ಗುಜರಾತ್‌ನ ರಾಜ್‌ಕೋಟ್ (Rajkot) ನಗರದಲ್ಲಿರುವ ಗೇಮಿಂಗ್ ಜೋನ್ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಸೇರಿ 24 ಮಂದಿ ಮೃತಪಟ್ಟಿದ್ದಾರೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯು ಇಡೀ ಕಟ್ಟಡದ ತುಂಬ ಆವರಿಸಿಕೊಂಡಿದ್ದು, ಇನ್ನೂ ಹಲವರು ಅಗ್ನಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಗೇಮಿಂಗ್ ಜೋನ್ ಕಟ್ಟಡದಲ್ಲಿ ವೀಕೆಂಡ್ ಆದ ಕಾರಣ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ 24 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುತ್ತಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ 15-20 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೊಂದು ದಾರುಣ ವಿಷಾದನೀಯ ದುರಂತ.
ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 11 ಮಂದಿ ಮೃತಪಟ್ಟಿದ್ದರು. ಸುಮಾರು 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿತ್ತು. ಈ ಪ್ರಕರಣಗಳಲ್ಲಿ ಆಕಸ್ಮಿಕಕ್ಕೆ ಕಾರಣ ಹುಡುಕುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದು ಅಗತ್ಯ.
ಕಾರ್ಖಾನೆಗಳು, ಸಾರ್ವಜನಿಕ ತಾಣಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮಲ್ಲಿ ಇನ್ನೂ ರೂಢಿಯಾಗಿಲ್ಲ. ನಮ್ಮಲ್ಲಿ ನಗರಗಳು ಜನದಟ್ಟಣೆಯ ಕೇಂದ್ರಗಳಾಗಿವೆ. ಆದರೆ ಸೂಕ್ತ ನಗರ ಯೋಜನೆಯ ಕೊರತೆಯಿದೆ. ಕಟ್ಟಡಗಳ ನಡುವೆ ಸಾಕಷ್ಟು ಸೆಟ್‌ಬ್ಯಾಕ್ ಬಿಡಬೇಕು ಎಂಬುದು ನಿಯಮ. ಈ ನಿಯಮದ ಪಾಲನೆ ಆಗದಿರುವುದರಿಂದ, ಒಂದು ಕಟ್ಟಡಕ್ಕೆ ಹಾನಿ ಅಥವಾ ಅಗ್ನಿ ಆಕಸ್ಮಿಕ ಸಂಭವಿಸಿದರೆ ಇನ್ನೊಂದು ಕಟ್ಟಡಕ್ಕೂ ಹಾನಿಯಾಗುತ್ತದೆ. ಮಾಲ್‌ಗಳು, ನಿಲ್ದಾಣಗಳು, ಹೆಚ್ಚು ಜನ ಸೇರುವ ಸಾರ್ವಜನಿಕ ತಾಣಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು ಕಡ್ಡಾಯ. ಆದರೆ ಎಷ್ಟು ಜನ ಇದನ್ನು ಪಾಲಿಸುತ್ತಾರೆ? ದೊಡ್ಡ ಕಂಪನಿಗಳ ಸಿಬ್ಬಂದಿಗೆ ಆಗಾಗ ಅಣಕು ಅಗ್ನಿ ಸುರಕ್ಷತಾ ಡ್ರಿಲ್‌ಗಳನ್ನು ಮಾಡಿಸುವುದು ಅಗತ್ಯ. ಆದರೆ ತುಂಬಾ ಕಡೆ ಮಾಡಿಸುವುದಿಲ್ಲ.
ಬೆಂಗಳೂರು ನಗರ ಕೂಡ ಅಡ್ಡಾದಿಡ್ಡಿಯಾಗಿ ಬೆಳೆದಿದೆ. ಇಂಥ ಆಕಸ್ಮಿಕಗಳು ನಮಗೆ ಎಚ್ಚರಿಕೆಯ ಪಾಠ ಆಗಬೇಕು. ದುರಂತಗಳು ನಮಗೆ ಸುರಕ್ಷತೆಯ ನಿಯಮಗಳನ್ನು ನೆನಪಿಸಬೇಕು. ಪ್ರತಿ ಕಟ್ಟಡದಲ್ಲೂ ಫೈರ್ ಎಕ್ಸಿಟ್‌ಗಳು, ಅಗ್ನಿಶಾಮಕ ಸಿಲಿಂಡರ್‌ಗಳು ಸೇರಿದಂತೆ ಸುರಕ್ಷತಾ ಸಾಧನಗಳಿರಬೇಕು. ಸೆಕ್ಯುರಿಟಿ ಸಿಬ್ಬಂದಿ ಹಾಗೂ ನಿವಾಸಿಗಳಿಗೆ ತರಬೇತಿ ನೀಡುತ್ತಿರಬೇಕು. ತುರ್ತು ಕಾರ್ಯಾಚರಣೆ ವ್ಯವಸ್ಥೆಯ ಅರಿವಿರಬೇಕು. ಗ್ಯಾಸ್ ಸಿಲಿಂಡರ್‌ಗಳು, ಎಲೆಕ್ಟ್ರಿಕ್ ವ್ಯವಸ್ಥೆಗಳ ಸುರಕ್ಷತೆಯನ್ನು ಕಾಲಕಾಲಕ್ಕೆ ಗಮನಿಸುತ್ತಿರಬೇಕು. ಹೀಗೆಲ್ಲ ಇದ್ದಾಗ ಮಾತ್ರ ಇಂಥ ದುರಂತಗಳಿಂದ ಪಾರಾಗಬಹುದು.
ಇದನ್ನೂ ಓದಿ: Chemical Factory: ಕೆಮಿಕಲ್ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ನಾಲ್ವರ ಸಾವು, 25 ಮಂದಿಗೆ ಗಾಯ