಿಂಹ ರಾವ್ ಪ್ರಧಾನಿಯಾಗಿದ್ದರು.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ತಿರಸ್ಕರಿಸುವ ಮೂಲಕ ಯಾವ ಸಂದೇಶವನ್ನು ಕಾಂಗ್ರೆಸ್ ನೀಡಹೊರಟಿದೆ ಎಂಬುದು ಸ್ಪಷ್ಟವಾಗುವುದಿಲ್ಲ. ಇದು ಮುಸ್ಲಿಮರು ಓಲೈಕೆಯ ಪ್ರಯತ್ನವೇ? ಆದರೆ ಮುಸ್ಲಿಮರೆಲ್ಲರೂ ರಾಮ ಮಂದಿರಕ್ಕೆ ವಿರೋಧಿಗಳಾಗಿದ್ದಾರೆ ಎಂದು ಕಾಂಗ್ರೆಸ್ ಯಾವ ಆಧಾರದಲ್ಲಿ ತೀರ್ಮಾನಿಸುತ್ತದೆ? ಎಷ್ಟೋ ಮಂದಿ ಮುಸ್ಲಿಮರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಅವರಿಂದ ಯಾವ ವಿರೋಧವೂ ಇರಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಅವರು ಒಪ್ಪಿಕೊಂಡಿದ್ದಾರೆ. ಅಯೋಧ್ಯೆಯ ವಿಷಯದಲ್ಲಿ ಹಿಂದೂ- ಮುಸ್ಲಿಂ ಕಲಹ ಎಂಬುದು ಎಂದೋ ಮುಗಿದುಹೋದ ಮಾತು. ಇಂದು ಅದೇ ವಿಚಾರಕ್ಕಾಗಿ ಕಚ್ಚಾಡಿಕೊಳ್ಳಲು ಯಾರೂ ಸಿದ್ಧರಿಲ್ಲ. ಆದರೂ ಈ ವಿಷಯವನ್ನು ಮತ್ತೆ ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳಬಹುದು ಎಂದು ಕಾಂಗ್ರೆಸ್ ತಿಳಿದಂತಿದೆ. ಇಂಥ ಪ್ರಯತ್ನ ಕಾಂಗ್ರೆಸ್‌ಗೇ ಹಾನಿಕರ. ಸದ್ಯದಲ್ಲೇ ಬರಲಿರುವ ಲೋಕಸಭೆ ಚುನಾವಣೆಯಲ್ಲೂ, ದೀರ್ಘಕಾಲಿಕವಾಗಿಯೂ ಇಂಥ ವರ್ತನೆಗಳು ಕಾಂಗ್ರೆಸ್‌ಗೆ ಕಹಿಮದ್ದು ತಿನಿಸಬಹುದು. ಕಾಂಗ್ರೆಸ್‌ನಲ್ಲಿರುವ ಮುತ್ಸದ್ದಿಗಳು ಸ್ವಲ್ಪ ಯೋಚಿಸಿ ಮುನ್ನಡೆಯುವುದು ವಿಹಿತ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಸೆಡ್ಡು ಹೊಡೆದು ಲಕ್ಷದ್ವೀಪದ ಅಭಿವೃದ್ಧಿ ಸಕಾರಾತ್ಮಕ ಬೆಳವಣಿಗೆ